
ಹಾವೇರಿ: ನಗರದ ಹಲವು ಕಡೆಗಳಲ್ಲಿ ರಸ್ತೆಗಳು ಹದಗೆಟ್ಟಿದ್ದು, ಗುಂಡಿಗಳು ಬಿದ್ದು ಜನರ ಸಂಚಾರಕ್ಕೆ ಕಂಟಕ ಎದುರಾಗುತ್ತಿದೆ. ದೊಡ್ಡ ಗಾತ್ರದ ಗುಂಡಿಗಳು ಬಿದ್ದರೂ ಮಳೆಯ ನೆಪ ಹೇಳುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಗುಂಡಿ ಮುಚ್ಚುವ ಕೆಲಸವನ್ನು ಮುಂದೂಡುತ್ತಿದ್ದಾರೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವರ್ತನೆಗೆ ಬೇಸತ್ತಿರುವ ನಗರದ ವೈಭವಲಕ್ಷ್ಮಿ ಪಾರ್ಕ್ ಸಾಯಿ ಬಾಬಾ ದೇವಸ್ಥಾನ ರಸ್ತೆಯ ನಿವಾಸಿಗಳು, ತಾವೇ ಗುಂಡಿಗಳನ್ನು ಮುಚ್ಚಿಸಿ ಆಕ್ರೋಶ ಹೊರಹಾಕಿದ್ದಾರೆ.
‘ವೈಭವಲಕ್ಷ್ಮಿ ಪಾರ್ಕ್‌ನಿಂದ ಹಾನಗಲ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಲವು ತಿಂಗಳಿನಿಂದ ಹಾಳಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು, ಎಲ್ಲೆಂದರಲ್ಲಿ ನೀರು ನಿಂತುಕೊಂಡಿತ್ತು. ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಜನರು, ಗುಂಡಿಯನ್ನು ಗಮನಿಸದೇ ವಾಹನ ಚಲಾಯಿಸಲು ಹೋಗಿ ಆಯತಪ್ಪಿ ಬೀಳುತ್ತಿದ್ದರು’ ಎಂದು ಸ್ಥಳೀಯರು ಹೇಳಿದರು.
‘ಇದು ರಸ್ತೆಯೋ ಅಥವಾ ಗುಂಡಿಯೋ ಎಂಬುದು ಗೊತ್ತಾಗುತ್ತಿರಲಿಲ್ಲ. ಮಕ್ಕಳು, ವೃದ್ಧರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿತ್ತು. ಹೀಗಾಗಿ, ಸ್ಥಳೀಯರೇ ಸೇರಿಕೊಂಡು ಗುಂಡಿ ಮುಚ್ಚಿಸಿದ್ದೇವೆ’ ಎಂದು ತಿಳಿಸಿದರು.
‘ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಸದಸ್ಯರು, ಅಧಿಕಾರಿಗಳಿಗೂ ರಸ್ತೆ ಹಾಳಾದ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ, ರಸ್ತೆ ದುರಸ್ತಿ ಬಗ್ಗೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರ ವರ್ತನೆಯಿಂದ ಬೇಸತ್ತು ಸ್ಥಳೀಯ ನಿವಾಸಿಗಳೇ ಗುಂಡಿ ಮುಚ್ಚಿಸಿದ್ದಾರೆ’ ಎಂದು ಹೇಳಿದರು.
ಪ್ರಕಟಣೆಗೆ ಸೀಮಿತ: ‘ಶಾಸಕ ರುದ್ರಪ್ಪ ಲಮಾಣಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿಲ್ಲವೆಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ನಗರದಲ್ಲಿ ಓಡಾಡಿದರೆ, ಗುಂಡಿ ಬಿದ್ದ ರಸ್ತೆಗಳೇ ಕಣ್ಣಿಗೆ ರಾಚುತ್ತವೆ. ಶಾಸಕರ ಹೇಳಿಕೆಯು ಪ್ರಕಟಣೆಗಷ್ಟೇ ಸೀಮಿತವಾಗಿದೆ’ ಎಂದು ಯುವ ಅಭಿಷೇಕ್ ಉಪ್ಪಿನ್ ದೂರಿದರು.
‘ಹಾವೇರಿ ವಿಧಾನಸಭಾ ಕ್ಷೇತ್ರದ ಬಹುತೇಕ ರಸ್ತೆಗಳು ಹಾಳಾಗಿವೆ. ಜನರೇ ರಸ್ತೆಯಲ್ಲಿರುವ ತಗ್ಗುಗಳನ್ನು ಮುಚ್ಚಿಸುತ್ತಿದ್ದಾರೆ. ಶಾಸಕರ ಅನುದಾನಕ್ಕಿಂತಲೂ ಜನರೇ ಗುಂಡಿ ಮುಚ್ಚಿಸಲು ತಮ್ಮ ಆದಾಯ ಖರ್ಚು ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.