ADVERTISEMENT

ಹಾವೇರಿ: ಪಿಯುಸಿ ಕನ್ನಡ ಭಾಷೆ ಪರೀಕ್ಷೆ; 408 ಗೈರು

ಜಿಲ್ಲೆಯ 25 ಕೇಂದ್ರಗಳಲ್ಲಿ ಪರೀಕ್ಷೆ | 11,520 ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:31 IST
Last Updated 1 ಮಾರ್ಚ್ 2026, 3:31 IST
ಹಾವೇರಿಯ ಕೇಂದ್ರವೊಂದರಲ್ಲಿ ಶನಿವಾರ ಪರೀಕ್ಷೆ ಬರೆದು ವಿದ್ಯಾರ್ಥಿಗಳು ಹೊರಬಂದರು
ಹಾವೇರಿಯ ಕೇಂದ್ರವೊಂದರಲ್ಲಿ ಶನಿವಾರ ಪರೀಕ್ಷೆ ಬರೆದು ವಿದ್ಯಾರ್ಥಿಗಳು ಹೊರಬಂದರು   

ಹಾವೇರಿ: ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನ ನಡೆದ ಕನ್ನಡ ಭಾಷೆ ವಿಷಯದ ಪರೀಕ್ಷೆಗೆ 11,520 ವಿದ್ಯಾರ್ಥಿಗಳು ಹಾಜರಾದರು.
ಜಿಲ್ಲೆಯ 25 ಕೇಂದ್ರಗಳಲ್ಲಿ ಪರೀಕ್ಷೆಯು ಸುಗಮವಾಗಿ ನಡೆಯಿತು. ಕನ್ನಡ ವಿಷಯದ ಪರೀಕ್ಷೆಗೆ 408 ವಿದ್ಯಾರ್ಥಿಗಳು ಗೈರಾದರು.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಶಿಗ್ಗಾವಿ, ಸವಣೂರು, ರಟ್ಟೀಹಳ್ಳಿ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿರುವ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಹಾಗೂ ಪೊಲೀಸರ ಬಂದೋಬಸ್ತ್‌ನಲ್ಲಿ ಪರೀಕ್ಷೆ ನಡೆಯಿತು.

‘ಜಿಲ್ಲೆಯಾದ್ಯಂತ ಪರೀಕ್ಷೆಯು ಸುಗಮವಾಗಿ ನಡೆದಿದೆ. ಯಾವುದೇ ಕೇಂದ್ರದಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ನಕಲು ಹಾಗೂ ಅಕ್ರಮಗಳು ಪತ್ತೆಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಪರೀಕ್ಷೆಯ ಮೊದಲ ದಿನವಾಗಿದ್ದರಿಂದ ಬಹುತೇಕ ವಿದ್ಯಾರ್ಥಿಗಳ ಜೊತೆಯಲ್ಲಿ ಪೋಷಕರು ಕೇಂದ್ರಕ್ಕೆ ಆಗಮಿಸಿದ್ದರು. ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ನಮೂದಾಗಿದೆ ಎಂಬುದನ್ನು ಪರಿಶೀಲಿಸಿದರು. ಕೇಂದ್ರದ ಹೊರಭಾಗದಲ್ಲಿದ್ದ ಪೋಷಕರು, ಮಕ್ಕಳಿಗೆ ಧೈರ್ಯ ತುಂಬಿ ಒಳಗೆ ಕಳುಹಿಸಿದರು. ಕೆಲ ಕೇಂದ್ರಗಳಲ್ಲಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿ ಶುಭ ಕೋರಲಾಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಪರೀಕ್ಷೆಯುದ್ದಕ್ಕೂ ಪೊಲೀಸರು ಕಾವಲು ಕಾಯ್ದರು. ಪರೀಕ್ಷೆ ಸಿಬ್ಬಂದಿ, ನಿಯಮಗಳ ಪ್ರಕಾರ ಶಿಸ್ತಿನಿಂದ ಪರೀಕ್ಷೆ ನಡೆಸಿಕೊಟ್ಟರು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್‍ಗಳನ್ನು ಪೊಲೀಸರ ಬಂದೋಬಸ್ತ್‌ನಲ್ಲಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಯಿತು.

ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈ ಪ್ರದೇಶದಲ್ಲಿಯೂ ಪೊಲೀಸರು ಗಸ್ತು ತಿರುಗಿದರು. ಪರೀಕ್ಷೆ ಮುಗಿಯುತ್ತಿದ್ದಂತೆ ಹಲವು ವಿದ್ಯಾರ್ಥಿಗಳು, ನಗುಮುಖದಲ್ಲಿ ಹೊರಗೆ ಬಂದರು. ಪ್ರಶ್ನೆಪತ್ರಿಕೆ ಬಗ್ಗೆ ಪರಸ್ಪರ ಚರ್ಚೆ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು. ಪೋಷಕರು ಸಹ ಮಕ್ಕಳನ್ನು ಸ್ವಾಗತಿಸಿ, ಪರೀಕ್ಷೆ ಬಗ್ಗೆ ವಿಚಾರಿಸಿದರು.

ಹಾವೇರಿಯ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿದರು

‘ಡಿಡಿಪಿಯು ಮೊಬೈಲ್ ಸ್ವಿಚ್ಡ್‌ ಆಫ್‌’

ಪರೀಕ್ಷೆಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಯು) ಅಶೋಕ ಶಾಸ್ತ್ರಿ ಅವರ ಮೊಬೈಲ್ ಶನಿವಾರ ಸಂಜೆಯಿಂದಲೇ ಸ್ವಿಚ್ಡ್‌ ಆಫ್‌ ಆಗಿತ್ತು.

ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಡಳಿತದ ಅಧಿಕಾರಿಗಳು ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ವಾರ್ತಾ ಇಲಾಖೆಯ ಅಧಿಕಾರಿಗಳ ಕರೆಗೂ ಡಿಡಿಪಿಯು ಪ್ರತಿಕ್ರಿಯಿಸಲಿಲ್ಲ. ಇದರಿಂದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಿ–ಅಂಶಗಳ ಮಾಹಿತಿ ಪಡೆಯಲು ಅಧಿಕಾರಿಗಳು ಪರದಾಡಿದರು. ‘ಡಿಡಿಪಿಯು ಅಶೋಕ ಶಾಸ್ತ್ರಿ ಅವರ ಮೊಬೈಲ್‌ಗೆ ಹತ್ತು ಬಾರಿ ಕರೆ ಮಾಡಿದ್ದೇನೆ. ಅವರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದಾರೆ.

ಇದೇ ಕಾರಣಕ್ಕೆ ಒತ್ತಡ ಬೇಡವೆಂದು ಸ್ವಿಚ್ಡ್ ಆಫ್ ಮಾಡಿರಬಹುದು’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು. ‘ಡಿಡಿಪಿಯು ಅನುಪಸ್ಥಿತಿಯಲ್ಲಿ ಬಸವರಾಜ ಇಟ್ಟಿಗುಡಿ ಎಂಬುವವರು ಪರೀಕ್ಷೆ ಸಿದ್ಧತಾ ಸಭೆಗೆ ಹಾಜರಾಗುತ್ತಿದ್ದರು. ಶನಿವಾರ ಸಂಜೆ ಅಂಕಿ–ಅಂಶಗಳ ಬಗ್ಗೆ ವಿಚಾರಿಸಿದಾಗ ಮಾಹಿತಿ ಗೊತ್ತಿಲ್ಲವೆಂದು ಜಾರಿಕೊಂಡರು. ಈ ವರ್ತನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದು ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.