ADVERTISEMENT

ಹಾವೇರಿ: ‘ನಶಾಮುಕ್ತ ಭಾರತ’ಕ್ಕಾಗಿ ಯುವಜನತೆ ಓಟ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:08 IST
Last Updated 12 ಅಕ್ಟೋಬರ್ 2025, 6:08 IST
ಹಾವೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮೋ ರನ್‌’ ಓಟಕ್ಕೆ ಮುಖಂಡರಾದ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಬಿ.ಸಿ. ಪಾಟೀಲ ಅವರು ಚಾಲನೆ ನೀಡಿದರು
ಹಾವೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮೋ ರನ್‌’ ಓಟಕ್ಕೆ ಮುಖಂಡರಾದ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಬಿ.ಸಿ. ಪಾಟೀಲ ಅವರು ಚಾಲನೆ ನೀಡಿದರು   

ಹಾವೇರಿ: ದೇಶದಾದ್ಯಂತ ವ್ಯಾಪಿಸಿರುವ ಡ್ರಗ್ಸ್ ಜಾಲಕ್ಕೆ ಸಿಲುಕಿ ಯುವಜನತೆ ಹಾಳಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮೋ ರನ್’ ಓಟದಲ್ಲಿ ಯುವಕ–ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ‘ನಶಾಮುಕ್ತ ಭಾರತ’ಕ್ಕಾಗಿ ಬಿಜೆಪಿ ಜಿಲ್ಲಾ ಘಟಕದಿಂದ ಈ ಓಟ ಹಮ್ಮಿಕೊಳ್ಳಲಾಗಿತ್ತು.

ನಗರದ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಓಟ, ಹಳೇ ಪಿ.ಬಿ. ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ, ಮೈಲಾರ ಮಹದೇವಪ್ಪ ವೃತ್ತದ ಮೂಲಕ ಗಾಂಧಿ ವೃತ್ತಕದವರೆಗೂ ನಡೆಯಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಓಟದಲ್ಲಿ ಪಾಲ್ಗೊಂಡು ಗುರಿ ತಲುಪುವತ್ತ ಹೆಜ್ಜೆ ಹಾಕಿದರು.

ADVERTISEMENT

2 ಕಿ.ಮೀ. ಓಟದಲ್ಲಿ ಪಾಲ್ಗೊಂಡಿದ್ದ ಕೆಲವರು, ಅತೀ ಕಡಿಮೆ ಅವಧಿಯಲ್ಲಿ ಗುರಿ ತಲುಪಿ ಮೆಡಲ್‌ಗಳನ್ನು ತಮ್ಮದಾಗಿಸಿಕೊಂಡರು. ಓಟದಲ್ಲೂ ಉತ್ಸಾಹ ತೋರಿದ ಹಲವರು, ವಿಶ್ರಾಂತಿ ಪಡೆಯುತ್ತ ನಡೆದುಕೊಂಡೇ ಗುರಿ ತಲುಪಿ ಎಲ್ಲರಿಗೂ ಮಾದರಿಯಾದರು. ಬಿಜೆಪಿಯ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಮಾತ್ರ ನಿಗದಿತ ಮಾರ್ಗದ ಓಟದಲ್ಲಿ ಬಂದು ಗುರಿ ತಲುಪಿಸಿದರು.

ಇನ್ನು ಕೆಲ ಮುಖಂಡರು–ಕಾರ್ಯಕರ್ತರು, ವಾಹನಗಳಲ್ಲಿ ನಿಗದಿತ ಗುರಿ ಇರುವ ಸ್ಥಳಕ್ಕೆ ಬಂದು ಓಟದಲ್ಲಿ ಸೇರಿಕೊಂಡಿದ್ದು ಕಂಡುಬಂತು. ಓಟದ ನಂತರದಲ್ಲಿ ಎಲ್ಲರಿಗೂ ಮೆಡಲ್‌ಗಳನ್ನು ವಿತರಿಸಲಾಯಿತು. ಅಲ್ಪ ಉಪಾಹಾರವನ್ನೂ ನೀಡಲಾಯಿತು.

