ADVERTISEMENT

ಹಣಕಾಸು ಸ್ಥಿತಿ ನೋಡಿ ಹಾವೇರಿಗೆ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:02 IST
Last Updated 15 ಫೆಬ್ರುವರಿ 2026, 3:02 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

-ಪ್ರಜಾವಾಣಿ ಚಿತ್ರ

ಹಾವೇರಿ: ‘ರಾಜ್ಯದ ಹಣಕಾಸು ಪರಿಸ್ಥಿತಿ ನೋಡಿಕೊಂಡು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಹಾವೇರಿ ಜಿಲ್ಲೆಯ ಇತರೆ ಬೇಡಿಕೆಗಳನ್ನು ಈಡೇರಿಸಲು ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ರಾಜ್ಯ ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶ’ ಹಾಗೂ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರು, ‘ಹಾವೇರಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಬೇಕು. ಇದೇ ಮಾರ್ಚ್ 6ರಂದು ಬಜೆಟ್‌ನಲ್ಲಿ ಘೋಷಣೆ ಮಾಡುವ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿ’ ಎಂದು ಕೋರಿದರು.

ಆಸ್ಪತ್ರೆ ಬಗ್ಗೆ ಸಿದ್ದರಾಮಯ್ಯ ಅವರು ಮಾತು ಆರಂಭಿಸುವ ಸಂದರ್ಭದಲ್ಲಿಯೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚೀಟಿಯೊಂದನ್ನು ನೀಡಿದರು.

ಚೀಟಿ ನೋಡಿ ಮಾತು ಮುಂದುವರಿಸಿದ ಸಿದ್ದರಾಮಯ್ಯ, ‘ರಾಜ್ಯದ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು, ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದರು.

‘ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ. ಜಿಎಸ್‌ಟಿ ಸಂಗ್ರಹಣೆ ಕಡಿತ ಮಾಡಿದ್ದರಿಂದ, ರಾಜ್ಯಕ್ಕೆ 12 ಸಾವಿರ ಕೋಟಿಯಿಂದ 15 ಸಾವಿರ ಕೋಟಿ ನಷ್ಟವಾಗಿದೆ. ನಮಗೆ ಬರಬೇಕಾದ ನ್ಯಾಯಯುತ ಪಾಲೂ ಸಿಗುತ್ತಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ₹ 15 ಸಾವಿರ ಕೋಟಿ ಇನ್ನೂ ಬಂದಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನ ಬಂದರೆ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಹಾವೇರಿ ಜನರಿಗೆ ನಿರಾಸೆ: ಹಾವೇರಿಯಲ್ಲಿ ಜ. 7ರಂದು ನಡೆದಿದ್ದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಬಡವರ ಸಂಖ್ಯೆ ಹೆಚ್ಚಿದೆ. ಆರೋಗ್ಯ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ವೆಚ್ಚ ಭರಿಸುವ ಶಕ್ತಿ ಅವರಿಗಿಲ್ಲ. ಎಲ್ಲರೂ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾವೇರಿ ಸೇರಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುವುದು’ ಎಂದು ಭರವಸೆ ನೀಡಿದ್ದರು.

ಆದರೆ, ಈಗ ಹಣಕಾಸು ಪರಿಸ್ಥಿತಿ ನೋಡಿಕೊಂಡು ಆಸ್ಪತ್ರೆ ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇವರ ಗೊಂದಲದ ಹೇಳಿಕೆಯಿಂದಾಗಿ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ರುದ್ರಪ್ಪ ಲಮಾಣಿ ಹಾಗೂ ಇತರರು, ಜನರಿಗೆ ಭರವಸೆ ನೀಡುತ್ತಿದ್ದಾರೆ. ಆದರೆ, ಈಗ ಮುಖ್ಯಮಂತ್ರಿ ಹೇಳಿಕೆ ಅವರಿಗೂ ಮುಜುಗರ ಉಂಟು ಮಾಡಿದೆ.

