ಹಾವೇರಿ: ‘ಡೆಂಗಿ ಮಾರಣಾಂತಿಕ ಕಾಯಿಲೆಯಲ್ಲ. ಹೆದರುವ ಅವಶ್ಯಕತೆ ಇಲ್ಲ. ಲಕ್ಷಣಗಳು ಕಂಡುಬಂದ ತಕ್ಷಣ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗಬಹುದು. ಮನೆ, ಶಾಲೆ ಹಾಗೂ ಸುತ್ತಮುತ್ತ ಸ್ವಚ್ಛತೆ ಕಾಪಾಡಿದರೆ ಡೆಂಗಿ ಭಯವಿರುವುದಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಹೇಳಿದರು.
ಡೆಂಗಿ ಹಾಗೂ ಇತರೆ ಆರೋಗ್ಯ ಸಮಸ್ಯೆಗಳ ಬಗೆಗಿನ ಸಂದೇಹ ಹೋಗಲಾಡಿಸುವ ನಿಟ್ಟಿನಲ್ಲಿ ‘ಪ್ರಜಾವಾಣಿ’ ಬುಧವಾರ ಹಮ್ಮಿಕೊಂಡಿದ್ದ ಫೋನ್–ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಓದುಗರ ಪ್ರಶ್ನೆಗಳಿಗೆ ಉತ್ತರಿಸಿದರು.
‘ಈಡಿಸ್ ಈಜಿಪ್ಟೈ ವೈರಾಣುವಿನಿಂದ ಡೆಂಗಿ ಕಾಯಿಲೆ ಬರುತ್ತದೆ. ಕಾಯಿಲೆಗೆ ತುತ್ತಾಗುವ ಶೇ 90ರಷ್ಟು ಮಂದಿ, ಹೊರ ರೋಗಿಗಳ ವಿಭಾಗದ ಚಿಕಿತ್ಸೆ ಮೂಲಕ ಗುಣಮುಖವಾಗುತ್ತಾರೆ. ಶೇ 10ರಷ್ಟು ಜನರಿಗೆ ಮಾತ್ರ ಒಳ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಅಗತ್ಯವಿರುತ್ತದೆ. ಇದರಲ್ಲಿ ಶೇ 1ರಷ್ಟು ಮಂದಿಗೆ ಮಾತ್ರ ತೀವ್ರ ನಿಗಾ ಘಟಕ (ಐಸಿಯು) ಚಿಕಿತ್ಸೆ ಬೇಕಾಗಬಹುದು’ ಎಂದು ಮಾಹಿತಿ ನೀಡಿದರು.
‘ಮಕ್ಕಳು, ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಜಾಗೃತರಾಗಿರಬೇಕು. ಜ್ವರ ಕಾಣಿಸಿಕೊಂಡರೆ, ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಉಚಿತ ಚಿಕಿತ್ಸೆ ಪಡೆಯಬೇಕು. ಜೊತೆಗೆ, ಜ್ವರದ ಪ್ರಕರಣಗಳಲ್ಲಿ ರಕ್ತ ತಪಾಸಣೆಯನ್ನೂ ಉಚಿತವಾಗಿ ಮಾಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.
‘ಡೆಂಗಿ ಪೀಡಿತರು, ಹೆಚ್ಚು ಶುದ್ಧ ನೀರು ಕುಡಿಯಬೇಕು. ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಚೆನ್ನಾಗಿ ಊಟ ಮಾಡಬೇಕು. ಬಿಳಿ ರಕ್ತ ಕಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದಿನಕ್ಕೆ 6 ಗಂಟೆಯಿಂದ 8 ಗಂಟೆಗೊಮ್ಮೆ ಮಾತ್ರೆ ನುಂಗಬೇಕು. ವಿಶ್ರಾಂತಿ ಪಡೆಯಬೇಕು’ ಎಂದರು.
ದೂರವಾಣಿ ಕರೆ ಮಾಡಿದ್ದವರು ಕೇಳಿದ್ದ ಪ್ರಶ್ನೆಗಳು ಹಾಗೂ ರಾಜೇಶ ಅವರು ನೀಡಿದ ಉತ್ತರಗಳ ವಿವರ ಹೀಗಿದೆ.
* ಈಶ್ವರ ಲಮಾಣಿ, ಹಾವೇರಿ/ನರಸಿಂಹಮೂರ್ತಿ ಅಥೋನಿ, ರಟ್ಟೀಹಳ್ಳಿ/ ಸೃಜನ, ತುಮ್ಮಿನಕಟ್ಟಿ: ಡೆಂಗಿ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳೇನು ?
