
ಬ್ಯಾಡಗಿ: ಬ್ಯಾಂಕುಗಳು ಕೃಷಿ ಅಭಿವೃದ್ಧಿಗೆ ನೀಡುವ ಸಾಲವನ್ನು ರೈತರು ಸದ್ಭಳಕೆ ಮಾಡಿಕೊಂಡು ಆರ್ಥಿಕ ಸುಧಾರಣೆಗೆ ಮುಂದಾಗಬೇಕು ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಹೇಳಿದರು.
ಪಟ್ಟಣದ ಕೆಸಿಸಿ ಬ್ಯಾಂಕಿನ ಶಾಖೆಯಲ್ಲಿ ನಬಾರ್ಡ್ ಸಹಕಾರದೊಂದಿಗೆ ಆರ್ಥಿಕ ಸಾಕ್ಷರತೆಯ ಕ್ಯಾಲೆಂಡರ್ ಬಿಡುಗಡೆ ಹಾಗೂ ಹೊಸ ಬೆಳಕು ಕಾರ್ಯಕ್ರಮದಡಿ ಕೃಷಿಯೇತರ ಸಾಲ ಪಡೆದ ಫಲಾನುಭವಿಗಳಿಗೆ ಮಂಗಳವಾರ ಚೆಕ್ ಹಾಗೂ ಟ್ರ್ಯಾಕ್ಟರ್ ಕೀ ವಿತರಿಸಿ ಮಾತನಾಡಿದರು.
ಅತ್ಯಂತ ಸುಭದ್ರ ಸ್ಥಿತಿಯಲ್ಲಿದ್ದ ಕೃಷಿ ಚಟುವಟಿಕೆಗಳು ಕಳೆದೆರಡು ದಶಕಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿವೆ. ಹೀಗಾಗಿ ಬ್ಯಾಂಕ್‌ಗಳು ನೀಡಿದ ಸಾಲಗಳು ಮರುಪಾವತಿಯಾಗದೆ ಹೊಸ ಸಾಲ ಸೌಲಭ್ಯಕ್ಕೆ ಅಡ್ಡಿಯುಂಟಾಗಿದ್ದವು. ಆದರೂ ಸಾಲ ನೀಡುವ ಮೂಲಕ ರೈತರ ಸಂಕಷ್ಟಗಳಿಗೆ ಬ್ಯಾಂಕ್‌ಗಳು ನೆರವಾಗುತ್ತಿವೆ. ಕೆಸಿಸಿ ಬ್ಯಾಂಕ್ ಕಳೆದ ವರ್ಷ ₹69.72 ಲಕ್ಷ ಠೇವಣಿ ಸಂಗ್ರಹಿದ್ದು, ₹29.50 ಲಕ್ಷ ಸಾಲವನ್ನು ನೀಡಲಾಗಿದೆ ಎಂದರು.
ಪ್ರಸಕ್ತ ವರ್ಷ ₹25 ಕೋಟಿ ಲಾಭ ಪಡೆಯುವ ಗುರಿ ಹೊಂದಲಾಗಿದ್ದು, ಟ್ರ್ಯಾಕ್ಟರ್, ಕುರಿಸಾಕಾಣಿಕೆ, ಹೈನುಗಾರಿಕೆ ಇನ್ನಿತರರ ಉದ್ದೇಶಗಳಿಗೆ ಶೇ 3ರ ಬಡ್ಡಿದರದಲ್ಲಿ ₹10 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದರು.
ಮುಖಂಡರಾದ ಶಂಕರಗೌಡ ಪಾಟೀಲ, ದಾನಪ್ಪ ತೋಟದ, ಚಿಕ್ಕಪ್ಪ ಛತ್ರದ, ಜಯಪ್ಪ ಎಲಿ, ಶಾಖಾ ವ್ಯವಸ್ಥಾಪಕ ಬಿ.ಎಸ್.ಮೋಟೆಬೆನ್ನೂರ, ಎಂ.ಎಸ್.ರೇಣುಕಾ, ನಾಗೇಶ ಬ್ಯಾಡಗಿ ಸೇರಿದಂತೆ ತಾಲ್ಲೂಕಿನ ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.