ಹಾವೇರಿ: ‘ಎಫ್‌ಆರ್‌ಪಿ ದರದನ್ವಯ ರೈತರಿಗೆ ಬಾಕಿ ಹಣ ನೀಡಬೇಕು’ ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಸೋಮವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
ತಾಲ್ಲೂಕಿನ ಸಂಗೂರು ಬಳಿ ಇರುವ ಜಿ.ಎಂ. ಶುಗರ್ಸ್ ಕಾರ್ಖಾನೆಯ ಮೂರು ಗೇಟ್ ಬಂದ್ ಮಾಡಿರುವ ರೈತರು, ಸಕ್ಕರೆ ಸಾಗಣೆ ಲಾರಿಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಬಾಕಿ ಹಣ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರವೂ ಕಾರ್ಖಾನೆಯಲ್ಲಿ ಸೇರಿದ್ದ ರೈತರು, ಸಕ್ಕರೆ ಸಾಗಣೆ ಲಾರಿಗಳ ಎದುರು ನಿಂತು ಪ್ರತಿಭಟನೆ ನಡೆಸಿದರು.
‘2024–25 ಹಂಗಾಮಿನಲ್ಲಿ ಕಾರ್ಖಾನೆಯಲ್ಲಿ 2 ಲಕ್ಷ ಟನ್ ಕಬ್ಬು ಅರೆಯಲಾಗಿದೆ. ಈ ವರ್ಷದ ಎಫ್‌ಆರ್‌ಪಿ ಪ್ರಕಾರ ಪ್ರತಿ ಟನ್‌ಗೆ ₹ 3,151 ನೀಡಬೇಕು. ಆದರೆ, ಕಾರ್ಖಾನೆಯವರು ಕೇವಲ ₹ 3,035 ನೀಡಿದ್ದಾರೆ. ಉಳಿದ ₹ 116 ನೀಡಿಲ್ಲ’ ಎಂದು ರೈತರು ದೂರಿದರು.
‘ಬಾಕಿ ಹಣ ಪಾವತಿಗಾಗಿ ರೈತರು, ಕಾರ್ಖಾನೆಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಕಾರ್ಖಾನೆಯವರು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ರೈತರಿಗೆ ಎಲ್ಲ ಹಣ ಕೊಟ್ಟಿರುವುದಾಗಿ ಕಾರ್ಖಾನೆಯವರು ಸುಳ್ಳು ಲೆಕ್ಕ ನೀಡಿರುವುದಾಗಿ ಗೊತ್ತಾಗಿದೆ’ ಎಂದರು.
‘ಕಬ್ಬು ಅರೆಯುವ ಕೆಲಸ ಮುಗಿದಿದ್ದು, ಸಕ್ಕರೆ ಸಾಗಣೆ ನಡೆಯುತ್ತಿದೆ. ಬಾಕಿ ಹಣ ನೀಡುವಂತೆ ಒತ್ತಾಯಿಸಿ ಕಾರ್ಖಾನೆಯ ಮೂರು ಗೇಟ್‌ಗಳಿಗೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಇದರಿಂದಾಗಿ ಸಕ್ಕರೆ ಚೀಲಗಳನ್ನು ತುಂಬಿಕೊಂಡಿರುವ 25 ಲಾರಿಗಳು ಕಾರ್ಖಾನೆಯೊಳಗೆ ಇವೆ. ಹಣ ನೀಡುವವರೆಗೂ ಬೀಗ ತೆರೆಯುವುದಿಲ್ಲ’ ಎಂದು ರೈತರು ಹೇಳಿದರು.
ಸಂಧಾನ ವಿಫಲ: ಬಾಕಿ ಹಣ ನೀಡುವಂತೆ ಒತ್ತಾಯಿಸಿ ಕಾರ್ಖಾನೆ ಬಾಗಿಲಿಗೆ ರೈತರು ಬೀಗ ಹಾಕಿದ್ದರಿಂದ, ಕಾರ್ಖಾನೆಯ ಆಡಳಿತ ಮಂಡಳಿ ಸಂಧಾನಕ್ಕೆ ಕರೆದಿತ್ತು.
ಸಂಧಾನಕ್ಕೆ ಹಾಜರಿದ್ದ ರೈತ ಮುಖಂಡರು, ‘ಎಫ್‌ಆರ್‌ಪಿ ಪ್ರಕಾರ ಪ್ರತಿ ಟನ್‌ಗೆ ₹ 3,151 ನೀಡಬೇಕು. ಆದರೆ, ಕಾರ್ಖಾನೆಯವರು ಕೇವಲ ₹ 3,035 ನೀಡಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.
‘ಎಫ್‌ಆರ್‌ಪಿ ಪ್ರಕಾರ ಬಾಕಿ ಉಳಿದಿರುವ ₹ 116 ನೀಡಬೇಕು. ಈ ಬಗ್ಗೆ ಲಿಖಿತ ಆಶ್ವಾಸನೆ ಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯಲಿದೆ’ ಎಂದು ರೈತರು ಎಚ್ಚರಿಸಿದರು.
ಲಿಖಿತ ಭರವಸೆ ನೀಡುವುದಾಗಿ ಸಭೆಯಲ್ಲಿ ಹೇಳಿದ್ದ ಆಡಳಿತ ಮಂಡಳಿ, ಕೆಲ ಹೊತ್ತಿನ ಬಳಿಕ ಯಾವುದೇ ಭರವಸೆ ನೀಡಿಲ್ಲ. ಇದರಿಂದಾಗಿ ಸಂಧಾನ ವಿಫಲಗೊಂಡಿದ್ದು, ರೈತರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.
‘ಸಕ್ಕರೆ ಸಾಗಿಸದಿದ್ದರೆ ನಷ್ಟ’
ಕಬ್ಬು ಅರೆಯುವ ಕೆಲಸ ಮುಗಿಸಿರುವ ಜಿ.ಎಂ. ಶುಗರ್ಸ್ ಕಾರ್ಖಾನೆಯವರು ಸಕ್ಕರೆಯನ್ನು ಹೊರಗಡೆ ಕಳುಹಿಸಿದ್ದಾರೆ. ಈಗ ಸಕ್ಕರೆ ವಾಹನಗಳನ್ನು ರೈತರು ತಡೆದಿದ್ದು ಇದರಿಂದ ಕಾರ್ಖಾನೆಗೆ ನಷ್ಟವಾಗಲಿದೆ. ‘ರೈತರಿಗೆ ನ್ಯಾಯಯುತ ಬೆಲೆ ನೀಡಲು ಕಾರ್ಖಾನೆ ಸಿದ್ಧವಿದೆ. ಅದಕ್ಕಾಗಿ ರೈತರಿಂದ ಸಮಯಾವಕಾಶ ಕೇಳಿದ್ದೇವೆ. ಆದರೆ ಸಮಯ ನೀಡುತ್ತಿಲ್ಲ. ಇದರಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ’ ಎಂದು ಕಾರ್ಖಾನೆ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.