ADVERTISEMENT

ಹಾವೇರಿ | ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆ: ಶಾಲಾ–ಕಾಲೇಜು, ಪಂಪ್‌ಸೆಟ್‌ಗೂ ಸ್ಟಿಕ್ಕರ್

ಶೇ 97.75ರಷ್ಟು ಪೂರ್ಣ, ಹೆಸ್ಕಾಂ ಸಿಬ್ಬಂದಿ ಲೋಪ; ಶೇ 100ರಷ್ಟು ಗುರಿ ಸಾಧನೆಗೆ ಹಲವು ಅಡ್ಡಿ

ಸಂತೋಷ ಜಿಗಳಿಕೊಪ್ಪ
Published 7 ಅಕ್ಟೋಬರ್ 2025, 2:10 IST
Last Updated 7 ಅಕ್ಟೋಬರ್ 2025, 2:10 IST
<div class="paragraphs"><p>ಹಾವೇರಿಯ ಬಸವೇಶ್ವರ ನಗರದಲ್ಲಿ ಅಂಗವಿಕಲರ ತ್ರಿಚಕ್ರ ವಾಹನದಲ್ಲಿ ಕುಳಿತು ಸಮೀಕ್ಷೆದಾರರೊಬ್ಬರು ಸಮೀಕ್ಷೆ ಮಾಹಿತಿ ಪಡೆದುಕೊಂಡರು </p></div>

ಹಾವೇರಿಯ ಬಸವೇಶ್ವರ ನಗರದಲ್ಲಿ ಅಂಗವಿಕಲರ ತ್ರಿಚಕ್ರ ವಾಹನದಲ್ಲಿ ಕುಳಿತು ಸಮೀಕ್ಷೆದಾರರೊಬ್ಬರು ಸಮೀಕ್ಷೆ ಮಾಹಿತಿ ಪಡೆದುಕೊಂಡರು

   

– ಪ್ರಜಾವಾಣಿ ಚಿತ್ರ 

ಹಾವೇರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶೇ 97.75ರಷ್ಟು ಪೂರ್ಣಗೊಂಡಿದೆ. ಆದರೆ, ಕೆಲ ತಾಂತ್ರಿಕ ಕಾರಣ ಹಾಗೂ ಹೆಸ್ಕಾಂ ಸಿಬ್ಬಂದಿ ಲೋಪದಿಂದಾಗಿ ಶೇ 100ರಷ್ಟು ಗುರಿ ಸಾಧಿಸಲು ಹಲವು ಅಡ್ಡಿಗಳು ಎದುರಾಗಿವೆ.

ADVERTISEMENT

ರಾಜ್ಯ ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ 22ರಿಂದ ಜಿಲ್ಲೆಯಾದ್ಯಂತ ಸಮೀಕ್ಷೆ ಆರಂಭಿಸಲಾಗಿದ್ದು, ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಸಲು ಕಾಲಾವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿರುವ 4.12 ಲಕ್ಷ ಮನೆಗಳ ಪೈಕಿ, ಸೋಮವಾರ ಸಂಜೆ 6 ಗಂಟೆಯ ಅಂತ್ಯಕ್ಕೆ 4.04 ಲಕ್ಷ ಮನೆಗಳ ಸಮೀಕ್ಷೆ ಮುಕ್ತಾಯಗೊಂಡಿದೆ.

ಸಮೀಕ್ಷೆ ಜವಾಬ್ದಾರಿ ವಹಿಸಿಕೊಂಡಿದ್ದ 3,777 ಶಿಕ್ಷಕರ ಪೈಕಿ, ಸಾವಿರಕ್ಕೂ ಹೆಚ್ಚು ಶಿಕ್ಷಕರು ಈಗಾಗಲೇ ಸಮೀಕ್ಷೆ ಮಾಡಿ ಮುಗಿಸಿದ್ದಾರೆ. ಆದರೆ, ಉಳಿದ ಶಿಕ್ಷಕರು ವಿವಿಧ ಕಾರಣಗಳಿಂದಾಗಿ ಸಮೀಕ್ಷೆ ಪೂರ್ಣಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ.