ಡಾ. ರಾಜೇಶ ಸುರಗಿಹಳ್ಳಿ: ಇದು ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡರೆ, ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ. ಡೆಂಗಿ ಸಹ ಹರಡುವುದಿಲ್ಲ. ಸ್ವಚ್ಛತೆಗೆ ಎಲ್ಲರೂ ಒತ್ತು ನೀಡಬೇಕು. ಸೊಳ್ಳೆ ಪರದೆ ಹಾಗೂ ಸೊಳ್ಳೆ ನಾಶಕ ಬಳಸಿದರೆ ಅನುಕೂಲ.
* ಗಣೇಶ, ಸವಣೂರು: ಹಗಲಿನಲ್ಲಿ ಸೊಳ್ಳೆ ಕಚ್ಚಿದರೆ ಡೆಂಗಿ ಬರುತ್ತದೆ. ರಾತ್ರಿ ಕಚ್ಚಿದರೆ, ಯಾವ ಕಾಯಿಲೆ ಬರುತ್ತದೆ ? ಡೆಂಗಿ ಸಾಂಕ್ರಾಮಿಕ ಕಾಯಿಲೆಯಾ?
ಹಗಲಿನಲ್ಲಿ ಕಚ್ಚುವ ಸೊಳ್ಳೆಯಿಂದ ಡೆಂಗಿ ಬರುತ್ತದೆ. ರಾತ್ರಿ ಕಚ್ಚುವ ಸೊಳ್ಳೆಗಳಿಂದ ಮಲೇರಿಯಾ, ಪೈಲೇರಿಯಾ ಹಾಗೂ ಇತರೆ ಕಾಯಿಲೆಗಳು ಹರಡುತ್ತವೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಡೆಂಗಿ ಪೀಡಿತನಿಂದ ಇತರರಿಗೂ ಡೆಂಗಿ ಕಾಯಿಲೆ ಹರಡುವ ಸಾಧ್ಯತೆ ಇದೆ. ಹೀಗಾಗಿ, ಇದೊಂದು ಸಾಂಕ್ರಾಮಿಕ ಕಾಯಿಲೆ ಎನ್ನಲಾಗುತ್ತಿದೆ.
* ವಿಜಯಕುಮಾರ, ಹಾನಗಲ್: ಡೆಂಗಿ ಹರಡುವ ಸೊಳ್ಳೆಯ ಜೀವಿತಾವಧಿ ಎಷ್ಟು ? ಒಂದು ಬಾರಿ ಎಷ್ಟು ಮೊಟ್ಟೆ ಇಡುತ್ತದೆ ?
ಈಡಿಸ್ ಈಜಿಪ್ಟೈ ಸೊಳ್ಳೆಯ ಜೀವಿತಾವಧಿ ಮೂರು ವಾರ ಮಾತ್ರ. ಇದು ಏಕಕಾಲದಲ್ಲಿ 300ರಿಂದ 400 ಮೊಟ್ಟೆ ಇಡುತ್ತದೆ. ಇದೇ ಮೊಟ್ಟೆಗಳು, ಬ್ಯಾರಲ್, ಸೀಮೆಂಟ್ ತೊಟ್ಟಿ ಸೇರಿದಂತೆ ನೀರಿನ ಮೂಲಗಳಿಗೆ ಅಂಟಿಕೊಂಡಿರುತ್ತವೆ. ಬೆಳವಣಿಗೆಗೆ ಪ್ರತಿಕೂಲ ವಾತಾವರಣ ಸಿಕ್ಕರೆ, ಸೊಳ್ಳೆಗಳು ಉತ್ಪತ್ತಿಯಾಗಿ ಒಂದೇ ವಾರದಲ್ಲಿ ಹಾರಾಡಲಾರಂಭಿಸುತ್ತವೆ. ಒಂದು ದಿನಕ್ಕೆ ಒಂದು ಸೊಳ್ಳೆ ಒಂದೂವರೆ ಕಿ.ಮೀ ಹಾರಾಡುವ ಸಾಮರ್ಥ್ಯ ಹೊಂದಿರುತ್ತದೆ.
* ಸುನೀತಾ, ಶಿಗ್ಗಾವಿ: ಡೆಂಗಿ ಹರಡದಂತೆ ಮಕ್ಕಳ ಸುರಕ್ಷತೆ ಹೇಗೆ ಮಾಡಬೇಕು ?
