ADVERTISEMENT

ಹಾವೇರಿ | ಸಿ.ಎಂ. ಸ್ವಾಗತಕ್ಕೆ ಹೊಸ ಡಾಂಬರ್

ಹಾವೇರಿಗೆ ಜ. 7ರಂದು ಮುಖ್ಯಮಂತ್ರಿ ಭೇಟಿ | ಸಿದ್ದರಾಮಯ್ಯರನ್ನು ಮೆಚ್ಚಿಸಲು ತುರ್ತು ಕಾಮಗಾರಿ

ಸಂತೋಷ ಜಿಗಳಿಕೊಪ್ಪ
Published 6 ಜನವರಿ 2026, 2:03 IST
Last Updated 6 ಜನವರಿ 2026, 2:03 IST
ಹಾವೇರಿ ಹಳೇ ಪಿ.ಬಿ.ರಸ್ತೆಯ ಇಜಾರಿಲಕಮಾಪುರದ ಬಸ್‌ ನಿಲ್ದಾಣದಿಂದ ದುಂಡಿಬಸವೇಶ್ವರ ದೇವಸ್ಥಾನದವರೆಗಿನ ರಸ್ತೆಗೆ ಸೋಮವಾರ ಡಾಂಬರ್ ಹಾಕಲಾಯಿತು 
ಹಾವೇರಿ ಹಳೇ ಪಿ.ಬಿ.ರಸ್ತೆಯ ಇಜಾರಿಲಕಮಾಪುರದ ಬಸ್‌ ನಿಲ್ದಾಣದಿಂದ ದುಂಡಿಬಸವೇಶ್ವರ ದೇವಸ್ಥಾನದವರೆಗಿನ ರಸ್ತೆಗೆ ಸೋಮವಾರ ಡಾಂಬರ್ ಹಾಕಲಾಯಿತು    

ಹಾವೇರಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 7ರಂದು ಹಾವೇರಿಗೆ ಬರಲಿದ್ದು, ಅವರನ್ನು ಮೆಚ್ಚಿಸುವುದಕ್ಕಾಗಿ ಅಧಿಕಾರಿಗಳು ತುರ್ತು ಕಾಮಗಾರಿ ಕೈಗೊಂಡಿದ್ದಾರೆ. ಹಲವು ವರ್ಷಗಳಿಂದ ತಗ್ಗು–ಗುಂಡಿಗಳು ಬಿದ್ದಿದ್ದ ರಸ್ತೆಗಳಲ್ಲಿ ಹೊಸದಾಗಿ ಡಾಂಬರ್ ಹಾಕುತ್ತಿದ್ದಾರೆ. ಬಣ್ಣ ಮಾಸಿದ್ದ ರಸ್ತೆ ವಿಭಜಕಗಳಿಗೂ ಸುಣ್ಣ–ಬಣ್ಣ ಬಳಿಯುತ್ತಿದ್ದಾರೆ.

ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ 28 ವರ್ಷವಾದರೂ ಹಾವೇರಿಯ ಹಲವು ಕಡೆಗಳಲ್ಲಿ ಸುಸಜ್ಜಿತ ರಸ್ತೆಗಳಿಲ್ಲ. ಜನರು ನಿತ್ಯವೂ ಓಡಾಡುವ ಮಾರುಕಟ್ಟೆ ರಸ್ತೆಗಳೇ ಹಾಳಾಗಿವೆ. ಜಿಲ್ಲಾ ಕೇಂದ್ರದಿಂದ ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ಜನರು, ನಗರಸಭೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ನೀಡುತ್ತಿದ್ದಾರೆ. ಅದಕ್ಕೆ ಸ್ಪಂದನೆ ಸಿಗುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ. ಇದೀಗ, ಮುಖ್ಯಮಂತ್ರಿ ಬರುವ ಕಾರ್ಯಕ್ರಮ ನಿಮಿತ್ತ ಅಧಿಕಾರಿಗಳು ಸ್ವಯಂ ಆಸಕ್ತಿಯಿಂದ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

ADVERTISEMENT

ಹಾವೇರಿಗೆ ಜ. 7ರಂದು ಹೆಲಿಕಾಪ್ಟರ್ ಮೂಲಕ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಗೆ ಹುಕ್ಕೇರಿಮಠಕ್ಕೆ ತೆರಳಿದ್ದಾರೆ. ನಂತರ, ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ವಾಹನ ಸಂಚರಿಸಲಿರುವ ಮಾರ್ಗದಲ್ಲಿ ಹೊಸ ಡಾಂಬರ್, ಸುಣ್ಣ–ಬಣ್ಣ ಬಳಿಯುವ ಕೆಲಸ ಶುರುವಾಗಿದೆ. ಜೊತೆಗೆ, ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ಪೊಲೀಸರು ತೆರವು ಮಾಡಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ಎದುರಿನ ಹೂವಿನ ಮಾರುಕಟ್ಟೆಗೂ ನಿರ್ಬಂಧ ಹಾಕುತ್ತಿದ್ದಾರೆ.

