ಸಾಂಕೇತಿಕ ಚಿತ್ರ
ಹಾವೇರಿ: ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಜಿಲ್ಲೆಯಲ್ಲಿ ಹಲವು ಕೆಲಸಗಳು ನಡೆದಿದೆ. ಜಿಲ್ಲೆಯ 43 ಇಲಾಖೆಗಳಿಗೆ ನವೆಂಬರ್ ಅಂತ್ಯದದವರೆಗೆ ₹ 98.77 ಕೋಟಿ ಬಿಡುಗಡೆಯಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ ಮಾಹಿತಿ ನೀಡಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಅನುಷ್ಠಾನಗೊಳಿಸಲಾದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಕೈಗೊಂಡ ಕೆಲಸಗಳನ್ನು ವಿಳಂಬ ಮಾಡದೇ ನಿಗದಿತ ಕಾಲಮಿತಿಯೊಳಗೆ ಮುಗಿಸಬೇಕು. ಶೇ 100ರಷ್ಟು ಭೌತಿಕ ಹಾಗೂ ಆರ್ಥಿಕ ಸಾಧನೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಸಮುದಾಯದವರ ಅಭಿವೃದ್ಧಿಗಾಗಿ ಸರ್ಕಾರ ಯೋಜನೆಯಡಿ ಸೌಲಭ್ಯ ನೀಡುತ್ತಿದೆ. ನಿಗದಿತ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆ ಸೌಲಭ್ಯಗಳನ್ನು ತಲುಪಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡಬಾರದು. ಆಯಾ ಸಾಲಿನ ಅನುದಾನವನ್ನು ಆಯಾ ಸಾಲಿನಲ್ಲೇ ವೆಚ್ಚ ಮಾಡಬೇಕು’ ಎಂದರು.
‘ಜಿಲ್ಲೆಯಲ್ಲಿ ಸಮೀಕ್ಷೆಯಲ್ಲಿ ಗುರುತಿಸಲಾದ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಹಾಗೂ ಪೌರ ಕಾರ್ಮಿಕರಿಗೆ ವಿವಿಧ ವಸತಿ ಯೋಜನೆಗಳಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಸಹಾಯಧನ-ದ ಸಾಲ ಕೊಡಿಸಬೇಕು. ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳು, ಆ ಯೋಜನೆ ಸದುಪಯೋಗ ಪಡೆದುಕೊಂಡಿರುವ ಬಗ್ಗೆ ಪರಿಶೀಲನೆ ಮಾಡಬೇಕು’ ಎಂದರು.
ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ ಸುಭಾಸ ಬೆಂಗಳೂರು, ಭೀಮಪ್ಪ ಯಲ್ಲಾಪೂರ, ‘ಹಾವೇರಿ ನಗರದಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಲಾದ ಸಾರ್ವಜನಿಕ ಶೌಚಾಲಯ ನಿರ್ವಹಣೆ, ಮ್ಯಾನುಯಲ್ ಸ್ಕ್ಯಾವೆಂಜರ್ಸ್‌ಗಳಿಗೆ ವಿವಿಧ ಯೋಜನೆಗಳ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳ ಹೊರಗುತ್ತಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
ಜಿ.ಪಂ. ಸಿಇಒ ರುಚಿ ಬಿಂದಲ್, ಸವಣೂರ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ನಾಮ ನಿರ್ದೇಶಿತ ಸದಸ್ಯರಾದ ಗೌರಮ್ಮ ನಾಗರಾಜ ಮಂತ್ರಿ, ಗೀತಾ ನಾರಾಯಣ ನೆಲ್ಲೂರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.