ಡೆಂಗಿ ವೈರಾಣು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಬೇಕಾದರೆ ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕು. ಮಕ್ಕಳಿಗೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು. ಸೊಳ್ಳೆ ಪರದೆ, ಪೂರ್ತಿ ತೋಳಿನ ಅಂಗಿ ಹಾಗೂ ಪ್ಯಾಂಟ್ ಹಾಕಬೇಕು. ಸೊಳ್ಳೆ ಕಚ್ಚದಂತೆ ಕೈ ಕಾಲುಗಳಿಗೆ ಎಣ್ಣೆ ಸಹ ಹಚ್ಚಬಹುದು. ಜ್ವರ ಕಾಣಿಸಿದ ಕೂಡಲೇ ಸಮೀಪದ ಆಸ್ಪತ್ರೆಯ ವೈದ್ಯರಿಗೆ ತೋರಿಸಬೇಕು. ಜ್ವರ ಬಂದಾಗ ಮಕ್ಕಳು ಹೆಚ್ಚು ಮಲಗುತ್ತಾರೆ. ಸುಸ್ತಾಗಿರಬಹುದೆಂದು ಪೋಷಕರು ಸುಮ್ಮನಾಗುತ್ತಾರೆ. ಆ ರೀತಿ ಮಾಡಬಾರದು. ಅದು ತೀವ್ರ ಲಕ್ಷಣ. ಮಗುವನ್ನು ಕೂಡಲೇ ಆಸ್ಪತ್ರೆಗೆ ತೋರಿಸಬೇಕು
* ಮಂಜುನಾಥ, ತಿಳವಳ್ಳಿ: 10 ವರ್ಷದ ಮಗನಿಗೆ ಐದಾರು ದಿನದಿಂದ ಪದೇ ಪದೇ ಜ್ವರ ಬರುತ್ತಿದೆ. ಏನು ಮಾಡಬೇಕು ?
ಕೂಡಲೇ ಆಸ್ಪತ್ರೆಗೆ ಹೋಗಿ ರಕ್ತ ತಪಾಸಣೆ ಮಾಡಿಸಿ. ಮಗುವಿಗೆ ಹೆಚ್ಚು ಶುದ್ಧ ನೀರು, ಶುದ್ಧ ಆಹಾರ ಕೊಡಿ. ಎಲ್ಲ ಜ್ವರವೂ ಡೆಂಗಿ ಜ್ವರವಲ್ಲ. ಭಯಪಡಬೇಡಿ. ವೈದ್ಯರಿಂದ ಚಿಕಿತ್ಸೆ ಪಡೆದರೆ ಮಗ ಗುಣಮುಖನಾಗುತ್ತಾನೆ. ನೀವೇ ವೈದ್ಯರಂತೆ ವರ್ತಿಸಿ ಎಲ್ಲೆಂದರಲ್ಲಿ ಸಿಗುವ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಸ್ವಯಂ ಚಿಕಿತ್ಸೆ ಸರಿಯಲ್ಲ. ಇದರಿಂದ ಜ್ವರ ಕಡಿಮೆಯಾಗುವುದಿಲ್ಲ. ಬೇರೆ ಸಮಸ್ಯೆಗಳು ಎದುರಾಗುತ್ತವೆ.
* ಕೆಂಚಪ್ಪ ತಳವಾರ, ತಿಳವಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗಿ, ಚಿಕುನ್ ಗುನ್ಯಾ ಚಿಕಿತ್ಸೆ ಇದೆಯಾ?
ಎಲ್ಲ ಕಾಯಿಲೆಗಳಿಗೂ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಲಭ್ಯವಿದೆ. ಎಲ್ಲ ಜ್ವರವು ಡೆಂಗಿ ಜ್ವರವಲ್ಲ. ರಕ್ತ ತಪಾಸಣೆಯಿಂದ ಮಾತ್ರ ಖಚಿತಪಡಿಸಿಕೊಳ್ಳಬೇಕು.
* ಅಕ್ಷಯ ಸಿದ್ದಪ್ಪ ಕಡ್ಲಿ, 5ನೇ ತರಗತಿ ವಿದ್ಯಾರ್ಥಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಮ್ಮನಕಟ್ಟಿ : ಡೆಂಗಿಯಿಂದ ಹಲವರು ಸಾಯುತ್ತಿದ್ದಾರೆ. ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ.
