ADVERTISEMENT

ಹಾವೇರಿ | 3,628 ಪ್ರಕರಣಗಳಲ್ಲಿ 212 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:23 IST
Last Updated 20 ಜನವರಿ 2026, 6:23 IST
ಹಾವೇರಿ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ‘ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ’ಯಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಮೂರ್ತಿ ಎಲ್. ಮಾತನಾಡಿದರು
ಹಾವೇರಿ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ‘ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ’ಯಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಮೂರ್ತಿ ಎಲ್. ಮಾತನಾಡಿದರು   

ಹಾವೇರಿ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನ ಬಳಕೆ ಹಾಗೂ ಇತರೆ ಮಾಹಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಈಗಾಗಲೇ 6 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ, ಹಾವೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಮೂರು ತಿಂಗಳು 11 ದಿನಗಳ ಅವಧಿಯಲ್ಲಿ ಆಯೋಗದಲ್ಲಿ ದಾಖಲಾಗಿದ್ದ 3628 ಪ್ರಕರಣಗಳ ಪೈಕಿ 212 ಪ್ರಕರಣ ಈಗಾಗಲೇ ಇತ್ಯರ್ಥಪಡಿಸಲಾಗಿದೆ’ ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಮೂರ್ತಿ ಎಲ್. ಹೇಳಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ‘ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ’ಯಲ್ಲಿ ಅವರು ಮಾತನಾಡಿದರು.

‘ಆಯೋಗದಲ್ಲಿ ಪ್ರತಿ ಗುರುವಾರ ಹಾಗೂ ಶುಕ್ರವಾರ ಕಲಾಪ ನಡೆಸಲಾಗುತ್ತಿದೆ. ಆಯೋಗಕ್ಕೆ ಬರುವ ದೂರುಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಹೀಗಾಗಿ, ಅಧಿಕಾರಿಗಳು ಯಾವುದೇ ಲೋಪದೋಷ ಆಗದಂತೆ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಹಾಗೂ ಆಯೋಜನೆಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಜಿಲ್ಲೆಯಲ್ಲಿ 26 ಪೋಕ್ಸೊ ಪ್ರಕರಣ ದಾಖಲಾಗಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಜಾಗೃತಿ ಮೂಡಿಸಬೇಕು’ ಎಂದರು.

ಸ್ಮಶಾನ ಭೂಮಿ: ‘ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವ ಬಗ್ಗೆ ದೂರುಗಳು ಬಂದಿವೆ. ಸರ್ಕಾರದ ಮಾರ್ಗಸೂಚಿ ಅನ್ವಯ ಜಾಗ ನೋಡಿ ಸ್ಮಶಾನ ಸೌಲಭ್ಯ ದೊರಕಿಸಿಕೊಡಬೇಕು. ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಮೂರ್ತಿ ಎಲ್‌. ಹೇಳಿದರು.

‘ಹಾನಗಲ್ ಸೇರಿ ವಿವಿಧೆಡೆ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಜಗಜೀವನರಾಂ ಭವನಗಳ ನಿರ್ಮಾಣ ಕುರಿತು ಸರ್ಕಾರಕ್ಕೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನವನ್ನು ಆಯಾ ವರ್ಗದವರ ಅಭಿವೃದ್ಧಿ ಕಾಮಗಾರಿಗೆ ಮಾತ್ರ ವೆಚ್ಚಮಾಡಬೇಕು. ವಿವಿಧ ಇಲಾಖೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿಗಳು ತಾವು ಕೈಗೊಂಡ ಕಾಮಗಾರಿಗಳ ಕುರಿತು ನಾಮಫಲಕ ಹಾಕಬೇಕು. ಅಂದಾಗ ಇಲಾಖೆಗಳಿಂದ ವೆಚ್ಚವಾದ ಅನುದಾನದ ನಿಖರ ಮಾಹಿತಿ ಲಭ್ಯವಾಗುತ್ತದೆ’ ಎಂದು ಹೇಳಿದರು.

ಆಯೋಗದ ಕಾರ್ಯದರ್ಶಿ ಎಚ್.ಆರ್. ಶಿವರಾಂ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್‌.ಪಿ. ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ, ಆಯೋಗದ ಸಹಾಯಕ ನಿರ್ದೇಶಕ ಶ್ರೀನಿವಾಸ ಇದ್ದರು.

‘ಆನ್‌ಲೈನ್‌ನಲ್ಲಿ ಅಹವಾಲು ಸ್ವೀಕಾರ ಶೀಘ್ರ’ ಹಾವೇರಿ: ‘ಜನರು ತಾವಿರುವ ಸ್ಥಳದಿಂದಲೇ ದೂರು ನೀಡಲು ಅನುಕೂಲವಾಗುವಂತೆ ಶೀಘ್ರದಲ್ಲೇ ಆಯೋಗದಿಂದ ಆನ್‌ಲೈನ್ ಅಹವಾಲು ಸ್ವೀಕಾರ ವ್ಯವಸ್ಥೆ ರೂಪಿಸಲಾಗುವುದು’ ಎಂದು ಮೂರ್ತಿ ಎಲ್. ತಿಳಿಸಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಕೆಲಸಗಳಿಗಾಗಿ ದೂರದ ಊರುಗಳಿಂದ ಬೆಂಗಳೂರಿನ ಕಚೇರಿಗೆ ಬರುತ್ತಿರುವುದು ಬೇಸರ ಮೂಡಿಸಿದೆ. ಹೀಗಾಗಿಯೇ ಆನ್‌ಲೈನ್ ವ್ಯವಸ್ಥೆ ತರಲಾಗುತ್ತಿದೆ. ಆನ್‌ಲೈನ್ ಬಳಸಲು ಆಗದವರಿಗೆ ಒಬ್ಬ ಗುಮಾಸ್ತರನ್ನು ನೇಮಿಸಿ ಅಹವಾಲು ಸಲ್ಲಿಸಲು ಸಹಾಯ ಮಾಡವಲಾಗುವುದು’ ಎಂದರು. ‘ಯಾವ ಇಲಾಖೆ ಅಧಿಕಾರಿಗಳು ಸಭೆಗೆ ಬಂದಿಲ್ಲವೋ ಅಂಥವರ ಹೆಸರನ್ನು ಎಫ್‌ಡಿ ಕಮಿಷನರ್‌ಗೆ ಕಳುಹಿಸುವಂತೆ ಸೂಚಿಸಲಾಗಿದೆ. ಈ ವರ್ಗದ ಜನರಿಗೆ ಅನ್ಯಾಯ ಮಾಡುವವರಿಗೆ ಆಯೋಗ ನಿರ್ದಾಕ್ಷಿಣ್ಯವಾಗಿ ಚಾಟಿ ಬೀಸುತ್ತದೆ’ ಎಂದರು. ‘2023–-24ರಲ್ಲಿ ಸುಮಾರು ₹225 ಕೋಟಿ ಎಸ್‌ಇಪಿಟಿಎಸ್ ಹಣ ಜಿಲ್ಲೆಗೆ ಬಂದಿದೆ. ಎಲ್ಲ ಇಲಾಖೆಗೆ ಹಂಚಿಕೆಯಾಗಿದೆ. ಗುಣಮಟ್ಟದ ಕಾಮಗಾರಿ ಆಗಿಲ್ಲವೆಂದು 12 ದೂರುಗಳು ಬಂದಿವೆ. ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.