ಹಾವೇರಿ: ಆರೋಗ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ದುರ್ಲಬವಾಗಿದ್ದು, ಜನರ ಆರೋಗ್ಯ ರಕ್ಷಣೆಯೇ ದೊಡ್ಡ ಸವಾಲಾಗಿದೆ. ಸರ್ಕಾರದ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲ ಕಡೆಯೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಜನರ ಆರೋಗ್ಯಕ್ಕೆ ಗ್ಯಾರಂಟಿ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಿದೆ.
ಜ್ವರ, ಕೆಮ್ಮು, ನೆಗಡಿ ಸೇರಿದಂತೆ ವಾತಾವರಣ ಬದಲಾವಣೆಯಿಂದ ಬರುವ ಕಾಯಿಲೆಗಳು ಹಾಗೂ ಇತರೆ ಸೌಮ್ಯ ಸ್ವರೂಪದ ಕೆಲ ಕಾಯಿಲೆಗಳ ಚಿಕಿತ್ಸೆಗೆ ಮಾತ್ರ ಜಿಲ್ಲಾಸ್ಪತ್ರೆ ಸೀಮಿತವಾಗಿದೆ. ಹೃದಯ ಸಂಬಂಧಿ ಕಾಯಿಲೆ ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ಮಾತ್ರ ಲಭ್ಯವಾಗುತ್ತಿದೆ. ಆರೋಗ್ಯ ಚೇತರಿಸಿಕೊಳ್ಳಲು ಅಗತ್ಯವಿರುವ ನಿಗದಿತ ಚಿಕಿತ್ಸೆ ಮಾತ್ರ ಲಭ್ಯವಾಗುತ್ತಿಲ್ಲ.
ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬರುವ ಬಹುಪಾಲು ರೋಗಿಗಳನ್ನು, ಮೂಲ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇದರಿಂದಾಗಿ ಹಾವೇರಿ ಜಿಲ್ಲೆಯಿಂದ ಹುಬ್ಬಳ್ಳಿಯ ಕೆಎಂಸಿ–ಆರ್‌ಸಿ ಆಸ್ಪತ್ರೆಗೆ ಹೋಗುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು 1997ರಲ್ಲಿ ಹಾವೇರಿ ಜಿಲ್ಲೆ ಸ್ಥಾಪನೆ ಆಗಿದೆ. ಜಿಲ್ಲೆಯಾಗಿ 27 ವರ್ಷವಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ಸೂಪರ್ ಸ್ಪೆಷಾಲಿಟಿ ಸೌಕರ್ಯಗಳು ಇದುವರೆಗೂ ಲಭ್ಯವಾಗದಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಸ್ಪತ್ರೆಗೆ ನಿತ್ಯವೂ ನೂರಾರು ಜನರು ಬಂದು ಹೋಗುತ್ತಿದ್ದಾರೆ. ವೈದ್ಯರು, ಲಭ್ಯವಿರುವ ಸೌಕರ್ಯವನ್ನೇ ಬಳಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಉನ್ನತ ಗುಣಮಟ್ಟದ ಸೌಕರ್ಯಗಳು ಇಲ್ಲದಿದ್ದರಿಂದ ತುರ್ತು ಸಂದರ್ಭಗಳಲ್ಲಿ ಅನಿವಾರ್ಯವಾಗಿ ರೋಗಿಗಳನ್ನು ಹುಬ್ಬಳ್ಳಿಗೆ ಕಳುಹಿಸುತ್ತಿದ್ದಾರೆ.
‘ಹಾವೇರಿ ಜಿಲ್ಲೆ, ಹೆಸರಿಗಷ್ಟೇ ಜಿಲ್ಲೆಯಾಗಿದೆ. ವೈದ್ಯಕೀಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮೂಲ ಸೌಕರ್ಯಗಳ ಕೊರತೆಯಿದೆ. ಇದರಿಂದಾಗಿ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಪರಿಹಾರ ಮಾತ್ರ ಸಿಗುತ್ತಿಲ್ಲ’ ಎಂದು ಗುತ್ತಲ ನಿವಾಸಿ ಪ್ರಭುಸ್ವಾಮಿ ಅಳಲು ತೋಡಿಕೊಂಡರು.