ಲಾರ್ವಾ ಉತ್ಪತ್ತಿಯಾಗದಂತೆ ನಾಶಪಡಿಸುವ ಕೆಲಸ ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಪ್ರತಿಯೊಂದು ಮನೆಗೆ ಹೋಗಿ ಸಮೀಕ್ಷೆ ಮಾಡುತ್ತಿದ್ದಾರೆ. ನೀರು ಸಂಗ್ರಹ ಮೂಲಗಳನ್ನು ಪರೀಕ್ಷಿಸುತ್ತಿದ್ದಾರೆ. ಜನರು ಸಹ ಜಾಗೃತಿ ವಹಿಸಬೇಕು. ನೀರು ಸಂಗ್ರಹದ ಪರಿಕರಣಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಮನೆಯೊಳಗೆ ಫಾಗಿಂಗ್ ಮಾಡಲು ಬಂದಾಗ ಅವಕಾಶ ಕಲ್ಪಿಸಬೇಕು.
* ಮಂಜುನಾಥ, ಹಂಸಭಾವಿ: ಜೀವನ ಸಾರ್ಥಕ ಜಾಲತಾಣದಲ್ಲಿ ನೋಂದಣಿ ಮಾಡಿಸಿಕೊಂಡು ದೇಹ ದಾನ ಮಾಡಿದ್ದೇನೆ. ಈಗ ನಾನು ಯಾರನ್ನು ಸಂಪರ್ಕಿಸಬೇಕು?
ಸರ್ಕಾರದ ಯಾವುದೇ ಆಸ್ಪತ್ರಯ ವೈದ್ಯರನ್ನು ಸಂಪರ್ಕಿಸಿದರೆ, ಸೂಕ್ತ ಸಲಹೆ ನೀಡುತ್ತಾರೆ.
* ಎಫ್.ಆರ್. ಹಿರೇಮಠ, ನೆಲವಿಗಿ ತಾಂಡ ಶಾಲೆ ಶಿಕ್ಷಕ: ಇಂದಿನ ವಾತಾವರಣದಲ್ಲಿ ಹಲವು ರೀತಿಯ ಜ್ವರ ಬರುತ್ತಿವೆ. ಇದರಲ್ಲಿ ಡೆಂಗಿ ಜ್ವರವೆಂಬುದನ್ನು ಹೇಗೆ ಪತ್ತೆ ಮಾಡುವುದು
ಎಲ್ಲ ಜ್ವರವೂ ಡೆಂಗಿಯಲ್ಲ. ಜ್ವರವಿರುವ ಮಕ್ಕಳ ರಕ್ತ ತಪಾಸಣೆ ಮಾಡಿಸಿದರೆ, ಯಾವ ಜ್ವರವೆಂಬುದು ಗೊತ್ತಾಗುತ್ತದೆ. ಡೆಂಗಿ ಮಾರಣಾಂತಿಕವಲ್ಲ. ಹೆದರುವ ಅವಶ್ಯಕತೆ ಇಲ್ಲ. ಮಕ್ಕಳು ಹಾಗೂ ಪೋಷಕರಿಗೆ ಅರಿವು ಮೂಡಿಸಿ. ಜಿಲ್ಲೆಯ ಎಲ್ಲ ವಿಜ್ಞಾನ ಶಿಕ್ಷಕರಿಗೆ ಡೆಂಗಿ ಜಾಗೃತಿ ಬಗ್ಗೆ ತರಬೇತಿ ನೀಡಲಾಗಿದೆ. ಪ್ರತಿಯೊಂದು ಶಾಲೆಗೂ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಶಾಲೆಯ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಜ್ವರದ ಕಾರಣಕ್ಕೆ ಯಾವುದಾದರೂ ವಿದ್ಯಾರ್ಥಿ ಶಾಲೆಗೆ ಬಾರದಿದ್ದರೆ, ಅವರ ಪಟ್ಟಿಯನ್ನು ನಮ್ಮ ಸಿಬ್ಬಂದಿಗೆ ನೀಡಿ. ಅವರು ಮನೆಗೆ ಹೋಗಿ ತಪಾಸಣೆ ಮಾಡುತ್ತಾರೆ.
