
ಮೃತ ಯುವತಿ, ಆರೋಪಿತ ಯುವಕ
ಹಾವೇರಿ: ‘ನನ್ನನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಾನೆ’ ಎಂದು ಆರೋಪಿಸಿ ಠಾಣೆ ಮೆಟ್ಟಿಲೇರಿದ್ದ ಸಿಂಧೂರಿ ಪರಮೇಶಪ್ಪ ಪರಣ್ಣನವರ (26) ಎಂಬುವವರು ತಮ್ಮ ಮನೆಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ‘ಸಿಂಧೂರಿ ಸಾವಿಗೆ ಯುವಕ–ಆತನ ಮನೆಯವರು ಹಾಗೂ ಪೊಲೀಸರು ಕಾರಣ’ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.
ರಾಣೆಬೆನ್ನೂರು ತಾಲ್ಲೂಕಿನ ಕುದರಿಹಾಳ ಗ್ರಾಮದಲ್ಲಿರುವ ಆರೋಪಿತ ಯುವಕ ಶರತ್ ನೀಲಪ್ಪನವರ ಮನೆ ಎದುರು ಯುವತಿಯ ಮೃತದೇಹವಿಟ್ಟು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸುತ್ತಿರುವ ಸಂಬಂಧಿಕರು, ‘ನ್ಯಾಯ ಸಿಗುವವರೆಗೂ ಸ್ಥಳದಿಂದ ಹೋಗುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾರೆ.
‘ಸಿಂಧೂರಿ ಹಾಗೂ ಶರತ್, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಲವು ಕಡೆ ಸುತ್ತಾಡಿದ್ದರು. ಮದುವೆಯಾಗುವುದಾಗಿ ಶರತ್ ಭರವಸೆ ನೀಡಿದ್ದ. ಹೀಗಾಗಿ, ತಮ್ಮನ್ನು ಮದುವೆಯಾಗುವಂತೆ ಸಿಂಧೂರಿ ಕೋರಿದ್ದರು. ಅದಕ್ಕೆ ನಿರಾಕರಿಸಿದ್ದ ಶರತ್, ಅಂತರ ಕಾಯ್ದುಕೊಂಡಿದ್ದ. ಇದರಿಂದ ನೊಂದಿದ್ದ ಯುವತಿ, ಮನೆಯವರಿಗೆ ವಿಷಯ ತಿಳಿಸಿದ್ದರು. ನಂತರ, ಕುಟುಂಬದ ಸಮೇತ ಕೆಲ ದಿನಗಳ ಹಿಂದೆಯಷ್ಟೇ ರಾಣೆಬೆನ್ನೂರು ಗ್ರಾಮೀಣ ಠಾಣೆಗೆ ಹೋಗಿದ್ದರು’ ಎಂದು ಪ್ರತಿಭಟನಾನಿರತ ಸಂಬಂಧಿಕರು ಹೇಳಿದರು.
‘ಆರೋಪಿ ಶರತ್ ಹಾಗೂ ಆತನ ಮನೆಯವರು, ಮರಳುಗಾರಿಕೆ ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾರೆ. ಹೀಗಾಗಿ, ಅವರಿಗೆ ಪೊಲೀಸರ ಪರಿಚಯವಿದೆ. ಯುವತಿ ಹಾಗೂ ಕುಟುಂಬದವರು, ಠಾಣೆಗೆ ಹೋದಾಗ ದೂರು ಪಡೆಯಲು ಪೊಲೀಸರು ನಿರಾಕರಿಸಿದ್ದರು. ಠಾಣೆಯಲ್ಲಿಯೇ ರಾಜಿ ಸಂಧಾನ ಮಾಡಲು ಅವಕಾಶ ನೀಡಿದ್ದ ಪೊಲೀಸರು, ಎರಡೂ ಕಡೆಯವರನ್ನು ವಾಪಸು ಕಳುಹಿಸಿದ್ದರು’ ಎಂದು ದೂರಿದರು.
‘ಠಾಣೆಗೆ ಹೋದರೂ ತಮಗೆ ನ್ಯಾಯ ಸಿಗಲಿಲ್ಲವೆಂದು ಯುವತಿ ನೊಂದಿದ್ದರು. ಅದೇ ನೋವಿನಲ್ಲಿಯೇ ತಮ್ಮ ವಾಸದ ಮನೆಯಲ್ಲಿ ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ನ್ಯಾಯಕ್ಕೆ ಆಗ್ರಹಿಸಿ ಯುವತಿ ಮೃತದೇಹವನ್ನು ಯುವಕನ ಮನೆ ಮುಂದೆ ಇರಿಸಿ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದು ಸಂಬಂಧಿಕರು ಮಾಹಿತಿ ನೀಡಿದರು.
‘ಪೊಲೀಸರು ಯುವಕನ ಕುಟುಂಬದಿಂದ ಹಣ ಪಡೆದು ರಾಜಿ ಸಂಧಾನಕ್ಕೆ ಅವಕಾಶ ನೀಡಿರುವ ಸಂಶಯವಿದೆ. ಮಹಿಳಾ ಎಸ್‌ಪಿ ಇರುವ ಜಿಲ್ಲೆಯಲ್ಲಿಯೇ ಯುವತಿಗೆ ಅನ್ಯಾಯವಾಗಿದೆ. ಠಾಣೆಯಲ್ಲಿರುವ ತಪ್ಪಿತಸ್ಥರ ಪೊಲೀಸರನ್ನು ಅಮಾನತು ಮಾಡಬೇಕು. ಯುವತಿಯನ್ನು ಪ್ರೀತಿಸಿ ವಂಚಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಯುವಕ ಹಾಗೂ ಆತನ ಮನೆಯವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು’ ಎಂದು ಸಂಬಂಧಿಕರು ಒತ್ತಾಯಿಸಿದರು.
ಯುವತಿ ಆತ್ಮಹತ್ಯೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಾವೇರಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ, ‘ಯುವತಿ ಹಾಗೂ ಯುವಕನ ಕಡೆಯವರು ಠಾಣೆಗೆ ಬಂದಿದ್ದರು. ತಮ್ಮಲ್ಲಿಯೇ ರಾಜಿ ಸಂಧಾನ ಮಾಡಿಕೊಳ್ಳುವುದಾಗಿ ಇಬ್ಬರೂ ವಾಪಸು ಹೋದ ಬಗ್ಗೆ ಮಾಹಿತಿ ಇದೆ. ಈಗ ಯುವತಿ ಆತ್ಮಹತ್ಯೆ ವಿಚಾರ ಗಮನಕ್ಕೆ ಬಂದಿದೆ. ಏನಾಗಿದೆ ? ಎಂಬುದನ್ನು ವಿಚಾರಣೆ ಮಾಡಲು ಡಿವೈಎಸ್ಪಿ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.