ಸಮೀಕ್ಷೆಗಾಗಿ ತಯಾರಿ ಮಾಡಿಕೊಂಡಿದ್ದ ಆಯೋಗ, ಜಿಲ್ಲೆಯಲ್ಲಿರುವ ಮನೆಗಳ ವಿದ್ಯುತ್ ಮೀಟರ್ ಆಧರಿಸಿ ಬಾಗಿಲುಗಳಿಗೆ ಸ್ಟಿಕ್ಕರ್‌ ಅಂಟಿಸಿತ್ತು. ಈ ಕೆಲಸಕ್ಕಾಗಿ ಹೆಸ್ಕಾಂ ಸಿಬ್ಬಂದಿ ಸಹಾಯ ಪಡೆಯಲಾಗಿತ್ತು. ಆದರೆ, ಸಿಬ್ಬಂದಿಯು ಮನೆಗಳ ಜೊತೆಯಲ್ಲಿಯೇ ಶಾಲೆ–ಕಾಲೇಜು, ನೀರು ಮೇಲೆತ್ತುವ ಪಂಪ್‌ಸೆಟ್‌ಗಳು ಹಾಗೂ ಜನರು ವಾಸವಿರದ ಮನೆಗಳಿಗೂ ಸ್ಟಿಕ್ಕರ್ ಅಂಟಿಸಿದ್ದಾರೆ.

ಸ್ಟಿಕ್ಕರ್‌ನಲ್ಲಿರುವ ಕ್ಯೂಆರ್‌ ಕೋಡ್ ಆಧರಿಸಿ ಸಮೀಕ್ಷೆ ನಡೆಸುತ್ತಿರುವ ಸಮೀಕ್ಷೆದಾರರು, ಶಾಲೆ–ಕಾಲೇಜು, ಪಂಪ್‌ಸೆಟ್‌ಗಳ ಬಳಿ ಹೋಗಿ ವಾಪಸು ಬರುತ್ತಿದ್ದಾರೆ. ಈ ಸ್ಥಳಗಳ ಸಮೀಕ್ಷೆ ಮಾಡದಿದ್ದರಿಂದ, ‘ಸಮೀಕ್ಷೆ ಮಾಡಿಲ್ಲ’ ಎಂಬುದಾಗಿ ಆ್ಯಪ್‌ನಲ್ಲಿ ಗೋಚರಿಸುತ್ತಿದೆ.

ಸಮೀಕ್ಷೆದಾರರು ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಪ್ರತಿಯೊಂದು ಸ್ಥಳಕ್ಕೆ ಹೋಗಿ ಬಂದಿದ್ದಾರೆ. ಆದರೆ, ಹೆಸ್ಕಾಂ ಸಿಬ್ಬಂದಿ ಮಾಡಿರುವ ಲೋಪದಿಂದಾಗಿ ಶೇ 100ರಷ್ಟು ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲವೆಂದು ಸಮೀಕ್ಷೆದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ನನಗೆ ಹಾವೇರಿ ನಗರದಲ್ಲಿ 150 ಮನೆಗಳ ಸಮೀಕ್ಷೆ ಜವಾಬ್ದಾರಿ ವಹಿಸಲಾಗಿತ್ತು. ಈ ಪೈಕಿ 120 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದ್ದೇನೆ. ಉಳಿದ 30 ಮನೆಗಳ ಪೈಕಿ, 20 ಮನೆಗಳಲ್ಲಿ ವಿದ್ಯಾಭ್ಯಾಸ–ಉದ್ಯೋಗದಲ್ಲಿರುವ ಅವಿವಾಹಿತರು ವಾಸವಿದ್ದಾರೆ. ಅವರು ತಮ್ಮ ಸ್ವಂತ ಊರಲ್ಲಿ ಸಮೀಕ್ಷೆ ಮಾಡಿಸಿದ್ದಾರೆ. ಉಳಿದ ಮನೆಗಳ ಪಂಪ್‌ಸೆಟ್‌ಗಳಿಗೂ ಸ್ಟಿಕ್ಕರ್ ಅಂಟಿಸಿದ್ದಾರೆ. ಇದನ್ನು ಹೇಗೆ ಕುಟುಂಬವೆಂದು ಪರಿಗಣಿಸಿ ಸಮೀಕ್ಷೆ ಮಾಡಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಸಮೀಕ್ಷೆದಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಶೇ 99ರಷ್ಟು ಸಾಧನೆಯಾಗಿದೆ. ಆದರೆ, ಶಹರ ವ್ಯಾಪ್ತಿಯಲ್ಲಿ ಹೆಚ್ಚಿನ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ: ‘ಪರಿಶಿಷ್ಟ ಸಮುದಾಯದವರ ಸಮೀಕ್ಷೆಯನ್ನೂ ನಾವೇ ಮಾಡಿದ್ದೇವೆ. ಆ ಸಂದರ್ಭದಲ್ಲಿ ಪ್ರತಿಯೊಂದು ಮನೆಗೂ ಭೇಟಿ ನೀಡಿ, ಉತ್ತಮ ರೀತಿಯಲ್ಲಿ ಮಾಹಿತಿ ಕಲೆಹಾಕಿದ್ದೆವು. ಆದರೆ, ಈ ಬಾರಿ ವಿದ್ಯುತ್ ಮೀಟರ್ ಸ್ಟಿಕ್ಕರ್ ಮೂಲಕ ಸಮೀಕ್ಷೆ ಮಾಡಲು ಹೇಳಿದ್ದರು. ಸ್ಟಿಕ್ಕರ್‌ಗಳನ್ನು ತಪ್ಪಾಗಿ ಅಂಟಿಸಿರುವುದರಿಂದ, ಶೇ 100ರಷ್ಟು ಗುರಿ ಸಾಧನೆ ಅನುಮಾನವಾಗಿದೆ’ ಎಂದು ಸಮೀಕ್ಷೆದಾರರೊಬ್ಬರು ತಿಳಿಸಿದರು.

