ಹಾವೇರಿ: ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ ರೂಪಗೊಂಡಿರುವ ಹಾವೇರಿಯಲ್ಲಿ ಸದ್ಯ ಎಂಟು ತಾಲ್ಲೂಕುಗಳಿದ್ದು, ಮತ್ತಷ್ಟು ಹೊಸ ತಾಲ್ಲೂಕುಗಳನ್ನು ರಚಿಸಬೇಕೆಂಬ ಕೂಗು ಕೇಳಿಬರುತ್ತಿದೆ.
ಜನಸಂಖ್ಯೆ ಹಾಗೂ ಇತರ ವಿಚಾರಗಳನ್ನು ಮುಂದಿಟ್ಟುಕೊಂಡು ಹೊಸ ತಾಲ್ಲೂಕು ರಚನೆಗಾಗಿ ಜನರು ಹೋರಾಟ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಪದೇ ಪದೇ ಮನವಿ ಪತ್ರ ನೀಡುತ್ತಿದ್ದಾರೆ. ಇದರ ಜೊತೆಯಲ್ಲಿಯೇ ಪ್ರತಿಭಟನೆ, ಮೆರವಣಿಗೆ ಹಾಗೂ ಬಂದ್ ಸಹ ಆಚರಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿದ್ದವು. 2018ರಲ್ಲಿ ರಟ್ಟೀಹಳ್ಳಿಯನ್ನು ಹೊಸ ತಾಲ್ಲೂಕು ಆಗಿ ಘೋಷಿಸಲಾಯಿತು. ಈಗ ಎಂಟು ತಾಲ್ಲೂಕುಗಳಿದ್ದು, ಇದರ ಜೊತೆಯಲ್ಲಿಯೇ ಮತ್ತಷ್ಟು ತಾಲ್ಲೂಕುಗಳನ್ನು ಮಾಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಈಗಾಗಲೇ ‘ತಾಲ್ಲೂಕು ಆಡಳಿತ’ ನಡೆಯುತ್ತಿದೆ. ಆದರೆ, ಹೊಸ ರಟ್ಟೀಹಳ್ಳಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಲವು ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲ. ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. 63 ಗ್ರಾಮಗಳ ಜನರು ಇಂದಿಗೂ ಸರ್ಕಾರದ ಕೆಲ ಕೆಲಸಗಳಿಗಾಗಿ ಹಿರೇಕೆರೂರಿಗೆ ಅಲೆದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮತ್ತೊಂದು ಹೊಸ ತಾಲ್ಲೂಕು ರಚನೆಯಾದರೆ, ಅದರ ಅಭಿವೃದ್ಧಿ ಹೇಗೆ ? ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.
ಜಿಲ್ಲೆಯ ಬಂಕಾಪುರ, ಗುತ್ತಲ, ತಿಳವಳ್ಳಿ, ಅಕ್ಕಿಆಲೂರು, ತಡಸ ಹಾಗೂ ಕರ್ಜಗಿ ಗ್ರಾಮಗಳನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂದು ಅಲ್ಲಿಯ ಜನರು ಹೋರಾಟ ಆರಂಭಿಸಿದ್ದಾರೆ. ಬಂಕಾಪುರ ಹಾಗೂ ಗುತ್ತಲ ಹೊಸ ತಾಲ್ಲೂಕು ಹೋರಾಟ ಸಮಿತಿ ಚುರುಕಿನಿಂದ ಕೆಲಸ ಮಾಡುತ್ತಿದೆ. ಪ್ರಾಶಸ್ತ್ಯದ ಮೂಲಕ ಹೊಸ ತಾಲ್ಲೂಕು ರಚನೆಗೆ ಸರ್ಕಾರ ಮುಂದಾದರೆ, ಜಿಲ್ಲೆಯಲ್ಲಿ ತಮ್ಮೂರಿಗೆ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸುತ್ತಿದೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿಯೇ ಬಂಕಾಪುರ ತಾಲ್ಲೂಕು ಹೋರಾಟ ಸಮಿತಿಯು ಬಂದ್‌ಗೆ ಕರೆ ನೀಡಿತ್ತು. ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನೂ ಕೊಟ್ಟಿತ್ತು. ಚುನಾವಣೆ ಮುಗಿದು ಹಲವು ತಿಂಗಳಾಗಿದ್ದು, ಈಗ ಪುನಃ ಹೋರಾಟಕ್ಕೆ ಚಾಲನೆ ನೀಡಿದೆ.