ಹಳೇ ಪಿ.ಬಿ. ರಸ್ತೆಯ ಇಜಾರಿ ಲಕಮಾಪುರ ವೃತ್ತದಿಂದ ದುಂಡಿಬಸವೇಶ್ವರ ದೇವಸ್ಥಾನದವರೆಗಿನ ರಸ್ತೆಯಲ್ಲಿ ಸಿ.ಎಂ. ವಾಹನ ಸಂಚರಿಸಲಿದೆ. ಈ ರಸ್ತೆ ಹಾಳಾಗಿ ವರ್ಷವೇ ಕಳೆದಿತ್ತು. ಈಗ, ಸೋಮವಾರ ಇಡೀ ರಸ್ತೆಗೆ ಅಧಿಕಾರಿಗಳು ಹೊಸ ಡಾಂಬರ್ ಹಾಕಿಸಿದ್ದಾರೆ. ಜೊತೆಗೆ, ಇತರೆ ರಸ್ತೆಯ ಅಲ್ಲಲ್ಲಿ ಗುಂಡಿಗಳಿಗೆ ತೇಪೆ ಹಾಕುವ ಕೆಲಸವೂ ನಡೆದಿದೆ.

ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದ್ದು, ಅದೇ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಸಿದ್ದರಾಮಯ್ಯ ಬರಲಿದ್ದಾರೆ. ನಂತರ, ಹಳೇ ಪಿ.ಬಿ.ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತ, ಗುತ್ತಲ ರಸ್ತೆ ಮೂಲಕ ಹುಕ್ಕೇರಿಮಠಕ್ಕೆ ಹೋಗಲಿದ್ದಾರೆ. ಅಲ್ಲಿಂದ ವಾಪಸು ಪ್ರವಾಸಿ ಮಂದಿರಕ್ಕೆ ಬಂದು, ಬಳಿಕ ಹಿಮ್ಸ್‌ಗೆ ಹೋಗಲಿದ್ದಾರೆ. ಈ ಮಾರ್ಗದಲ್ಲಿ ಮುಖ್ಯಮಂತ್ರಿ ವಾಹನಕ್ಕೆ ಯಾವುದೇ ಅಡ್ಡಿಯಾಗದಂತೆ, ರಸ್ತೆಯ ಪಕ್ಕ–ಪಕ್ಕದ ಅಂಗಡಿಗಳ ಎದುರು ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದೆ.

ಹಳೇ ಪಿ.ಬಿ.ರಸ್ತೆಯ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೂ ರಸ್ತೆ ವಿಭಜಕಗಳಿಗೆ ಹೊಸದಾಗಿ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಸೋಮವಾರವೂ ಕಾರ್ಮಿಕರು ಬಣ್ಣ ಬಳಿಯುತ್ತಿದ್ದ ದೃಶ್ಯಗಳು ಕಂಡುಬಂತು.

ಹುಕ್ಕೇರಿಮಠದ ಬಳಿಯೂ ಕಾಮಗಾರಿ: ಹುಕ್ಕೇರಿಮಠದ ಸಮೀಪದಲ್ಲಿರುವ ಗುತ್ತಲ ರಸ್ತೆಯ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ (ರೈಲ್ವೆ ನಿಲ್ದಾಣ ರಸ್ತೆ) ಪದೇ ಪದೇ ಕೊಳಚೆ ನೀರು ಹರಿದು ಜನರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಜನರು ದೂರು ನೀಡಿದರೂ ಅದರ ದುರಸ್ತಿಗೆ ನಗರಸಭೆಯವರು ಮುಂದಾಗಿರಲಿಲ್ಲ. ಈಗ ಮುಖ್ಯಮಂತ್ರಿಯವರು ಹುಕ್ಕೇರಿಮಠಕ್ಕೆ ಬರುತ್ತಿದ್ದು, ಕೊಳಚೆ ನೀರು ತೆರವಿಗಾಗಿ ನಗರಸಭೆಯವರು ಕಾಮಗಾರಿ ಆರಂಭಿಸಿದ್ದಾರೆ.

ಸೋಮವಾರ ಜೆಸಿಬಿ ಯಂತ್ರದಿಂದ ಹೊಳು ತೆಗೆದ ಸಿಬ್ಬಂದಿ, ಅದರಲ್ಲಿರುವ ತ್ಯಾಜ್ಯವನ್ನು ಬೇರ್ಪಡಿಸಿದರು. ಹಲವು ಕೇಬಲ್‌ಗಳು ಹಾಗೂ ನಗರದ ತ್ಯಾಜ್ಯವೆಲ್ಲವೂ ಒಂದೇ ಕಡೆ ಜಮೆಗೊಂಡು ಸಮಸ್ಯೆಯಾಗಿರುವುದು ಗೊತ್ತಾಯಿತು. ಇದೆಲ್ಲವನ್ನೂ ಮಂಗಳವಾರ ಸರಿಪಡಿಸುವುದಾಗಿ ನಗರಸಭೆ ಸಿಬ್ಬಂದಿ ಹೇಳಿದರು.