‘ಆರೋಗ್ಯ ತೀರಾ ಹದಗೆಟ್ಟ ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ ಹೋದರೆ, ಲಭ್ಯವಿರುವ ಸೌಕರ್ಯದಲ್ಲಿಯೇ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಸೌಕರ್ಯ ಕೊರತೆ ಇರುವುದಾಗಿ ಹೇಳಿ, ಹುಬ್ಬಳ್ಳಿಗೆ ಕಳುಹಿಸುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿಯೂ ಇದೇ ಸ್ಥಿತಿ ಇದೆ’ ಎಂದು ವಸ್ತುಸ್ಥಿತಿ ತೆರೆದಿಟ್ಟರು.
ಕಬ್ಬೂರಿನ ರೈತ ಗಂಗಣ್ಣ, ‘ಸಂಬಂಧಿ ಮಹಿಳೆಯನ್ನು ಇತ್ತೀಚೆಗೆ ಹಾವೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದೆ. ವೈದ್ಯರು ಚೆನ್ನಾಗಿ ಚಿಕಿತ್ಸೆ ನೀಡಿದರು. ಆದರೆ, ಕೆಲ ಸೌಲಭ್ಯಗಳು ಇಲ್ಲವೆಂದು ಹೇಳಿದರು. ನಂತರ, ಅವರೇ ಹುಬ್ಬಳ್ಳಿಗೆ ಹೋಗುವಂತೆ ಸಲಹೆ ನೀಡಿದರು. ಬಳಿಕ ಹುಬ್ಬಳ್ಳಿಗೆ ಹೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು’ ಎಂದು ಹೇಳಿದರು.
‘ಹಾವೇರಿ ಜಿಲ್ಲಾ ಕೇಂದ್ರವಾಗಿದೆ. ಜಿಲ್ಲೆಯ ಜನರ ಆರೋಗ್ಯ ರಕ್ಷಿಸುವುದು ಸರ್ಕಾರದ ಕರ್ತವ್ಯ. ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳಿಗೆ ಹುಬ್ಬಳ್ಳಿಗೆ ಕಳುಹಿಸಿದರೆ ಪರವಾಗಿಲ್ಲ. ಆದರೆ, ಎಲ್ಲದಕ್ಕೂ ಹುಬ್ಬಳ್ಳಿಗೆ ಕಳುಹಿಸುವುದು ತಪ್ಪಬೇಕು. ಹಾವೇರಿ ಜಿಲ್ಲೆಯಲ್ಲಿಯೇ ಪ್ರಾಥಮಿಕ ಹಾಗೂ ಹೆಚ್ಚಿನ ಚಿಕಿತ್ಸೆ ದೊರೆಯುವಂಥ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
‘ರಾಣೆಬೆನ್ನೂರು, ಹಾನಗಲ್, ಶಿಗ್ಗಾವಿ, ಸವಣೂರು, ಬ್ಯಾಡಗಿ, ಹಿರೇಕೆರೂರು ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸೌಕರ್ಯಗಳಿಲ್ಲ. ವೈದ್ಯರ ಕೊರತೆ ಸಾಕಷ್ಟಿದೆ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಶಿಗ್ಗಾವಿಯಲ್ಲಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಸವಣೂರು ಆಸ್ಪತ್ರೆ ಕಟ್ಟಡ ಹಳೆಯದ್ದಾಗಿದೆ.
ಹಾವೇರಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಬ್ಬರೂ ಅನುಭವಿ ಹೃದ್ರೋಗ ತಜ್ಞರಿಲ್ಲ. ಹುಬ್ಬಳ್ಳಿ ಹಾಗೂ ಬೇರೆ ನಗರಗಳಿಂದ ಅತಿಥಿ ವೈದ್ಯರನ್ನು ಆಹ್ವಾನಿಸಿ, ಜನರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 10 ತಜ್ಞ ವೈದ್ಯರಿದ್ದು, ಹೃದಯ ಕಾಯಿಲೆಗೆ ಸಂಬಂಧಪಟ್ಟಂತೆ ಅವರೇ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿಯೇ ನುರಿತ ಹೃದ್ರೋಗ ತಜ್ಞರನ್ನು ನೇಮಿಸಬೇಕು ಎಂಬುದು ಜನರ ಆಗ್ರಹವಾಗಿದೆ.
