ADVERTISEMENT

ಸ್ವಾಮೀಜಿಗೆ ಟಿಕೆಟ್ ನೀಡಲು ಮಠಾಧೀಶರ ಒತ್ತಡ

ಶಿಗ್ಗಾವಿ– ಸವಣೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:32 IST
Last Updated 17 ಸೆಪ್ಟೆಂಬರ್ 2024, 15:32 IST
ಚನ್ನಬಸವೇಶ್ವರ ಸ್ವಾಮೀಜಿ
ಚನ್ನಬಸವೇಶ್ವರ ಸ್ವಾಮೀಜಿ   

ಹಾವೇರಿ: ಶಿಗ್ಗಾವಿ– ಸವಣೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಚನ್ನಬಸವೇಶ್ವರ ಸ್ವಾಮೀಜಿ ಅವರಿಗೆ ಟಿಕೆಟ್ ನೀಡುವಂತೆ ರಾಷ್ಟ್ರೀಯ ಪಕ್ಷಗಳ ಮುಖಂಡರ ಮೇಲೆ ರಾಜ್ಯದ ಹಲವು ಮಠಾಧೀಶರು ಒತ್ತಡ ಹಾಕುತ್ತಿದ್ದಾರೆ.

ಉಪ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುವುದಾಗಿ ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವೇಶ್ವರ ಸ್ವಾಮೀಜಿ ಈಗಾಗಲೇ ಘೋಷಿಸಿದ್ದಾರೆ. ಜೊತೆಗೆ, ಇವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುವಂತೆ ಕೋರಿ ಕೆಲ ಭಕ್ತರು ಈಗಾಗಲೇ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಸಂತೋಷ್ ಲಾಡ್, ವಿನಯ ಕುಲಕರ್ಣಿ ಸೇರಿದಂತೆ ಹಲವು ಮುಖಂಡರನ್ನು ಇತ್ತೀಚೆಗೆ ಭೇಟಿಯಾಗಿದ್ದ ಕೆಲ ಮಠಾಧೀಶರು, ‘ಹಿಂದೂಗಳನ್ನು ಕಾಂಗ್ರೆಸ್ ಕಡೆಗಣಿಸುತ್ತಿರುವ ಮಾತಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ಸ್ವಾಮೀಜಿಗೆ ಟಿಕೆಟ್ ನೀಡಿ, ಕಾಂಗ್ರೆಸ್ ಹಿಂದೂಗಳ ಪರವಿದೆ ಎಂಬುದನ್ನು ಸಾಬೀತು ಮಾಡಿ’ ಎಂದು ಕೋರಿದ್ದಾರೆ.

ADVERTISEMENT

‘ಉತ್ತರ ಭಾರತದಲ್ಲಿ ಹಲವು ಕ್ಷೇತ್ರಗಳಲ್ಲಿ ಸ್ವಾಮೀಜಿಗಳಿಗೆ ಟಿಕೆಟ್ ನೀಡಲಾಗಿದೆ. ಅವರು ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದಲ್ಲೂ ಸ್ವಾಮೀಜಿಯೊಬ್ಬರು, ಮಾಜಿ ಮುಖ್ಯಮಂತ್ರಿ ಅವರನ್ನೇ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಹೀಗಾಗಿ, ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸ್ವಾಮೀಜಿಗೆ ಟಿಕೆಟ್ ನೀಡಬೇಕು. ರಾಜ್ಯದ ಹಲವು ಮಠಾಧೀಶರು ಪ್ರಚಾರಕ್ಕೆ ಬರಲು ಸಿದ್ಧರಾಗಿದ್ದಾರೆ’ ಎಂದು ಹೇಳಿದ್ದಾರೆ.

ಚನ್ನಬಸವೇಶ್ವರ ಸ್ವಾಮೀಜಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಮುಖಂಡರಿಗೆ ಕೆಲವರು ಒತ್ತಾಯ ಮಾಡುತ್ತಿರುವ ಬಗ್ಗೆ ಚರ್ಚೆಗಳು ನಡೆದಿವೆ.

ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಚನ್ನಬಸವೇಶ್ವರ ಸ್ವಾಮೀಜಿ, ‘ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ನೀಡಿದರೆ, ಸ್ಪರ್ಧಿಸಲು ಸಿದ್ಧನಿದ್ದೇನೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ 100ಕ್ಕೂ ಹೆಚ್ಚು ಮಠಾಧೀಶರು, ನನ್ನ ಪರವಾಗಿ ಟಿಕೆಟ್ ಕೇಳುತ್ತಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುವ ಇಚ್ಛೆಯಿಲ್ಲ. ತಟಸ್ಥವಾಗಿರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.