ADVERTISEMENT

ಬ್ಯಾಡಗಿ ಮಾರುಕಟ್ಟೆ: ಹೊಸ ಮೆಣಸಿನಕಾಯಿ ಆವಕ ಆರಂಭ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:18 IST
Last Updated 7 ಅಕ್ಟೋಬರ್ 2025, 2:18 IST
ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಹೊಸ ಮೆಣಸಿನಕಾಯಿ (3,351) ಕ್ವಿಂಟಲ್‌ಗೆ ₹ 15 ಸಾವಿರದಂತೆ ಮಾರಾಟವಾಗಿದ್ದು ಎಪಿಎಂಸಿ ಕಾರ್ಯದರ್ಶಿ ಹಾಗೂ ವರ್ತಕರು ಮೆಣಸಿನಕಾಯಿ ವೀಕ್ಷಿಸಿದರು
ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಹೊಸ ಮೆಣಸಿನಕಾಯಿ (3,351) ಕ್ವಿಂಟಲ್‌ಗೆ ₹ 15 ಸಾವಿರದಂತೆ ಮಾರಾಟವಾಗಿದ್ದು ಎಪಿಎಂಸಿ ಕಾರ್ಯದರ್ಶಿ ಹಾಗೂ ವರ್ತಕರು ಮೆಣಸಿನಕಾಯಿ ವೀಕ್ಷಿಸಿದರು   

ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ದಸರಾ ಹಬ್ಬದ ಬಳಿಕ ರೈತರು ಹೊಸ ಮೆಣಸಿನಕಾಯಿಯನ್ನು ಮಾರಾಟಕ್ಕೆ ತರಲಾರಂಭಿಸಿದ್ದು, ಪ್ರಾಂಗಣದಲ್ಲಿ ಜೀವಕಳೆ ಬಂದಿದೆ.

ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಗೆ ಗೋವಿನಜೋಳ, ಹತ್ತಿ ಹಾಗೂ ಮತ್ತಿತರ ಬೆಳೆಗಳು ಭಾಗಶಃ ನಾಶವಾಗಿದ್ದು, ಮೆಣಸಿನಕಾಯಿ ಸಹ ನೆಲಕಚ್ಚಿದೆ ಎನ್ನಲಾಗಿದೆ. ಬೆಲೆಯಲ್ಲಿ ಏರಿಕೆ ಕಾಣದ ಕಾರಣ ರೈತರು ಮೆಣಸಿನಕಾಯಿ ಬೆಳೆಯಿಂದ ವಿಮುಖರಾಗಿದ್ದಾರೆ ಎನ್ನುವ ಮಾತು ಸಹ ವ್ಯಾಪಾರಸ್ಥರ ವಲಯದಲ್ಲಿ ಕೇಳಿ ಬಂದಿದೆ. ಈಗಾಗಲೇ ಪಟ್ಟಣದ ಸುತ್ತಲಿನ 35ಕ್ಕೂ ಹೆಚ್ಚು ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ಮೆಣಸಿನಕಾಯಿ ಸಂಗ್ರಹವಾಗಿವೆ.

ಕೊಳವೆ ಬಾವಿಯ ನೀರಿನ ಆಶ್ರಯದಲ್ಲಿ ರಾಯದುರ್ಗ ತಾಲ್ಲೂಕಿನ ಸೋಮಲಾಪುರದ ರೈತರಾದ ಲಕ್ಷ್ಮೀಕಾಂತ ರೆಡ್ಡಿ ಮತ್ತು ಹೇಮಂತ ರೆಡ್ಡಿ ಅವರು ಬೆಳೆದ 40 ಚೀಲ (5,531) ಮೆಣಸಿನಕಾಯಿ ಸೋಮವಾರ ಪ್ರತಿ ಕ್ವಿಂಟಲ್‌ಗೆ ₹ 15,005 ದರದಲ್ಲಿ ಮಾರಾಟವಾಗಿವೆ.

ADVERTISEMENT

ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಆದರ್ಶ ಮಾತನಾಡಿ, ‘ಪ್ರಾಂಗಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಮೆಣಸಿನಕಾಯಿ ಹೇರಿಕೊಂಡು ಬರುವ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸುವ ಕಟ್ಟಡವನ್ನು ಶೀಘ್ರ ಆರಂಭಿಸಲಾಗುವುದು. ಈ ಬಾರಿ ಟೆಂಡರ್ ಫಾರ್ಮ್‌ ಬರೆಯುವಾಗ ಯಾವ ಲಾಟಿಗೆ ಯಾವ ರೀತಿಯ ಮೆಣಸಿನಕಾಯಿ ಇದೆ ಎಂಬುದನ್ನು ನಮೂದಿಸುವ ಚಿಂತನೆ ನಡೆಸಲಾಗಿದೆ’ ಎಂದರು.

ಈ ವೇಳೆ ಸಹಾಯಕ ಕಾರ್ಯದರ್ಶಿ ಎಸ್‌.ಪಿ.ಗೌಡರ., ವರ್ತಕರಾದ ಧನಶೆಟ್ರ ಕೊಂಚಿಗೇರಿ, ಚಂದ್ರಣ್ಣ ಅಂಗಡಿ. ಮಾಲತೇಶ ಅರಳಿಮಟ್ಟಿ ಇದ್ದರು.

‘ಕಳೆದ 13 ವರ್ಷಗಳಿಂದ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ಹೊಸ ಮೆಣಸಿನಕಾಯಿ ಮಾರಾಟಕ್ಕೆ ತರುತ್ತಿದ್ದು, ಈ ಹಿಂದೆ ಈ ಮಾದರಿಯ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹ 36 ಸಾವಿರದಂತೆ ಮಾರಾಟವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆ ಬೆಲೆ ನಮೂದಿಸಿರುವುದು ಬೇಸರ ಮೂಡಿಸಿದೆ’ ಎಂದು ರೈತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.