ರಾಜ್ಯದ ಯಾವುದೇ ಗ್ರಾಮಕ್ಕೆ ಹೋದರೂ ಜನರು ಹಕ್ಕುಪತ್ರ ಕೇಳುತ್ತಿದ್ದರು. ನಮ್ಮ ಸರ್ಕಾರ 6ನೇ ಗ್ಯಾರಂಟಿಯಾಗಿ ಹಕ್ಕುಪತ್ರ ನೀಡಿದೆ. ಜನರ ನೋವಿಗೆ ಸ್ಪಂದಿಸಿದೆ
ಯು.ಬಿ. ಬಣಕಾರ ಹಿರೇಕೆರೂರು ಶಾಸಕ
ಸಮಾವೇಶದ ಬಗ್ಗೆ ಬಿಜೆಪಿಯವರು ಟೀಕಿಸುತ್ತಿದ್ದಾರೆ. ಇಲ್ಲಿ ಸೇರಿರುವ ಜನರ ಖುಷಿ ನೋಡಿ ಅವರಿಗೆ ಹೊಟ್ಟೆ ಕಿಚ್ಚು. ಮಹದಾಯಿ ಭದ್ರಾ ನೀರಾವರಿ ಯೋಜನೆ ವಿಚಾರದಲ್ಲಿ ಜನರಿಗೆ ಮೋಸ ಮಾಡುವ ಪ್ರವೃತ್ತಿ ಬಿಜೆಪಿಯದ್ದಾಗಿದೆ
ಎಚ್‌.ಕೆ. ಪಾಟೀಲ ಸಚಿವ

ಬಿಜೆಪಿ ಜನಪ್ರತಿನಿಧಿಗಳು ಗೈರು; ಕಾಂಗ್ರೆಸ್ಸಿನವರ ಕಾರುಬಾರು

ರಾಜ್ಯ ಸರ್ಕಾರದ ಭೂ ಸಮರ್ಪಣಾ ಸಮಾವೇಶಕ್ಕೆ ಬಿಜೆಪಿ ಜನಪ್ರತಿನಿಧಿಗಳು ಗೈರಾದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇಲ್ಲದಿದ್ದರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವೇದಿಕೆ ಏರಿ ಕಾರುಬಾರು ನಡೆಸಿದರು. ಬಿಜೆಪಿಯ ಸಂಸದ ಬಸವರಾಜ ಬೊಮ್ಮಾಯಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು ಪ್ರದೀಪ್ ಶೆಟ್ಟರ್ ಅವರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿತ್ತು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಪ್ರಹ್ಲಾದ್ ಜೋಶಿ ಶೋಭಾ ಕರಂದ್ಲಾಜೆ ವಿ.ಸೋಮಣ್ಣ ಎಚ್‌.ಡಿ. ಕುಮಾರಸ್ವಾಮಿ ಹೆಸರುಗಳೂ ಇದ್ದವು. ಆದರೆ ಯಾರೊಬ್ಬರೂ ಸಮಾವೇಶದತ್ತ ಸುಳಿಯಲಿಲ್ಲ. ರಾಜ್ಯ ಸರ್ಕಾರದ ಸಮಾವೇಶದಲ್ಲಿ ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾಜಿ ಸಂಸದ ಐ.ಜಿ. ಸನದಿ ಮುಖಂಡರಾದ ಬಿ.ಎಚ್. ಬನ್ನಿಕೋಡ ಕೊಟ್ರೇಶಪ್ಪ ಬಸೇಗಣ್ಣಿ ಅರವಿಂದ ಲಿಂಬಿಕಾಯಿ ಸಂಜೀವಕುಮಾರ ನೀರಲಗಿ ದರ್ಶನ ಲಮಾಣಿ ಹಾಗೂ ಇತರರು ವೇದಿಕೆ ಏರಿ ಕುಳಿತು ಶಿಷ್ಟಾಚಾರ ಉಲ್ಲಂಘಿಸಿದರು. ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರ ಸಹೋದರರು ಹಾಗೂ ಬೆಂಬಲಿಗರು ಸಹ ಆಹ್ವಾನವಿಲ್ಲದೇ ವೇದಿಕೆ ಏರಿ ಕುಳಿತಿದ್ದು ಕಂಡುಬಂತು. ಅವರೆಲ್ಲರಿಗೂ ಸೀಟು ಬಿಟ್ಟು ಕೊಟ್ಟ ಅಧಿಕಾರಿಗಳು ಸಮಾವೇಶ ಮುಗಿಯುವವರೆಗೂ ನಿಂತುಕೊಂಡಿದ್ದರು.

