ಹಾವೇರಿ: ‘ಭಾವೈಕ್ಯಕ್ಕೆ ಹಾವೇರಿ ಜಿಲ್ಲೆ ಹೆಸರುವಾಸಿಯಾಗಿದೆ. ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಲಿಂ ಸಮುದಾಯದವರು ಶಾಂತರೀತಿಯಿಂದ ಆಚರಿಸಬೇಕು’ ಎಂದು ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ ಹೇಳಿದರು.
ನಗರದ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನಾವೆಲ್ಲರೂ ಕಾನೂನು ಪಾಲನೆ ಮಾಡಬೇಕು. ಹಬ್ಬದ ಸಂದರ್ಭದಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಹಾಗೂ ಜನರಿಗೆ ತೊಂದರೆ ನೀಡಿದರೆ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಗಣೇಶ ಹಬ್ಬದಂದು ಮೂರ್ತಿ ಪ್ರತಿಷ್ಠಾಪನೆ ಮಾಡಲು ಪೆಂಡಾಲ್ ಹಾಕುವವರು, ನಗರಸಭೆ–ಪೊಲೀಸರು–ಅಗ್ನಿಶಾಮಕದಳ–ಹೆಸ್ಕಾಂನಿಂದ ಅನುಮತಿ ಪಡೆಯುವುದು ಕಡ್ಡಾಯ. ಪೆಂಡಾಲ್‌ನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಅನುಮತಿ ಪಡೆದವರು, ಜವಾಬ್ದಾರಿಯಿಂದ ನಡೆದುಕೊಂಡು ಹಬ್ಬವನ್ನು ಸುಗಮವಾಗಿ ನಡೆಸಬೇಕು’ ಎಂದು ಹೇಳಿದರು.
‘ಯಾವುದೇ ಮೆರವಣಿಗೆ ಇದ್ದರೂ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಜೋರಾದ ಸಂಗೀತದ ಧ್ವನಿವರ್ಧಕ ಬಳಸಬಾರದು. ಸರ್ಕಾರ ನಿಯಮಾವಳಿ ಪ್ರಕಾರವೇ ಹಬ್ಬವನ್ನು ಆಚರಿಸಬೇಕು’ ಎಂದು ಕೋರಿದರು.
‘ನಗರದ ಮುಸ್ಲಿಂ ಸಮುದಾಯದವರು, ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು’ ಎಂದರು.
ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ್ ಪವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.