‘ಮೀಟರ್ ಅಂಟಿಸುವ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಅದೇ ಕಾರಣಕ್ಕೆ ಶಾಲೆ–ಕಾಲೇಜು, ಪಂಪ್‌ಸೆಟ್‌ ಬಳಿಯೂ ಸ್ಟಿಕ್ಕರ್‌ಗಳಿರುವುದು ಕಂಡುಬರುತ್ತಿದೆ. ಇವುಗಳ ಸಮೀಕ್ಷೆ ಮಾಡದಿದ್ದರೆ, ಆ್ಯಪ್‌ನಲ್ಲಿ ಸಮೀಕ್ಷೆ ಬಾಕಿ ಎಂದೇ ತೋರಿಸುತ್ತಿದೆ’ ಎಂದು ಹೇಳಿದರು.

ಬಾಡಿಗೆ ಮನೆಗಳ ಸಮಸ್ಯೆ: ‘ಶಹರ ವ್ಯಾಪ್ತಿಯಲ್ಲಿ ಒಬ್ಬರೇ ಮಾಲೀಕರು, ತಮ್ಮ ಮಾಲೀಕತ್ವದ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳನ್ನು ಬಾಡಿಗೆ ನೀಡುತ್ತಿದ್ದಾರೆ. ಪ್ರತಿಯೊಂದು ಮನೆಗೂ ಪ್ರತ್ಯೇಕ ಮೀಟರ್ ಅಳವಡಿಸಿದ್ದಾರೆ. ಇಂಥ ಮನೆಗಳಲ್ಲಿ ಜನರು ವಾಸವಿರದಿದ್ದರೂ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ’ ಎಂದು ಸಮೀಕ್ಷೆದಾರರೊಬ್ಬರು ತಿಳಿಸಿದರು.

‘ಸಮೀಕ್ಷೆಗೆ ಹೋದಾಗ, ಮನೆಯಲ್ಲಿ ಯಾರೂ ಇಲ್ಲದಿರುವುದು ಕಂಡುಬಂದಿದೆ. ಮನೆಯಲ್ಲಿ ಯಾರೂ ಇಲ್ಲವೆಂದು ದಾಖಲಿಸಲು ಆ್ಯಪ್‌ನಲ್ಲಿ ಅವಕಾಶವಿಲ್ಲ. ಹೀಗಾಗಿ, ಮನೆ ಮಾಲೀಕರಿಂದಲೇ ದೃಢೀಕರಣ ಪತ್ರದ ಮೇಲೆ ಸಹಿ ಮಾಡಿಸಿಕೊಂಡು ಬಂದಿದ್ದೇವೆ. ಅದನ್ನೇ ಅಧಿಕಾರಿಗಳಿಗೆ ನೀಡಿದ್ದೇವೆ. ಅವರು ನೀಡುವ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇವೆ’ ಎಂದು ಹೇಳಿದರು.