‘ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಸ್ಪೆಷಲ್ ಸೌಲಭ್ಯವೂ ಇಲ್ಲ. ಇರುವ ಸೌಲಭ್ಯದಲ್ಲಿಯೇ ವೈದ್ಯರು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಸೌಲಭ್ಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸುತ್ತಿದ್ದು, ಯಾವುದಕ್ಕೂ ಸ್ಪಂದನೆ ಸಿಗುತ್ತಿಲ್ಲ’ ಎಂದು ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಾರೆ. ಸಾಮಾನ್ಯ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದೇವೆ. ತೀವ್ರ ಸ್ವರೂಪ ಹಾಗೂ ವಿಶೇಷ ಕಾಯಿಲೆ ಇರುವವರನ್ನು, ಗುಣಮಟ್ಟದ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ’ ಎಂದು ಹೇಳಿದರು.
‘ಪ್ರತಿ ಮಂಗಳವಾರ ಹಾಗೂ 2ನೇ ಮತ್ತು 4ನೇ ಶನಿವಾರದಂದು ಅತಿಥಿ ಹೃದ್ರೋಗ ತಜ್ಞರು ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ರೋಗಿಗಳು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಅವರ ಸಲಹೆಯಂತೆ ಮುಂದುವರಿಯುತ್ತಿದ್ದಾರೆ’ ಎಂದು ತಿಳಿಸಿದರು.
ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಆರಂಭವಾಗಿ ಎರಡು ವರ್ಷವಾಗಿದ್ದು, ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ಮೂರು ವರ್ಷಗಳ ನಂತರ ಮೊದಲ ಬ್ಯಾಚ್ ವಿದ್ಯಾರ್ಥಿಗಳು, ಎಂಬಿಬಿಎಸ್ ವೈದ್ಯರಾಗಿ ಹೊರಗೆ ಬರಲಿದ್ದಾರೆ. ಅವರ ಅಗತ್ಯಕ್ಕೆ ತಕ್ಕಂತೆ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ’ ಎಂದು ವೈದ್ಯರೊಬ್ಬರು ಹೇಳಿದರು.
‘ಹಿಮ್ಸ್‌ನಲ್ಲಿ ಸದ್ಯ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡ ಮಾತ್ರ ಇದೆ. 450 ಬೆಡ್‌ಗಳ ಆಸ್ಪತ್ರೆಯ ಕಟ್ಟಡ ನಿರ್ಮಿಸುವ ಕೆಲಸ ಶೀಘ್ರದಲ್ಲಿಯೇ ಆರಂಭವಾಗಬೇಕಿದೆ. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದ್ದು, ಅದಕ್ಕೆ ಇದುವರೆಗೂ ಉತ್ತರ ಬಂದಿಲ್ಲ’ ಎಂದು ತಿಳಿಸಿದರು.
‘ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಆಧುನಿಕ ಸಲಕರಣೆ ಹಾಗೂ ಉಪಕರಣಗಳ ಅಗತ್ಯತೆ ಇದೆ. ಇರುವ ಸೌಲಭ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಗುಣಮಟ್ಟದ ವೈದ್ಯಕೀಯ ಶಿಕ್ಷಣ ಪಡೆದರೆ ಮಾತ್ರ, ಮುಂದಿನ ದಿನಗಳಲ್ಲಿ ಉತ್ತಮ ವೈದ್ಯರಾಗುತ್ತಾರೆ. ಸೌಲಭ್ಯಗಳ ಕೊರತೆ ಉಂಟಾದರೆ, ಅವರ ಶಿಕ್ಷಣದ ಮೇಲೆ ಪರಿಹಾರ ಬೀರಲಿದೆ’ ಎಂದು ಹೇಳಿದರು.
‘10 ವರ್ಷಗಳ ಬಳಿಕ, ಹಿಮ್ಸ್ ಅಡಿಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮಾಡಬೇಕು. ಈ ಆಸ್ಪತ್ರೆಗೆ ಇಂದಿನಿಂದಲೇ ತಯಾರಿ ನಡೆಯಬೇಕು. ದೂರದೃಷ್ಟಿ ಇಟ್ಟುಕೊಂಡು ಕೆಲಸಗಳನ್ನು ಆರಂಭಿಸಬೇಕು. ಇಲ್ಲದಿದ್ದರೆ, ಮತ್ತಷ್ಟು ಸಮಸ್ಯೆಗಳು ಎದುರಾಗಬಹುದು’ ಎಂದು ತಿಳಿಸಿದರು.
