ADVERTISEMENT

ಹಾವೇರಿ| ಅಪ್ರತಿಮ ಶೂರ ಶಿವಾಜಿ ಮಹಾರಾಜ: ಗಾಜೀಗೌಡ್ರ

ಜಿಲ್ಲಾಡಳಿತದಿಂದ ಜಯಂತಿ ಕಾರ್ಯಕ್ರಮ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭಾಗಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:22 IST
Last Updated 20 ಫೆಬ್ರುವರಿ 2026, 7:22 IST
ಹಾವೇರಿ ತಾಲ್ಲೂಕು ಮರಾಠ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ’ದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು 
ಹಾವೇರಿ ತಾಲ್ಲೂಕು ಮರಾಠ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ’ದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು    

ಹಾವೇರಿ: ‘ಛತ್ರಪತಿ ಶಿವಾಜಿ ಮಹಾರಾಜ ಅವರು, ಅಪ್ರತಿಮ ಶೂರ ಹಾಗೂ ಉತ್ತಮ ಆಡಳಿತಗಾರರಾಗಿದ್ದರು. ಇಂದಿನ ಯುವ ಸಮೂಹ, ಇಂತಹ ಮಹಾನ್ ನಾಯಕರ ಆದರ್ಶಗಳನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಹೇಳಿದರು.

ನಗರದಲ್ಲಿರುವ ತಾಲ್ಲೂಕು ಮರಾಠ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮರಾಠ ಸಮಾಜದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಿಂದೂ ಮರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿ ಮಹಾರಾಜರು, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಬರೀ ಪುಸ್ತಕದಲ್ಲಿ ಓದುವಂತಾಗಿದೆ. ಇಂದಿನ ಮಕ್ಕಳು, ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಮಕ್ಕಳು ಮೊಬೈಲ್‌ನಿಂದ ದೂರವಿರಬೇಕು. ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಎಲ್., ‘ಶಿವಾಜಿ ಮಹಾರಾಜರು, ಉತ್ತಮ ಆದರ್ಶ ಮೌಲ್ಯಗಳನ್ನು ಹೊಂದಿದ್ದರು. ಶಿವಾಜಿ ಅವರ ಸಾಧನೆಗೆ ಅವರ ತಾಯಿ ಜೀಜಾಭಾಯಿ ಪಾತ್ರ ಬಹು ಮುಖ್ಯವಾಗಿದೆ. ಶಿವಾಜಿ ಅವರು ಬಾಲ್ಯದಲ್ಲಿದ್ದಾಗಲೇ ಅವರಿಗೆ ರಾಮಾಯಣ, ಮಹಾಭರತ ಮತ್ತು ಧೀರ ಯೋಧರ ಕತೆಗಳನ್ನು ಹೇಳುವ ಮೂಲಕ ಸದಾ ಅವರಿಗೆ ಸ್ಫೂರ್ತಿ ನೀಡುತಿದ್ದರು. ಶಿವಾಜಿ ಮಹಾರಾಜರು, ಹಿಂದೂ ರಾಷ್ಟ್ರದ ನಿಜವಾದ ನಿರ್ಮಾತೃರು ಎಂದರೆ ತಪ್ಪಾಗಲಾರದು’ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ‘ಶಿವಾಜಿ ಅವರ ಆಚಾರ–ವಿಚಾರ ಬಹಳ ಜನಪ್ರಿಯವಾಗಿವೆ. ತಾಯಿಯೇ ಮೊದಲು ಗುರು, ಜೀಜಾಭಾಯಿ ಅವರ ಬೋಧನೆಯಿಂದ ಶಿವಾಜಿ ಅವರು ಜೀವನದಲ್ಲಿ ಉತ್ತಮ ಸಾಧನೆ ಮಾಡಿದರು. ಮಕ್ಕಳು ಇತಿಹಾಸವನ್ನು ಓದಬೇಕು. 12 ಮತ್ತು 16ನೇ ಶತಮಾನದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಬೇಕು. ಸಮಾಜದ ಸುಧಾರಣೆಗೆ ಮಹಾನ್ ವ್ಯಕ್ತಿಗಳ ಕೊಡುಗೆ ಅವಿಸ್ಮರಣೀಯವಾಗಿದೆ. ದೇಶದ ಮೌಲ್ಯವನ್ನು ಎಲ್ಲರೂ ಎತ್ತಿ ಹಿಡಿಯಬೇಕು’ ಎಂದು ಹೇಳಿದರು.

ರೇವತಿ ವಿವೇಕಾನಂದ ತಿಳವಳ್ಳಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ, ಜಿಲ್ಲಾ ಮರಾಠ ಸಮಾಜದ ಅಧ್ಯಕ್ಷ ವೆಂಕೋಜಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.