ದಂಡ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ಹಾವೇರಿ: ದ್ವಿಚಕ್ರ ವಾಹನದ ದಾಖಲೆ ತೋರಿಸದೇ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಶಿವನಗೌಡ ನಿಂಗನಗೌಡ ಪಾಟೀಲ ಎಂಬುವವರಿಗೆ ₹ 17 ಸಾವಿರ ದಂಡ ವಿಧಿಸಲಾಗಿದೆ.
ಹಾವೇರಿ ಸಂಚಾರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯ, ಶಿವನಗೌಡ ಅವರಿಗೆ ದಂಡ ವಿಧಿಸಿದೆ. ತಪ್ಪು ಒಪ್ಪಿಕೊಂಡಿರುವ ಆರೋಪಿ ಶಿವನಗೌಡ, ಸ್ಥಳದಲ್ಲೇ ದಂಡ ಪಾವತಿಸಿ ರಶೀದಿ ಪಡೆದುಕೊಂಡಿದ್ದಾರೆ.
ಘಟನೆ ವಿವರ: ‘ಗ್ರಾಮ ಪಂಚಾಯಿತಿಯೊಂದರ ಮಾಜಿ ಅಧ್ಯಕ್ಷನೆಂದು ಹೇಳಿಕೊಂಡಿದ್ದ ಶಿವನಗೌಡ, ಆಗಸ್ಟ್ 2ರಂದು ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಜೆ.ಪಿ. ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು, ವಾಹನ ತಡೆದು ದಾಖಲೆ ಕೇಳಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದಾಖಲೆ ನೀಡಲು ನಿರಾಕರಿಸಿದ್ದ ಶಿವನಗೌಡ, ಬೈಕ್‌ನ್ನು ಸ್ಥಳದಲ್ಲೇ ಬಿಟ್ಟಿದ್ದ. ‘ನಾನು ಯಾರು ಗೊತ್ತಾ? ನನ್ನ ಬೈಕ್ ಇಲ್ಲೇ ಬಿಟ್ಟು ಹೋಗುತ್ತೇನೆ. ಸ್ವಲ್ಪ ಸಮಯ ಬಿಟ್ಟು ನೀನೇ ನನ್ನ ಮನೆಗೆ ಬೈಕ್ ತಂದುಕೊಡುತ್ತೀಯಾ? ನೋಡ್ತಾ ಇರು’ ಎಂದು ಬೆದರಿಸಿದ್ದ. ಈ ದೃಶ್ಯವನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ, ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಪೊಲೀಸರ ಜೊತೆಗೆಯೇ ವಾಗ್ವಾದ ನಡೆಸಿದ್ದ ಆರೋಪಿ ಶಿವನಗೌಡ, ಎಎಸ್‌ಐ ಸಿ.ವೈ. ತಹಶೀಲ್ದಾರ್ ಹಾಗೂ ಇತರರನ್ನು ಏಕವಚನದಲ್ಲಿ ನಿಂದಿಸಿ ಗಲಾಟೆ ಮಾಡಿದ್ದ. ವಿಷಯ ತಿಳಿದ ಪಿಎಸ್‌ಐ ಶೈಲಾಶ್ರೀ, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು’ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.