ಗುತ್ತಲದಲ್ಲೂ ಈಚೆಗೆ ತಾಲ್ಲೂಕು ರಚನೆಗಾಗಿ ಹೋರಾಟ ನಡೆದಿದೆ. ಶಾಸಕ ರುದ್ರಪ್ಪ ಲಮಾಣಿ ಅವರಿಗೂ ಹೋರಾಟಗಾರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದೆಂದು ಶಾಸಕ ಭರವಸೆ ನೀಡಿದ್ದಾರೆ.
ತಿಳವಳ್ಳಿಯಲ್ಲೂ ಈಚೆಗೆ ಹೋರಾಟಗಾರರು ಸಭೆ ನಡೆಸಿ, ರೂಪುರೇಷೆ ಬಗ್ಗೆ ಚರ್ಚಿಸಿದ್ದಾರೆ. ಅಕ್ಕಿಆಲೂರು, ತಡಸ, ಕರ್ಜಗಿ ಜನರ ಹೋರಾಟವೂ ತೆರೆಮರೆಯಲ್ಲಿ ಸಾಗಿದೆ. ಸರ್ಕಾರದಿಂದ ಹೊಸ ತಾಲ್ಲೂಕು ಘೋಷಣೆ ಸಂಬಂಧ ಯಾವುದಾದರೂ ಪ್ರಸ್ತಾವಗಳು ಸಲ್ಲಿಕೆಯಾದರೆ, ಅಂಥ ಸಂದರ್ಭದಲ್ಲಿ ತೀವ್ರ ಹೋರಾಟ ನಡೆಸಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
‘ಬಂಕಾಪುರ ಹಾಗೂ ಕರ್ಜಗಿ, ಬ್ರಿಟಿಷರ ಕಾಲದಲ್ಲಿ ತಾಲ್ಲೂಕುಗಳಾಗಿದ್ದವು. ಇದರ ದಾಖಲೆಗಳು ಇಂದಿಗೂ ನೋಡಲು ಸಿಗುತ್ತವೆ’ ಎಂದು ಜನರು ಹೇಳುತ್ತಿದ್ದಾರೆ. ದಿನ ಕಳೆದಂತೆ ಎರಡೂ ತಾಲ್ಲೂಕುಗಳು ಕಣ್ಮರೆಯಾಗಿ, ಶಿಗ್ಗಾವಿ– ಹಾವೇರಿ ತಾಲ್ಲೂಕುಗಳು ಉದಯಿಸಿದವು. ಈಗ ಹಳೇ ದಾಖಲೆ ಮುಂದಿಟ್ಟುಕೊಂಡು ಬಂಕಾಪುರ–ಕರ್ಜಗಿ ಜನರು, ಹೊಸ ತಾಲ್ಲೂಕಿನ ಬೇಡಿಕೆ ಈಡೇರಿಕೆಗಾಗಿ ಹೋರಾಡುತ್ತಿದ್ದಾರೆ.
(ಪೂರಕ ಮಾಹಿತಿ: ಎಂ.ವಿ. ಗಾಡದ, ದುರುಗಪ್ಪ ಕೆಂಗನಿಂಗಪ್ಪನವರ, ಮಾಲತೇಶ್ ಆರ್.)