‘ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರಿಂದ, ಆಗಾಗ ಹುಬ್ಬಳ್ಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಚಿಕಿತ್ಸೆ ಸಲುವಾಗಿ ಅಲ್ಲಿಯ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಬರುತ್ತಿದ್ದೇವೆ. ಹಾವೇರಿಯಲ್ಲಿಯೇ ಸಕಲ ಸೌಲಭ್ಯಗಳು ಸಿಕ್ಕರೆ, ಇಲ್ಲಿಯ ಜನರಿಗೆ ಅನುಕೂಲವಾಗಲಿದೆ’ ಎಂದು ಬಸವೇಶ್ವರನಗರದ ನಿವಾಸಿ ಚಂದ್ರಶೇಖರ್ ಹೇಳಿದರು.
ಜಿಲ್ಲಾಸ್ಪತ್ರೆಗೆ ನಿಗದಿಗಿಂತ ಹೆಚ್ಚಿನ ಜನರು ಬಂದು ಹೋಗುತ್ತಾರೆ. ಲಭ್ಯವಿರುವ ಸೌಕರ್ಯ ಬಳಸಿ ಚಿಕಿತ್ಸೆ ನೀಡಲಾಗುತ್ತಿದ್ದು ಮತ್ತಷ್ಟು ಸೌಕರ್ಯಕ್ಕಾಗಿ ಪ್ರಸ್ತಾವ ಸಲ್ಲಿಸುತ್ತಲೇ ಇದ್ದೇವೆಪಿ.ಎಚ್. ಹಾವನೂರು ಹಾವೇರಿ ಜಿಲ್ಲಾ ಶಸ್ತ್ರಚಿಕಿತ್ಸಕ
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಎಲ್ಲ ಸಮಸ್ಯೆಗಳಿಗೆ ನಮ್ಮ ಜಿಲ್ಲೆಯಲ್ಲಿಯೇ ಚಿಕಿತ್ಸೆ ಸಿಗುವಂತಾಗಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕುರಾಮಣ್ಣ ಚಕ್ರಸಾಲಿ ಬ್ಯಾಡಗಿ ನಿವಾಸಿ
ಬಹುತೇಕ ರೋಗಿಗಳನ್ನು ಹುಬ್ಬಳ್ಳಿ ಹಾಗೂ ದಾವಣಗೆರೆಗೆ ಕಳುಹಿಸಲಾಗುತ್ತಿದೆ. ನಮ್ಮಲ್ಲಿಯೇ ಸುಸಜ್ಜಿತ ಸೌಲಭ್ಯಗಳು ಬೇಕು. ಬೇರೆ ಕಡೆ ಕಳುಹಿಸುವ ಪ್ರಮಾಣ ಕಡಿಮೆಯಾಗಬೇಕು108 ಆಂಬುಲೆನ್ಸ್ ಸಿಬ್ಬಂದಿ
ಹಾವೇರಿ ಜಿಲ್ಲೆಯಲ್ಲಿ 22 ಆರೋಗ್ಯ ಕವಚ (108) ಆಂಬುಲೆನ್ಸ್‌ಗಳಿವೆ. ಅಷ್ಟಾದರೂ ಆಂಬುಲೆನ್ಸ್‌ಗಳ ಕೊರತೆ ಕಾಡುತ್ತಿದ್ದು ಇದರಿಂದಾಗಿ ಖಾಸಗಿ ಆಂಬುಲೆನ್ಸ್ ಚಾಲಕರು ಹೆಚ್ಚಿನ ಹಣ ಪಡೆಯುತ್ತಿರುವ ಆರೋಪವಿದೆ. ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವೃದ್ಧೆಯನ್ನು ಖಾಸಗಿ ಆಂಬುಲೆನ್ಸ್‌ನಲ್ಲಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ‘ಜಿಲ್ಲಾಸ್ಪತ್ರೆ ಎದುರು ಖಾಸಗಿ ಆಂಬುಲೆನ್ಸ್‌ಗಳ ತಂಗುದಾಣವಿದೆ. ತುರ್ತು ಚಿಕಿತ್ಸಾ ಘಟಕಕ್ಕೆ ಬರುವ ರೋಗಿಗಳ ಸಂಬಂಧಿಕರು ಅನಿವಾರ್ಯ ಸಂದರ್ಭದಲ್ಲಿ ಖಾಸಗಿ ಆಂಬುಲೆನ್ಸ್ ಮೊರೆ ಹೋಗುತ್ತಿದ್ದಾರೆ. ಖಾಸಗಿಯವರು ಹಾವೇರಿಯಿಂದ ಹುಬ್ಬಳ್ಳಿಗೆ ₹ 3 ಸಾವಿರದಿಂದ ₹ 5 ಸಾವಿರದವರೆಗೆ ಬಾಡಿಗೆ ಪಡೆಯುತ್ತಿದ್ದಾರೆ’ ಎಂದು ಜನರು ದೂರಿದರು. ‘108ಕ್ಕೆ ಕರೆ ಮಾಡಿದರೆ ಆಂಬುಲೆನ್ಸ್ ವಾಹನ ಅಲಭ್ಯವೆಂದು ಹೇಳುತ್ತಾರೆ. ಅತ್ತ ವೈದ್ಯರು ತುರ್ತಾಗಿ ಹುಬ್ಬಳ್ಳಿಗೆ ಕರೆದೊಯ್ಯುವಂತೆ ಸಲಹೆ ನೀಡುತ್ತಾರೆ. ತುರ್ತು ಚಿಕಿತ್ಸೆ ಅಗತ್ಯವಾಗಿದ್ದರಿಂದ ಕೇಳಿದಷ್ಟು ಬಾಡಿಗೆ ನೀಡಿ ಖಾಸಗಿ ವಾಹನ ಕೊಂಡೊಯ್ಯುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಆಂಬುಲೆನ್ಸ್‌ಗಳಿಗೂ ದರ ನಿಗದಿ ಮಾಡಬೇಕು’ ಎಂದು ಜನರು ಹೇಳಿದರು. ಹೆಚ್ಚಿನ ದರದ ಬಗ್ಗೆ ಪ್ರತಿಕ್ರಿಯಿಸಿದ ಖಾಸಗಿ ಆಂಬುಲೆನ್ಸ್ ಚಾಲಕ ‘ರೋಗಿಯನ್ನು ಹುಬ್ಬಳ್ಳಿಗೆ ಕರೆದೊಯ್ದರೆ ವಾಪಸು ಬರುವಾಗ ಖಾಲಿ ಬರಬೇಕು. ಅದಕ್ಕೆ ತಕ್ಕಂತೆ ದರ ಪಡೆಯುತ್ತಿದ್ದೇವೆ’ ಎಂದರು. ’108’ ವಾಹನ ಸಿಬ್ಬಂದಿಯೊಬ್ಬರು ‘ಜಿಲ್ಲಾಸ್ಪತ್ರೆಯಲ್ಲಿ 2 ಆಂಬುಲೆನ್ಸ್ ಇವೆ. ಎರಡೂ ಆಂಬುಲೆನ್ಸ್‌ಗಳು ಹುಬ್ಬಳ್ಳಿಗೆ ಹೋದಾಗ ಜನರು ಖಾಸಗಿ ಆಂಬುಲೆನ್ಸ್ ಮೊರೆ ಹೋಗುತ್ತಾರೆ’ ಎಂದರು.
‘ಜಿಲ್ಲೆಯಲ್ಲಿ ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಮಾತ್ರ ಸಿಗುತ್ತಿದೆ. ಆದರೆ ಇಂಥ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳ ಅಗತ್ಯವಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಬೇಕು’ ಎಂದು ಜನರು ಆಗ್ರಹಿಸಿದರು. ‘ಜಿಲ್ಲಾಸ್ಪತ್ರೆ ಹಾಗೂ ಹಿಮ್ಸ್‌ಗೆ ಬರುವ ರೋಗಿಗಳ ಸಂಖ್ಯೆಗೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸಬೇಕು. ವೈದ್ಯರು ಹಾಗೂ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನುರಿತ ವೈದ್ಯರ ಸಲಹೆಗಳನ್ನು ಪಡೆಯಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.