‘ಎಂಟನೇ ಬಾರಿ ಸಿ.ಎಂ. ಆಗಮನ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಎಂಟನೇ ಬಾರಿ ಹಾವೇರಿ ಜಿಲ್ಲೆಗೆ ಬಂದಿದ್ದಾರೆ. ಇದು ಜಿಲ್ಲೆಯ ಸೌಭಾಗ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು ‘ಅತೀ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ. ಈಗ ಹಕ್ಕುಪತ್ರ ನೀಡುವ ಮೂಲಕ ಜನರಿಗೆ ಮಾಲೀಕತ್ವದ ಹಕ್ಕು ಕೊಡಿಸಿದ್ದಾರೆ ಎಂದರು. ‘ಜನರಿಗೆ ಸೂರಿನ ಹಕ್ಕು ನೀಡಬೇಕು ಎಂಬುದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕನಸಾಗಿತ್ತು. ಈ ಕನಸನ್ನು ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೃಷ್ಣ ಬೈರೇಗೌಡ ಅವರು ನನಸಾಗಿಸಿದ್ದಾರೆ’ ಎಂದರು. 

‘50 ಸಾವಿರ ಹಕ್ಕುಪತ್ರದ ಸಂಕಲ್ಪ’

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ 50 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡುವುದು ನಮ್ಮ ಸಂಕಲ್ಪ’ ಎಂದು ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು ‘ಸಾವಿರ ದಿನಗಳ ಸಾರ್ಥಕ ಕ್ಷಣದ ಐತಿಹಾಸಿಕ ಸಮಾವೇಶವಿದು. ಹಕ್ಕುಪತ್ರ ಅನುಮೋದನೆ ನೀಡುವಲ್ಲಿ ಇಡೀ ರಾಜ್ಯದಲ್ಲಿಯೇ ನಮ್ಮ ತಾಲ್ಲೂಕು ಮೊದಲ ಸ್ಥಾನದಲ್ಲಿದೆ. ಈಗಾಗಲೇ 7747 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದೇವೆ. ಮುಂಬರುವ ದಿನಗಳಲ್ಲಿಯೂ ಅರ್ಹರಿಗೆ ಹಕ್ಕುಪತ್ರ ನೀಡುತ್ತೇವೆ’ ಎಂದರು. ‘ದೊಡ್ಡ ಹಾಳೆ ಕೊಡುತ್ತಾರೆ. ಇದೇನು ಮಹಾ ಸಾಧನೆ’ ಎಂಬುದಾಗಿ ಸಂಸದ ಬಸವರಾಜ ಬೊಮ್ಮಾಯಿ ನಮ್ಮ ಕ್ಷೇತ್ರಕ್ಕೆ ಬಂದಾಗ ವ್ಯಂಗ್ಯವಾಡಿದ್ದರು. ಅವಾಗಲೇ ಇದನ್ನು ಸವಾಲಾಗಿ ಸ್ವೀಕರಿಸಿ ಈಗ ಹಕ್ಕುಪತ್ರ ನೀಡುತ್ತಿದ್ದೇವೆ. ಸಂಕ್ರಾಂತಿ ಶಿವರಾತ್ರಿ ಯುಗಾದಿ ರಮ್ಜಾನ್ ಬಕ್ರೀದ್ ಎಲ್ಲ ಹಬ್ಬಗಳೂ ಒಟ್ಟಿಗೆ ಬಂದಿವೆ’ ಎಂದು ಹೇಳಿದರು.

‘ಭೂ ವ್ಯಾಜ್ಯಕ್ಕೆ ದುಡಿದ ಹಣ ಖರ್ಚು’

