
ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ’ದಲ್ಲಿ ತಂಡಗಳ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಹಾವೇರಿಯ ಡಿಎಆರ್ (ಜಿಲ್ಲಾ ಸಶಸ್ತ್ರ ಮೀಸಲು) ವಿಭಾಗವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕ್ರೀಡಾಕೂಟದ ಕಬಡ್ಡಿ ಹಾಗೂ ರಿಲೇ (4x100) ಸ್ಪರ್ಧೆಯಲ್ಲಿ ಡಿಎಆರ್ ತಂಡವು ಮೊದಲ ಸ್ಥಾನ ಪಡೆದುಕೊಂಡಿದೆ. ವಾಲಿಬಾಲ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಚಾಂಪಿಯನ್ ಆಗಿದೆ.
ವೈಯಕ್ತಿಕ ಸ್ಪರ್ಧೆಗಳಲ್ಲಿ ಪುರುಷರ ವಿಭಾಗದಲ್ಲಿ ಹಾವೇರಿ ಡಿಎಆರ್ ವಿಭಾಗದ ಕಾನ್‌ಸ್ಟೆಬಲ್ ಶರತ್ ಹಾಗೂ ಮಹಿಳೆಯರ ವಿಭಾಗದಲ್ಲಿ ಹಾವೇರಿ ಶಹರ ಠಾಣೆಯ ಕಾನ್‌ಸ್ಟೆಬಲ್ ರಾಜೇಶ್ವರಿ ಚವ್ಹಾಣ ಅವರು ಚಾಂಪಿಯನ್ ಆಗಿದ್ದಾರೆ.
ಚಾಂಪಿಯನ್ ಶರತ್ ಅವರು 200 ಮೀಟರ್ ಓಟ, ಉದ್ದ ಜಿಗಿತದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 100 ಮೀಟರ್ ಓಟ, ಎತ್ತರ ಜಿಗಿತದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಚಾಂಪಿಯನ್ ರಾಜೇಶ್ವರಿ ಅವರು 200 ಮೀಟರ್ ಓಟ ಹಾಗೂ ಎಸ್‌ಎಲ್‌ಆರ್ ರೈಫಲ್ ಶೂಟಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಚಕ್ರ ಎಸೆತ, ಗುಂಡು ಎಸೆತ, ಎತ್ತರ ಜಿಗಿತದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಜಿಲ್ಲಾಧಿಕಾರಿ, ಸಿಇಒ, ಎಸ್‌ಪಿಗೂ ಬಹುಮಾನ: ಐಪಿಎಸ್– ಐಎಎಸ್ ಮಹಿಳಾ ವಿಭಾಗದ ಗುಂಡು ಎಸೆತದಲ್ಲಿ ಜಿ.ಪಂ. ಸಿಇಒ ರುಚಿ ಬಿಂದಲ್ ಅವರು ಮೊದಲ ಸ್ಥಾನ ಪಡೆದರು. ಜಿಲ್ಲಾ ಎಸ್‌ಪಿ ಯಶೋದಾ ವಂಟಗೋಡಿ ಅವರು ಗುಂಡು ಎಸೆತ, ಚಕ್ರ ಎಸೆತ, ಎಸ್‌ಎಲ್‌ಆರ್ ರೈಫಲ್ ಶೂಟಿಂಗ್, 9 ಎಂಎಂ ಪಿಸ್ತೂಲ್ ಶೂಟಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದರು.
ಪುರುಷರ ವಿಭಾಗದ ಗುಂಡು ಎಸೆತದಲ್ಲಿ ಜಿ.ಪಂ. ಕಾರ್ಯದರ್ಶಿ ಪುನೀತ್ ಮೊದಲ ಸ್ಥಾನ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಎರಡನೇ ಸ್ಥಾನ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಅವರು ಮೂರನೇ ಸ್ಥಾನ ಪಡೆದರು.
ಕೆಎಸ್‌ಪಿಎಸ್ ಪುರುಷರ ವಿಭಾಗದ ಜಾವೆಲಿನ್ ಎಸೆತದಲ್ಲಿ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಮೊದಲ ಸ್ಥಾನ ಪಡೆದರು. ಎಸ್‌ಎಲ್‌ಆರ್ ರೈಫಲ್ ಶೂಟಿಂಗ್‌ನಲ್ಲಿ ಡಿವೈಎಸ್ಪಿ ಗುರುಶಾಂತಪ್ಪ ಕೆ.ವಿ. ಅವರು ಮೊದಲ ಸ್ಥಾನ ಪಡೆದರು. 100 ಮೀಟರ್ ಓಟ, ಚಕ್ರ ಎಸೆತ, ಗುಂಡು ಎಸೆತದಲ್ಲಿ ಡಿವೈಎಸ್ಪಿ ಎಂ.ಎಸ್. ಪಾಟೀಲ ಮೊದಲ ಸ್ಥಾನ ಪಡೆದರು.
ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಎಸ್‌ಪಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಇದ್ದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕ್ರೀಡಾಕೂಟದಲ್ಲಿ ಹಾವೇರಿ ಉಪ ವಿಭಾಗ, ಶಿಗ್ಗಾವಿ ಉಪ ವಿಭಾಗ, ಮಹಿಳಾ ಪೊಲೀಸ್ ಪಡೆ, ರಾಣೆಬೆನ್ನೂರು ಉಪ ವಿಭಾಗ, ಜಿಲ್ಲಾ ಸಶಸ್ತ್ರ ಮೀಡಲು ಪಡೆ, ವಿಶೇಷ ಘಟಕ ಸೇರಿದಂತೆ ವಿವಿಧ ವಿಭಾಗದ ಪೊಲೀಸರು ಭಾಗವಹಿಸಿದ್ದರು.
‘ಸದೃಢ ಮನಸ್ಸಿಗೆ ಕ್ರೀಡೆ ಸಹಕಾರಿ’
‘ಸದೃಢವಾದ ದೇಹಕ್ಕೆ ಸದೃಢವಾದ ಮನಸ್ಸು ನೆಲೆಗೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸದೃಢ ದೇಹದ ಜೊತೆಗೆ ಮಾನಸಿಕ ಸದೃಢತೆ ಅವಶ್ಯವಾಗಿದೆ’ ಎಂದು ಪೂರ್ವ ವಲಯದ (ದಾವಣಗೆರೆ) ಐಜಿಪಿ ಬಿ.ಆರ್. ರವಿಕಾಂತೇಗೌಡ ಹೇಳಿದರು. ಪೊಲೀಸ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ‘ಕ್ರೀಡೆಯಲ್ಲಿ ಸೋಲು–ಗೆಲುವು ಸಾಮಾನ್ಯ. ಸೋತವರು ಮುಂದಿನ ಬಾರಿ ಗೆಲ್ಲುತ್ತೇವೆ ಎಂಬ ಆತ್ಮ ವಿಶ್ವಾಸವಿಟ್ಟುಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.