ಹಾವೇರಿಯ ನೇತಾಜಿನಗರದ ಮನೆಯೊಂದರಲ್ಲಿ ಕುಟುಂಬದವರಿಂದ ಮಾಹಿತಿ ಪಡೆದುಕೊಂಡ ಸಮೀಕ್ಷೆದಾರರೊಬ್ಬರು ಆ್ಯಪ್‌ನಲ್ಲಿ ದಾಖಲಿಸಿದರು
ವಿದ್ಯುತ್ ಮೀಟರ್ ಆಧರಿಸಿದರೆ ಜಿಲ್ಲೆಯಲ್ಲಿ 4.12 ಲಕ್ಷ ಮನೆಗಳಿವೆ. ಆದರೆ 4.57 ಲಕ್ಷ ಪಡಿತರ ಚೀಟಿಗಳಿವೆ. ಸಮೀಕ್ಷೆಯಲ್ಲಿರುವ ತಾಂತ್ರಿಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ
ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

‘ಮಾಹಿತಿ ನೀಡಲು ನಿರಾಕರಣೆ’

‘ಜಿಲ್ಲೆಯ ಕೆಲ ಮನೆಗಳಲ್ಲಿ ನಿವಾಸಿಗಳು ಸಮೀಕ್ಷೆಗಾಗಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇಂಥ ಮನೆಯವರಿಂದ ನಿರಾಕರಣೆ ಬಗ್ಗೆಯೂ ಧೃಡೀಕರಣ ಪತ್ರ ಪಡೆಯಲಾಗಿದೆ’ ಎಂದು ಸಮೀಕ್ಷೆದಾರರೊಬ್ಬರು ತಿಳಿಸಿದರು. ‘ಸಮೀಕ್ಷೆ ನಿರಾಕರಿಸಿರುವುದಾಗಿ ದಾಖಲಿಸಲು ಆ್ಯಪ್‌ನಲ್ಲಿ ಅವಕಾಶವಿಲ್ಲ. ಹೀಗಾಗಿ ಸಮೀಕ್ಷೆ ನಿರಾಕರಿಸಿದ್ದ ಮನೆಗಳ ಬಗ್ಗೆ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲಾಗಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ’ ಎಂದು ಹೇಳಿದರು.

‘ನೈಜ ಮಾಹಿತಿ ನೀಡದ ಜನ’

‘ಜಿಲ್ಲೆಯ ಹಲವು ಕಡೆಗಳಲ್ಲಿ ಜನರು ನೈಜ ಮಾಹಿತಿ ನೀಡಿಲ್ಲ. ಸಮೀಕ್ಷೆದಾರರು ಮನೆಗೆ ಹೋದಾಗ ಬಹುತೇಕರು ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಾವು ಯಾರನ್ನೂ ಪ್ರಶ್ನೆ ಮಾಡಿಲ್ಲ. ಅವರು ಹೇಳಿದಂತೆ ಎಲ್ಲವನ್ನೂ ದಾಖಲಿಸಿದ್ದೇವೆ’ ಎಂದು ಸಮೀಕ್ಷೆದಾರರೊಬ್ಬರು ಹೇಳಿದರು. ‘ವೈಯಕ್ತಿಕ ಮಾಹಿತಿ ಉದ್ಯೋಗ ಚಿನ್ನಾಭರಣ ಆಸ್ತಿ ಹೊಲದ ಬಗ್ಗೆ ಹಲವರು ತಪ್ಪು ಮಾಹಿತಿ ನೀಡಿದ್ದಾರೆ. ನೈಜ ಮಾಹಿತಿ ನೀಡಿದರೆ ಸರ್ಕಾರದಿಂದ ಏನಾದರೂ ಸಮಸ್ಯೆಯಾಗಬಹುದೆಂಬುದು ಅವರ ಅಭಿಪ್ರಾಯವಾಗಿದೆ. ಕೆಲವರ ದಾಖಲೆಗಳು ಸಹ ಅಪೂರ್ಣವಾಗಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.