‘ಭೂ ಮಾಲೀಕತ್ವಕ್ಕೆ ಭೂ ವ್ಯಾಜ್ಯವೇ ಪರ್ಯಾಯ ಪದವಾಗುತ್ತಿದೆ. ವ್ಯಾಜ್ಯ ಬಗೆಹರಿಸಿಕೊಳ್ಳಲು ಜನರು ಕಚೇರಿ ಹಾಗೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ದುಡಿದ ಹಣವನ್ನೆಲ್ಲ ಖರ್ಚು ಮಾಡುತ್ತಿದ್ದಾರೆ. ವ್ಯಾಜ್ಯ ಕಡಿಮೆ ಮಾಡಲು ಜನರು ನೆಮ್ಮದಿಯಾಗಿ ಬದುಕಲು ಭೂ ಮಾಲೀಕತ್ವದ ಖಚಿತತೆ ಇರಬೇಕೆಂದು ಹಕ್ಕುಪತ್ರ ನೀಡುವ ಗ್ಯಾರಂಟಿ ನೀಡಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಅವರು ‘ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಮಾಲೀಕತ್ವ ಪಡೆದು ಮೋಸ ಮಾಡಲಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲು ಪಹಣಿ ಪತ್ರಕ್ಕೆ ಆಧಾರ್ ಜೋಡಣೆ ಮಾಡಲಾಗಿದೆ’ ಎಂದರು. ‘ಮೃತರ ಹೆಸರಿನಲ್ಲಿದ್ದ ಜಮೀನಿನ ಮಾಲೀಕತ್ವ ವರ್ಗಾವಣೆ ಕಷ್ಟವಾಗಿತ್ತು. ನಮ್ಮ ಸರ್ಕಾರ 1 ಸಾವಿರ ದಿನಗಳಲ್ಲಿ 14.48 ಲಕ್ಷ ಜಮೀನುಗಳನ್ನು ವಾರಸುದಾರರ ಹೆಸರಿಗೆ ಇ–ಪೋತಿ ಮಾಡಲಾಗಿದೆ. ಹಳೇ ಸರ್ಕಾರ ಕೇವಲ 8500 ದರಖಾಸ್ತ್ ಪೋಡಿ ಮಾಡಿತ್ತು. ನಮ್ಮ ಸರ್ಕಾರ 1.96 ಲಕ್ಷ ದರಖಾಸ್ತ್ ಪೋಡಿ ಮಾಡಿದೆ. ತಿಂಗಳಿಗೆ 1.34 ಲಕ್ಷ ಸರ್ವೇ ಮಾಡುತ್ತಿದ್ದೇವೆ. ಹಳೇ ಸರ್ಕಾರ ಕೇವಲ 40 ಲಕ್ಷ ಜಮೀನು ಪೋಡಿ ಮಾಡಿತ್ತು. ನಾವು 60 ಲಕ್ಷ ಪೋಡಿ ಮಾಡಿ ಮುಗಿಸಿದ್ದೇವೆ’ ಎಂದರು. ‘ಕಂದಾಯ ಇಲಾಖೆಯನ್ನು ಕಾಗದ ರಹಿತ ಮಾಡಲು 69 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ನಮ್ಮ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ತಹಶೀಲ್ದಾರ್ ನ್ಯಾಯಾಲಯದಲ್ಲಿ 10774 ಪ್ರಕರಣ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 73624 ಪ್ರಕರಣ ಬಾಕಿ ಇದ್ದವು. ಈಗ ತಹಶೀಲ್ದಾರ್ ನ್ಯಾಯಾಲಯದಲ್ಲಿ 492 ಪ್ರಕರಣ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 11990 ಪ್ರಕರಣ ಮಾತ್ರ ಬಾಕಿ ಇವೆ. ಲ್ಯಾಂಡ್‌ಬಿಟ್ ಮೂಲಕ ಸರ್ಕಾರದ 14.30 ಲಕ್ಷ ಆಸ್ತಿ ಗುರುತಿಸಿದ್ದೇವೆ’ ಎಂದು ಹೇಳಿದರು. ‘8500 ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಲು 750 ಸರ್ಕಾರಿ ಸರ್ವೇಯರ್ ಹಾಗೂ 34 ಎಡಿಎಲ್‌ಆರ್ ನೇಮಕ ಮಾಡಿಕೊಳ್ಳಲು 150 ರೋವರ್ಸ್ ಖರೀದಿಸಲು ಸಿ.ಎಂ. ಒಪ್ಪಿಗೆ ನೀಡಿದ್ದಾರೆ. ಕಾವೇರಿ ಮೂಲಕ ನೋಂದಣಿಗೂ ಆಧಾರ್ ಕಡ್ಡಾಯಗೊಳಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.