(ನಿರ್ವಹಣೆ: ಸಂತೋಷ ಜಿಗಳಿಕೊಪ್ಪ, ಅಮಿತ ಶೇಟ, ಮಾಲತೇಶ ಇಚ್ಚಂಗಿ)
‘ಫ್ರಿಡ್ಜ್ ಹಿಂಬದಿಯಲ್ಲಿ ಸೊಳ್ಳೆ ಉತ್ಪತ್ತಿ’
‘ಸ್ವಚ್ಛ ನೀರಿನಲ್ಲಿ ಸೊಳ್ಳೆ ಮೊಟ್ಟೆ ಇರಿಸುತ್ತದೆ. ಮನೆಯಲ್ಲಿರುವ ಫ್ರಿಡ್ಜ್ ಹಿಂಭಾಗದಲ್ಲಿ ನೀರು ಜಿನುಗುತ್ತಿರುತ್ತದೆ. ಈ ಭಾಗದಲ್ಲೂ ಸೊಳ್ಳೆ ಮೊಟ್ಟೆ ಇಟ್ಟಿರುವುದು ಕಂಡುಬಂದಿದೆ. ಹೀಗಾಗಿ ಫ್ರಿಡ್ಜ್ ಆಗಾಗ ಸ್ವಚ್ಛಗೊಳಿಸಬೇಕು’ ಎಂದು ಡಾ. ರಾಜೇಶ ಹೇಳಿದರು. ‘ತೆಂಗಿನಕಾಯಿ ಚಿಪ್ಪು ಟಯರ್ ಒಡೆದ ಮಡಿಕೆ ಹಾಗೂ ಇತರೆ ಪರಿಕರಗಳಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ. ಒಂದು ಕಾಯಿನ್ ಮುಳುಗುವಷ್ಟು ನೀರಿದ್ದರೂ ಸೊಳ್ಳೆಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ’ ಎಂದರು
ಡೆಂಗಿ ಲಕ್ಷಣಗಳು
ತೀವ್ರ ಜ್ವರ ವಿಪರೀತ ತಲೆನೋವು ಕಣ್ಣು ಹಿಂಭಾಗದಲ್ಲಿ ನೋವು ಮಾಂಸ ಖಂಡ– ಕೀಲುಗಳಲ್ಲಿ ವಿಪರೀತ ನೋವು
- ಡೆಂಗಿ ವಾರ್‌ರೂಮ್:
ಒಂದೇ ದಿನ 98 ಕರೆ ಡೆಂಗಿ ಸಂಬಂಧಿತ ದೂರುಗಳನ್ನು ಆಲಿಸಲು ಜಿಲ್ಲಾಡಳಿತ ಭವನದ ಎನ್‌ಐಸಿ ಪಕ್ಕದ ಕೊಠಡಿಯಲ್ಲಿ ವಾರ್‌ರೂಮ್ (08375–249102) ತೆರೆಯಲಾಗಿದೆ. ಮಂಗಳವಾರ ಒಂದೇ ದಿನದಲ್ಲಿ 98 ಮಂದಿಗೆ ಕರೆ ಮಾಡಿದ್ದ ಸಿಬ್ಬಂದಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜ್ವರ ಹಗೂ ಇತರೆ ಲಕ್ಷಣ ಇರುವವರು ಹಾಗೂ ತುರ್ತು ಸಹಾಯ ಬೇಕಿರುವವರು ವಾರ್‌ರೂಮ್ ಸಂಪರ್ಕಿಸಬಹುದು.
ಡೆಂಗಿ ಪ್ರಮುಖ ಮಾಹಿತಿ
* ಈಡಿಸ್ ಈಜಿಪ್ಟೈ ಎಂಬ ಸೋಂಕು ಹೊಂದಿರುವ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಡೆಂಗಿ ಬರುತ್ತದೆ.
* ಡೆಂಗಿ ಲಕ್ಷಣಗಳು ಕಂಡುಬಂದರೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ತೋರಿಸಬೇಕು.
* ಶುದ್ಧವಾದ ನೀರಿನಲ್ಲಿ ಈ ಸೊಳ್ಳೆ ಮೊಟ್ಟೆ ಇರಿಸುತ್ತದೆ
* ನೀರು ಸಂಗ್ರಹಿಸಿಡುವ ಬ್ಯಾರಲ್ ಡ್ರಮ್ ಸೀಮೆಂಟ್ ತೊಟ್ಟೆ ಟೈರು ತೆಂಗಿನಕಾಯಿ ಚಿಪ್ಪು ಒಡೆದ ಸಾಮಗ್ರಿಗಳಲ್ಲಿ ನೀರು ನಿಂತು ಅಲ್ಲೇ ಸೊಳ್ಳೆ ಉತ್ಪತ್ತಿ ಆಗುತ್ತದೆ.
* ಡೆಂಗಿ ನಿಯಂತ್ರಣಕ್ಕೆ ಒಳಾಂಗಣ ಹಾಗೂ ಹೊರಾಂಗಣ ಧೂಮೀಕರಣ (ಫಾಗಿಂಗ್) ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.