ADVERTISEMENT

ಹಾವೇರಿ | ನಿಯಮ ಉಲ್ಲಂಘನೆ: ವರ್ಷದಲ್ಲೇ ₹1.11 ಕೋಟಿ ಸಂಗ್ರಹ

ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ * ನಿಗದಿತ ಗುರಿ ಸಾಧಿಸಿದ ಆರ್‌ಟಿಒ

ಸಂತೋಷ ಜಿಗಳಿಕೊಪ್ಪ
Published 28 ಮಾರ್ಚ್ 2025, 7:00 IST
Last Updated 28 ಮಾರ್ಚ್ 2025, 7:00 IST
<div class="paragraphs"><p>ವಾಹನಗಳ ದಾಖಲೆ ಪರಿಶೀಲನೆ ನಡೆಸಿದ ಆರ್‌ಟಿಒ ವಾಹನ ನಿರೀಕ್ಷಕರು</p></div>

ವಾಹನಗಳ ದಾಖಲೆ ಪರಿಶೀಲನೆ ನಡೆಸಿದ ಆರ್‌ಟಿಒ ವಾಹನ ನಿರೀಕ್ಷಕರು

   

ಹಾವೇರಿ: ಮೋಟಾರು ವಾಹನಗಳ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದ ಹಾವೇರಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಹಾಗೂ ಸಿಬ್ಬಂದಿ, ಒಂದೇ ವರ್ಷದಲ್ಲಿ 2,344 ಪ್ರಕರಣ ದಾಖಲಿಸಿಕೊಂಡು ₹ 1.11 ಕೋಟಿ ದಂಡ ಸಂಗ್ರಹಿಸಿದ್ದಾರೆ.

ಸುಪ್ರೀಂಕೋರ್ಟ್ ಅಧೀನದ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ 25ರ ವರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಹಾವೇರಿ ಜಿಲ್ಲಾ ವ್ಯಾಪ್ತಿಯ ನಗರ, ಪಟ್ಟಣ ಹಾಗೂ ತಾಲ್ಲೂಕಿನ ಹಲವು ಕಡೆಗಳಲ್ಲಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಗಿದೆ.

ADVERTISEMENT

ಪರಿಶೀಲನೆ ಸಂದರ್ಭದಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಕಂಡುಬರುತ್ತಿದ್ದಂತೆ, ಅಂಥ ವಾಹನಗಳ ಮಾಲೀಕರಿಂದ ದಂಡ ಆಕರಿಸಲಾಗಿದೆ. ಜೊತೆಗೆ, ತೆರಿಗೆ ಪಾವತಿಸದೇ ರಸ್ತೆಗೆ ಇಳಿಸಿದ್ದ ವಾಹನಗಳನ್ನು ಪತ್ತೆ ಮಾಡಿ ತೆರಿಗೆಯನ್ನೂ ಸಂಗ್ರಹಿಸಿ ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡಲಾಗಿದೆ.

ರಸ್ತೆ ಸುರಕ್ಷತಾ ಸಮಿತಿ ವತಿಯಿಂದ ಹಾವೇರಿ ಜಿಲ್ಲೆಯಲ್ಲಿ ವರ್ಷದ ಅವಧಿಯಲ್ಲಿ 2,318 ಪ್ರಕರಣ ದಾಖಲಿಸುವ ಗುರಿ ನೀಡಲಾಗಿತ್ತು. ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವ ಹಾವೇರಿ ಆರ್‌ಟಿಒ, 2,344 ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಾರ್ಚ್ ಅಂತ್ಯಕ್ಕೂ ಮುನ್ನವೇ ಶೇ 101.12ರಷ್ಟು ಪ್ರಕರಣ ದಾಖಲಿಸಿದ್ದಾರೆ.