ಅಧಿಕಾರಿಗಳ ವರ್ತನೆಯಿಂದ ಜನರಿಗೆ ಆಶ್ಚರ್ಯ: ಮನವಿ ನೀಡಿದರೂ ರಸ್ತೆ ದುರಸ್ತಿ ಮಾಡದ ಅಧಿಕಾರಿಗಳು, ಈಗ ದಿಢೀರ್ ಹೊಸ ಡಾಂಬರ್ ಹಾಕುತ್ತಿರುವುದನ್ನು ಕಂಡು ಜನರು ಆಶ್ಚರ್ಯಗೊಂಡಿದ್ದಾರೆ.

ಅಧಿಕಾರಿಗಳ ತುರ್ತು ಕಾಮಗಾರಿ ವೀಕ್ಷಿಸುತ್ತಿರುವ ಜನರು, ‘ನಮ್ಮೂರಿನ ರಸ್ತೆಯ ಹೊಸ ಡಾಂಬರೀಕರಣಕ್ಕಾಗಿ, ಮುಖ್ಯಮಂತ್ರಿಯೇ ಬರಬೇಕಾಯಿತು. ಸಿ.ಎಂ. ಮೆಚ್ಚಿಸುವುದಕ್ಕಾಗಿ ಅಧಿಕಾರಿಗಳು ರಸ್ತೆ ನಿರ್ಮಿಸುತ್ತಿದ್ದಾರೆ. ಇದು ಸಹ ಶಾಶ್ವತವಲ್ಲ’ ಎಂದು ವ್ಯಂಗ್ಯವಾಡುತ್ತಿದ್ದಾರೆ.

‘ಹಾವೇರಿ ನಗರದ ಅಭಿವೃದ್ಧಿಗೆ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ. ರಸ್ತೆ, ಕುಡಿಯುವ ನೀರು, ಚರಂಡಿ ಹಾಗೂ ಇತರೆ ಮೂಲಸೌಕರ್ಯಗಳ ಕೊರತೆ ಸಾಕಷ್ಟಿದೆ. ಇದರ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರದ ಯೋಜನೆಗಳಿದ್ದರೂ ಹಾಗೂ ಅನುದಾನ ಬರುತ್ತಿದ್ದರು, ನಗರದಲ್ಲಿ ಮೂಲ ಸೌಕರ್ಯಗಳಿಲ್ಲ. ಮುಖ್ಯಮಂತ್ರಿ ಬಂದಾಗ ಮಾತ್ರ, ಹೊಸ ಡಾಂಬರ್ ಹಾಕಿ ನಂತರ ಅಧಿಕಾರಿಗಳು ಮೌನವಾಗುತ್ತಿದ್ದಾರೆ’ ಎಂದು ಜನರು ದೂರಿದರು.


ಹಾವೇರಿಯ ಎಲ್‌ಐಸಿ ಕಚೇರಿ ಬಳಿ ರಸ್ತೆ ವಿಭಜಕಗಳಿಗೆ ಕಾರ್ಮಿಕರು ಸೋಮವಾರ ಸುಣ್ಣ–ಬಣ್ಣ ಬಳಿದರು

ಹುಕ್ಕೇರಿಮಠಕ್ಕೂ ಸಿ.ಎಂ. ಭೇಟಿ ಹಿಮ್ಸ್‌ನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ

‘ಎರಡು ತಿಂಗಳ ಹಿಂದೆಯೇ ಅನುಮೋದನೆ’ ‘ಉಳಿಕೆ ಮೊತ್ತ ₹ 9.80 ಲಕ್ಷದಲ್ಲಿ ಇಜಾರಿಲಕಮಾಪುರ ಬಳಿ 120 ಮೀಟರ್ ರಸ್ತೆ ನಿರ್ಮಾಣಕ್ಕೆ ಎರಡು ತಿಂಗಳ ಹಿಂದೆಯೇ ಅನುಮೋದನೆ ನೀಡಲಾಗಿತ್ತು. ಟೆಂಡರ್ ಪ್ರಕ್ರಿಯೆ ಮುಗಿದಿದ್ದರಿಂದ ಸೋಮವಾರ ಹೊಸ ಡಾಂಬರ್ ಹಾಕಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ಎಚ್‌.ಕಾಂತರಾಜು ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಹುಕ್ಕೇರಿಮಠದ ಬಳಿಯೂ ಕೊಳಚೆ ನೀರಿನ ಸಮಸ್ಯೆಯಿತ್ತು. ಅದನ್ನೂ ಸರಿಪಡಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.