ಐತಿಹಾಸಿಕ ಹಿನ್ನೆಲೆಯುಳ್ಳ ಬಂಕಾಪುರ 1961ಕ್ಕೂ ಮುನ್ನ ತಾಲ್ಲೂಕು ಕೇಂದ್ರವಾಗಿದ್ದ ದಾಖಲೆಗಳು ನಮ್ಮ ಬಳಿಯಿವೆ. ಅದರ ಆಧಾರದಲ್ಲಿ ಹೊಸ ತಾಲ್ಲೂಕಿಗಾಗಿ ಹೋರಾಟ ನಡೆಸುತ್ತಿದ್ದೇವೆ ರಟ್ಟೀಹಳ್ಳಿಗಿಂತ ದೊಡ್ಡ ಪಟ್ಟಣವಾಗಿರುವ ಗುತ್ತಲ ಎಲ್ಲ ಮಾನದಂಡಗಳಿಂದಲೂ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿದೆ. ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಿ ತಾಲ್ಲೂಕು ಘೋಷಣೆ ಮಾಡಬೇಕುಎ.ಕೆ. ಆದವಾನಿಮಠ ಬಂಕಾಪುರ ತಾಲ್ಲೂಕು ಹೋರಾಟ ಸಮಿತಿ
ರಟ್ಟೀಹಳ್ಳಿಗಿಂತ ದೊಡ್ಡ ಪಟ್ಟಣವಾಗಿರುವ ಗುತ್ತಲ, ಎಲ್ಲ ಮಾನದಂಡಗಳಿಂದಲೂ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿದೆ. ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಿ ತಾಲ್ಲೂಕು ಘೋಷಣೆ ಮಾಡಬೇಕುಈರಪ್ಪ ಲಮಾಣಿ ಗುತ್ತಲ ತಾಲ್ಲೂಕು ಹೋರಾಟ ಸಮಿತಿ
1961ರಿಂದ ಬಂಕಾಪುರ ಹೋರಾಟ
ರಾಜರ ಕಾಲದಿಂದಲೂ ಉಪ ರಾಜಧಾನಿ ಎಂದೇ ಖ್ಯಾತಿ ಪಡೆದಿದ್ದ ಬಂಕಾಪುರವನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂಬ ಹೋರಾಟ 1961ರಿಂದ ಚಾಲ್ತಿಯಲ್ಲಿದೆ. 1961ಕ್ಕೂ ಮುನ್ನ ತಾಲ್ಲೂಕು ಎಂದೇ ಗುರುತಿಸಿಕೊಂಡಿದ್ದ ಬಂಕಾಪುರ ನಂತರದ ದಿನಗಳಲ್ಲಿ ಶಿಗ್ಗಾವಿ ತಾಲ್ಲೂಕಿನಲ್ಲಿ ಸೇರ್ಪಡೆಗೊಂಡಿತೆಂದು ಜನರು ಹೇಳುತ್ತಿದ್ದಾರೆ. ‘35 ಸಾವಿರ ಜನಸಂಖ್ಯೆ ಇರುವ ಬಂಕಾಪುರ ತಾಲ್ಲೂಕು ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ.
ಬಂಕಾಪುರ ಸುತ್ತಲೂ 49 ಹಳ್ಳಿಗಳಿವೆ. ಹಾನಗಲ್–ಸವಣೂರು ತಾಲ್ಲೂಕಿನ ಕೆಲ ಹಳ್ಳಿಗಳು ಹತ್ತಿರದಲ್ಲಿವೆ. ಎಲ್ಲವನ್ನೂ ಸೇರಿಸಿಕೊಂಡು ಹೊಸ ತಾಲ್ಲೂಕು ಮಾಡಬಹುದು’ ಎಂದು ಹೋರಾಟ ಸಮಿತಿಯ ಎ.ಕೆ. ಆದವಾನಿಮಠ ಹೇಳಿದರು. ‘ಬಂಕಾಪುರ ಸಾಕಷ್ಟು ಹಿಂದುಳಿದಿದೆ. 139 ಎಕರೆ ಕೋಟೆ ಪ್ರದೇಶವಿದ್ದು ತಾಲ್ಲೂಕು ಕೇಂದ್ರ ಮಾಡಲು ಸೂಕ್ತ ಜಾಗ ಲಭ್ಯವಿದೆ. ಪ್ರತ್ಯೇಕ ತಾಲ್ಲೂಕಿನ ನಕಾಶೆ ಸಿದ್ಧಪಡಿಸಿ ಹೋರಾಟ ಆರಂಭಿಸಿದ್ದೇವೆ. ಶಾಸಕರಿಗೂ ಮನವಿ ನೀಡಿದ್ದು ಅವರಿಂದ ಸ್ಪಂದನೆ ಸಿಕ್ಕಿದೆ’ ಎಂದರು.