‘ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ವಾಹನಗಳ ಮಾಲೀಕರಿಂದ ₹ 85.64 ಲಕ್ಷ ದಂಡ ಹಾಗೂ ತೆರಿಗೆ ಪಾವತಿ ಮಾಡದ ವಾಹನಗಳ ಮಾಲೀಕರಿಂದ ₹ 25.41 ಲಕ್ಷ ತೆರಿಗೆ ಸಂಗ್ರಹಿಸಲಾಗಿದೆ. ಎರಡೂ ಸೇರಿ ಒಟ್ಟು ₹ 1.11 ಕೋಟಿ ಸಂಗ್ರಹವಾಗಿದೆ’ ಎಂದು ಹಾವೇರಿ ಆರ್‌ಟಿಒ ಆರ್. ವಿನಯಾ ಕಾಟೋಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಯೊಂದು ಉಲ್ಲಂಘನೆಗೂ ದಂಡ: ಸದೃಢತೆ ಪ್ರಮಾಣ ಪತ್ರ (ಎಫ್‌.ಸಿ), ವಿಮೆ, ವಾಯು ಮಾಲಿನ್ಯ, ಪರವಾನಗಿ, ಚಾಲನಾ ಪರವಾನಗಿ, ಜಿಪಿಎಸ್ ವ್ಯವಸ್ಥೆ ಸೇರಿದಂತೆ ಮೋಟಾರು ವಾಹನಗಳ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಎಲ್ಲ ಉಲ್ಲಂಘನೆ ಪ್ರಕರಣಗಳಲ್ಲೂ ದಂಡ ವಿಧಿಸಲಾಗುತ್ತಿದೆ.

ಸರ್ಕಾರಕ್ಕೆ ತೆರಿಗೆ ಪಾವತಿ ಮಾಡದೇ ವಂಚಿಸುವ ವಾಹನಗಳ ಮಾಲೀಕರನ್ನು ಪತ್ತೆ ಮಾಡಿ, ಅವರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿ ತೆರಿಗೆ ಸಂಗ್ರಹಿಸುವ ಕೆಲಸವನ್ನು ಆರ್‌ಟಿಒ ಅಧಿಕಾರಿಗಳು ಮಾಡುತ್ತಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ಆಗಾಗ ರಸ್ತೆಗೆ ಇಳಿಯುವ ಆರ್‌ಟಿಒ ಕಚೇರಿಯ ವಾಹನ ನಿರೀಕ್ಷಕರು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಉಲ್ಲಂಘನೆಗಳು ಕಂಡುಬಂದಾಗ, ದಂಡ ವಿಧಿಸುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ವಾಹನಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಗೂ ಮುಂದಾಗುತ್ತಿದ್ದಾರೆ.

ಬೈಕ್‌, ಕಾರು, ತ್ರಿಚಕ್ರ, ಬಸ್‌, ಕ್ಯಾಬ್, ಕಾಂಟ್ರಾಕ್ಟ್‌ ಕ್ಯಾರೇಜ್, ಟ್ಯಾಕ್ಸಿ, ಲಘು ವಾಹನ, ಭಾರೀ ವಾಹನ ಸೇರಿದಂತೆ ಎಲ್ಲ ಪ್ರಕಾರದ ವಾಹನಗಳಿಗೂ ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘಿಸಿದ ಪ್ರಯಾಣಿಕ ವಾಹನಗಳಿಂದಲೂ ದಂಡ ಸಂಗ್ರಹಿಸಲಾಗಿದೆ.

ಈ ಹಿಂದಿನ ಆರ್‌ಟಿಒ ವಾಸೀಂ ಮುದ್ದೇಬಿಹಾಳ ಅವರ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದವು. ಅವರ ವರ್ಗಾವಣೆ ನಂತರ ಅಧಿಕಾರ ವಹಿಸಿಕೊಂಡಿರುವ ಆರ್. ವಿನಯಾ ಕಾಟೋಕರ್ ಅವರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ನಿಗದಿತ ಗುರಿಗಿಂತಲೂ ಹೆಚ್ಚಿನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ
ಆರ್. ವಿನಯಾ ಕಾಟೋಕರ್ ಹಾವೇರಿ ಆರ್‌ಟಿಒ
9515 ವಾಹನ ಪರಿಶೀಲನೆ: 66 ಜಪ್ತಿ
‘ಮೋಟಾರು ವಾಹನಗಳ ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಕಾರ್ಯಾಚರಣೆ ಸಂದರ್ಭದಲ್ಲಿ 9515 ವಾಹನಗಳನ್ನು ಪರಿಶೀಲಿಸಲಾಗಿದೆ. 66 ವಾಹನಗಳನ್ನು ಜಪ್ತಿ ಮಾಡಿ ಅವುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಆರ್‌ಟಿಒ ಕಚೇರಿ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.