ರಿಬ್ಬನ್ ಕತ್ತರಿಸಿ ಚಾಲನೆ: ನಮೋ ರನ್‌ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗಿತ್ತು. ನಿಗದಿಗಿಂತಲೂ ಹೆಚ್ಚಿನ ಯುವಕ–ಯುವತಿಯರು ವಾಲ್ಮೀಕಿ ವೃತ್ತಕ್ಕೆ ಬಂದಿದ್ದರು. ಟೀ–ಶರ್ಟ್‌ಗಳ ಕೊರತೆಯೂ ಉಂಟಾಯಿತು. ಹಲವರು ಟೀ–ಶರ್ಟ್‌ ಇಲ್ಲದದಿದ್ದರೂ ಸಾಮಾನ್ಯ ಬಟ್ಟೆಯಲ್ಲಿಯೇ ಓಟದಲ್ಲಿ ಪಾಲ್ಗೊಂಡು, ‘ನಶಾ ಮುಕ್ತ ಭಾರತ’ಕ್ಕಾಗಿ ಘೋಷಣೆ ಕೂಗಿದರು.

ವಾಲ್ಮೀಕಿ ವೃತ್ತದಲ್ಲಿ ಸೇರಿದ್ದ ಜನರು, ಬಸವೇಶ್ವರನಗರದ ರಸ್ತೆಯವರೆಗೂ ಸಾಲುಗಟ್ಟಿ ನಿಂತಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ರಿಬ್ಬನ್ ಕತ್ತರಿಸಿ ಹಸಿರು ಧ್ವಜ ತೋರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ಸಂಸದ ಬಸವರಾಜ ಬೊಮ್ಮಾಯಿ ಅವರು ಗಾಂಧಿವೃತ್ತಕ್ಕೆ ಬಂದು ಓಟದಲ್ಲಿ ಭಾಗಿಯಾದರು.

ದೇಶಪ್ರೇಮದ ಜಾಗೃತಿ ಅವಶ್ಯ: ನಮೋ ರನ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ‘ಇಂದಿನ ಯುವಕರಲ್ಲಿ ದೇಶ ಪ್ರೇಮದ ಜಾಗೃತಿ ಮೂಡಿಸಬೇಕಿದೆ. ಯುವಕರು ತಮ್ಮ ಬದುಕನ್ನು ಅತ್ಯಂತ ಯಶಸ್ವಿಯಾಗಿ ತತ್ವನಿಷ್ಠೆಯಿಂದ ರೂಪಿಸಿಕೊಳ್ಳಬೇಕೆಂಬುದು ಪ್ರಧಾನ ಮಂತ್ರಿಯವರ ಬಯಕೆಯಾಗಿದೆ. ಅದಕ್ಕಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರು ಭಾಗಿಯಾಗುವಂತೆ ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.

‘ನಶಾ ಮುಕ್ತ ಭಾರತ’ ಎಂಬುದು ಪ್ರಧಾನಿಯವರ ಚಿಂತನೆಯಾಗಿದೆ. ಅವರು ಹೋಗುತ್ತಿರುವ ದಾರಿಯೇ ದಿಕ್ಸೂಚಿಯಾಗಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭವ್ಯ ಭಾರತ ಆತ್ಮನಿರ್ಭರ, ನಶಾ ಮುಕ್ತ ಭಾರತ ನಿರ್ಮಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ’ ಎಂದು ಹೇಳಿದರು.

‘ಯಾವುದೇ ಸ್ಥಳದಲ್ಲಿ ಡ್ರಗ್ಸ್ ಮಾರಾಟದ ಮಾಹಿತಿಯಿದ್ದರೆ, ಪೊಲೀಸರಿಗೆ ದೂರು ನೀಡಬೇಕು. ಯಾವುದಾದರೂ ಸಂಸ್ಥೆಯಲ್ಲಿ ಡ್ರಗ್ಸ್ ಮಾರಾಟವಾದರೆ, ಆಡಳಿತ ಮಂಡಳಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಯುವಕರು ಡ್ರಗ್ಸ್‌ನಿಂದ ದೂರವಿರಬೇಕು’ ಎಂದರು.
ಮುಖಂಡರಾದ ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ಭರತ ಬೊಮ್ಮಾಯಿ, ಪರಮೇಶ್ವರಪ್ಪ ಮೇಗಳಮನಿ, ಸಂತೋಷ ಆಲದಕಟ್ಟಿ ಹಾಗೂ ಇತರರು ಇದ್ದರು.

‘ನಶಾ ಮುಕ್ತ ಭಾರತ’ ನಿರ್ಮಿಸಲು ಪ್ರಧಾನ ಮಂತ್ರಿಯವರು ಕರೆ ನೀಡಿದ್ದಾರೆ. ಬುಡಸಮೇತ ಡ್ರಗ್ಸ್ ಜಾಲವನ್ನು ನಿರ್ನಾಮ ಮಾಡಲು ನಾವೆಲ್ಲರೂ ಪಣ ತೊಡಬೇಕು
ಬಿ.ಸಿ. ಪಾಟೀಲ ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.