72 ಗ್ರಾಮಗಳಿಗೆ ತಿಳವಳ್ಳಿ ಕೇಂದ್ರ
ಹಾನಗಲ್ ತಾಲ್ಲೂಕಿನ ತಿಳವಳ್ಳಿ ಸುತ್ತಮುತ್ತಲಿನ 21 ಗ್ರಾಮ ಪಂಚಾಯಿತಿ ವ್ಯಾಪ್ತಿಯ 72 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಹೀಗಾಗಿ ತಿಳವಳ್ಳಿಯನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂದು 1990ರಿಂದಲೇ ಹೋರಾಟ ನಡೆಯುತ್ತಿದೆ. ‘ತಿಳವಳ್ಳಿಯು ಭೌಗೋಳಿಕ ಆರ್ಥಿಕ ಸಾಮಾಜಿಕ ಶೈಕ್ಷಣಿಕ ರಾಜಕೀಯ ಔದ್ಯೋಗಿಕ ವ್ಯವಹಾರಿಕ ಹಾಗೂ ಐತಿಹಾಸಿಕವಾಗಿ ತಾಲ್ಲೂಕು ಕೇಂದ್ರವಾಗುವ ಅರ್ಹತೆ ಹೊಂದಿದೆ. 1994ರಲ್ಲಿ ಹುಂಡೇಕಾರ ಆಯೋಗವು ಸಹ ತಿಳವಳ್ಳಿ ತಾಲ್ಲೂಕು ಕೇಂದ್ರವಾಗಲು ಸೂಕ್ತವಾಗಿರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ’ ಎಂದು ಹೋರಾಟಗಾರರು ಹೇಳಿದರು.
‘ಹಿರೇಕೆರೂರ ಬ್ಯಾಡಗಿ ಮತ್ತು ಹಾನಗಲ್ ತಾಲ್ಲೂಕಿನ ಮಧ್ಯ ಭಾಗದಲ್ಲಿರುವ ತಿಳವಳ್ಳಿ 72 ಹಳ್ಳಿಗಳಿಗೆ ಸಮೀಪದಲ್ಲಿದೆ. ಇದನ್ನು ತಾಲ್ಲೂಕು ಮಾಡುವಂತೆ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅವರಿಗೂ ವಿವರವಾದ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ’ ಎಂದು ಹೇಳಿದರು.
1990ರಿಂದ ಗುತ್ತಲ ಜನರ ಹೋರಾಟ
ಹಾವೇರಿ ತಾಲ್ಲೂಕಿನ ಗುತ್ತಲದ ಜನರು 1999ರಿಂದ ಹೊಸ ತಾಲ್ಲೂಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಎಂ.ಪಿ. ಪ್ರಕಾಶ ಎಸ್.ಎಂ. ಕೃಷ್ಣ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಮನವಿ ಸಲ್ಲಿಸಿದ್ದಾರೆ. ಈಗ ಸಿದ್ದರಾಮಯ್ಯ ಅವರಿಗೂ ಮನವಿ ಕೊಟ್ಟಿದ್ದಾರೆ. ‘ಗುತ್ತಲದಲ್ಲಿ 21535 ಜನಸಂಖ್ಯೆಯಿದೆ. 2016ರಲ್ಲಿ ಗುತ್ತಲ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಜಿಲ್ಲಾ ಕೇಂದ್ರ–ತಾಲ್ಲೂಕು ಕೇಂದ್ರದಿಂದ ಗುತ್ತಲ 40 ಕಿ.ಮೀ. ದೂರದಲ್ಲಿದೆ. ಪೊಲೀಸ್ ಠಾಣೆಯೂ ಇದೆ. ಗುತ್ತಲ ಸುತ್ತಮುತ್ತ 50 ಹಳ್ಳಿಗಳಿವೆ. ವಿಜಯನಗರ ಜಿಲ್ಲೆಯ ಗಡಿಯೂ ಇದಾಗಿದೆ. ತಾಲ್ಲೂಕು ಕೇಂದ್ರವಾದರೆ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಜನರು ಹೇಳುತ್ತಿದ್ದಾರೆ.
‘ಸರ್ಕಾರಿ ಕೆಲಸಕ್ಕಾಗಿ ಗುತ್ತಲ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ದೂರದ ಹಾವೇರಿಗೆ ಹೋಗಿ ಬರಬೇಕು. ಗುತ್ತಲ ತಾಲ್ಲೂಕು ಆದರೆ ಅಲೆದಾಟ ತಪ್ಪಲಿದೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.