ರಟ್ಟೀಹಳ್ಳಿ ಪಟ್ಟಣದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯಕಾಲುವೆಗೆ ಶಾಸಕ ಯು.ಬಿ. ಬಣಕಾರ ದಂಪತಿ ಶುಕ್ರವಾರ ಬಾಗಿನ ಅರ್ಪಣೆ ಮಾಡಿದರು. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಭಾಗವಹಿಸಿದ್ದರು
ರಟ್ಟೀಹಳ್ಳಿ: ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ₹25 ಕೋಟಿ ವಿಶೇಷ ಅನುದಾನ ನೀಡಿದ್ದು, ಅದರಲ್ಲಿ ₹10 ಕೋಟಿ ವೆಚ್ಚದಲ್ಲಿ ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕಿನ 110 ಮುಜರಾಯಿ ದೇವಸ್ಥಾನಗಳ ಅಭಿವೃದ‍್ಧಿಗೆ ಹಣ ನೀಡಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯಕಾಲುವೆಗೆ ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಪತ್ನಿ ಅನ್ನಪೂರ್ಣ ಬಣಕಾರ ಸೇರಿದಂತೆ ಅಪಾರ ಅಭಿಮಾನಿ ಬಳಗದೊಂದಿಗೆ ಆಗಮಿಸಿ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದರು.
ಇದಕ್ಕೂ ಮೊದಲು ಶಾಸಕರು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ₹25 ಲಕ್ಷ, ಮಹಾಲಕ್ಷ್ಮೀ ದೇವಸ್ಥಾನಕ್ಕೆ ₹10 ಲಕ್ಷ ಅನುದಾನ ನೀಡಿ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತುಂಗಾ ಮೇಲ್ದಂಡೆ ಕಾಲುವೆ ಅಭಿವೃದ‍್ಧಿಗೆ ₹39 ಕೋಟಿ ನೀಡಿದ್ದು, ಕಾಲುವೆ ಅಭಿವೃದ್ಧಿ ಕಾಮಗಾರಿ ಕೈಕೊಳ‍್ಳಲಾಗುತ್ತಿದೆ. ಕಳೆದ ಸಾರಿ ನೀಡಿದ ಭರವಸೆಯಂತೆ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ಹೊಂದಿ ಹಿರೇಕೆರೂರ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ಸಿ.ಸಿ. ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.
ಈ ವರ್ಷ ಮುಖ್ಯಮಂತ್ರಿಗಳು ₹50 ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ₹10 ಕೋಟಿ ಮುಜರಾಯಿ ಇಲಾಖೆಯ 98 ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಸರ್ಕಾರದ ₹5 ಕೋಟಿ ಅನುದಾನದಲ್ಲಿ ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣದ ಮೂರು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಒಂದು ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಇನ್ನೂ ಎರಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಶೀಘ್ರ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಮುಖಂಡರಾದ ಪಿ.ಡಿ. ಬಸನಗೌಡ್ರ, ರವೀಂದ್ರ ಮುದಿಯಪ್ಪನವರ, ವೀರನಗೌಡ ಪ್ಯಾಟೀಗೌಡ್ರ, ಎ.ಕೆ.ಪಾಟೀಲ, ಮಹೇಶ ಗುಬ್ಬಿ, ಮಂಜುನಾಥ ತಂಬಾಕದ, ವಸಂತ ದ್ಯಾವಕ್ಕಳವರ, ನಿಂಗಪ್ಪ ಚಳಗೇರಿ, ವಿಜಯ ಅಂಗಡಿ, ಅಮೃತಾ ಯತ್ನಳ್ಳಿ, ಸುನೀತಾ ದ್ಯಾವಕ್ಕಳವರ, ಲಲಿತಾ ಚನ್ನಗೌಡ್ರ, ರಮೇಶ ಮಡಿವಾಳರ,ಶಿವಕುಮಾರ ಉಪ್ಪಾರ, ಶಂಕರ ಚನ್ನಗೌಡ್ರ, ಮಂಜು ಆಸ್ವಾಲಿ, ಮಂಜುಳಾ ಮರಿಗೌಡ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.