ADVERTISEMENT

ಹಾವೇರಿ| ನೆಲದಡಿ ಇರುವ ವಾಲ್ವ್‌ಗಳು ಕೈಗೆ ಸಿಗದ ಸ್ಥಿತಿ; ನೀರಗಂಟಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 3:59 IST
Last Updated 9 ನವೆಂಬರ್ 2025, 3:59 IST
ಹಾವೇರಿಯ ಎಂ.ಜಿ.ರಸ್ತೆ ಬಳಿ ಶುಕ್ರವಾರ ರಾತ್ರಿ ನೆಲದ ಮೇಲೆ ಮಲಗಿ ನೀರಿನ ವಾಲ್ವ್‌ ಸರಿಪಡಿಸಿದ ನೀರಗಂಟಿ 
ಹಾವೇರಿಯ ಎಂ.ಜಿ.ರಸ್ತೆ ಬಳಿ ಶುಕ್ರವಾರ ರಾತ್ರಿ ನೆಲದ ಮೇಲೆ ಮಲಗಿ ನೀರಿನ ವಾಲ್ವ್‌ ಸರಿಪಡಿಸಿದ ನೀರಗಂಟಿ    

ಹಾವೇರಿ: ಜಿಲ್ಲಾ ಕೇಂದ್ರವಾಗಿ ಹಲವು ವರ್ಷವಾದರೂ ನಗರದಲ್ಲಿ 10 ದಿನದಿಂದ 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಈ ನಡುವೆಯೇ ನೀರು ಸರಬರಾಜು ಮಾಡುವ ವಾಲ್ವ್‌ಗಳು ಸಹ ಹಾಳಾಗುತ್ತಿದ್ದು, ನೀರಗಂಟಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರಾ ನದಿಯ ಕಂಚಾರಗಟ್ಟಿ ಬಳಿಯಿಂದ ನಗರಕ್ಕೆ ನೀರು ತಂದು, ಜಿಲ್ಲಾ ಕ್ರೀಡಾಂಗಣ ಬಳಿಯ ಘಟಕದಲ್ಲಿ ಶುದ್ದೀಕರಣ ಮಾಡಿ ಸರಬರಾಜು ಮಾಡಲಾಗುತ್ತದೆ. ನಗರದ ಪ್ರತಿ ವಾರ್ಡ್‌ನ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಅಲ್ಲಲ್ಲಿ ಗುಂಡಿಗಳನ್ನು ನಿರ್ಮಿಸಿ ವಾಲ್ವ್‌ಗಳನ್ನು ಅಳವಡಿಸಲಾಗಿದೆ.

ಇದೇ ವಾಲ್ವ್‌ಗಳು ಕ್ರಮೇಣ ಹಾಳಾಗುತ್ತಿದ್ದು, ನೀರು ಸರಬರಾಜು ಮಾಡುವ ಜವಾಬ್ದಾರಿ ವಹಿಸಿಕೊಂಡಿರುವ ನೀರಗಂಟಿಗಳು ಪ್ರತಿ ಬಾರಿಯೂ ಹರಸಾಹಸ ಪಡುತ್ತಿದ್ದಾರೆ. ನೆಲದಡಿ ಇರುವ ವಾಲ್ವ್‌ಗಳು ಕೈಗೆ ಸಿಗದ ಸ್ಥಿತಿಯಲ್ಲಿವೆ. ಇದೇ ಕಾರಣಕ್ಕೆ ಹಲವು ನೀರಗಂಟಿಗಳು, ನೆಲದ ಮೇಲೆ ಮಲಗಿ ಗುಂಡಿಯಲ್ಲಿ ಕೈ ಹಾಕಿ ವಾಲ್ವ್‌ಗಳನ್ನು ಸರಿಪಡಿಸಬೇಕಿದೆ.

ADVERTISEMENT

ಎಂ.ಜಿ. ರಸ್ತೆ ಬಳಿಯಲ್ಲಿ ಶುಕ್ರವಾರ ರಾತ್ರಿ ನೀರಗಂಟಿಯೊಬ್ಬರು ವಾಲ್ವ್‌ ಸರಿಪಡಿಸಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ರಸ್ತೆ ಪಕ್ಕದಲ್ಲಿರುವ ಗುಂಡಿಯಲ್ಲಿ ವಾಲ್ವ್‌ ಹಾಕಲಾಗಿದೆ. ನೀರಗಂಟಿ ಸ್ಥಳಕ್ಕೆ ಹೋದಾಗ, ವಾಲ್ವ್‌ ಕೈಗೆ ಸಿಗಲಿಲ್ಲ. ಹೀಗಾಗಿ,  ನೆಲದ ಮೇಲೆ ಮಲಗಿ ಗುಂಡಿಯಲ್ಲಿ ಕೈ ಹಾಕಿ ವಾಲ್ವ್‌ ಸರಿಪಡಿಸಿದರು. ನಂತರ, ವಾಲ್ವ್‌ ತಿರುವಿ ನೀರು ಸರಬರಾಜು ಮಾಡಿದರು.‌

ವಾಲ್ವ್ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರಸಭೆ ಅಧಿಕಾರಿಗಳು ಲಭ್ಯರಾಗಲಿಲ್ಲ.

‘ಸಂಬಳ ಪಾವತಿಯಲ್ಲೂ ವಿಳಂಬ’

‘ಹಾವೇರಿ ನಗರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ 35 ನೀರುಗಂಟಿಗಳು ಕೆಲಸ ಮಾಡುತ್ತಿದ್ದೇವೆ. ನಗರದ ಪ್ರತಿಯೊಂದು ವಾರ್ಡ್‌ಗಳಿಗೆ ನೀರು ಸರಬರಾಜು ಹಾಗೂ ನೀರು ನಿರ್ವಹಣೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಆದರೆ ಸಮರ್ಪಕವಾಗಿ ಸಂಬಳ ಸಿಗುತ್ತಿಲ್ಲ. ಈ ಬಗ್ಗೆ ನಗರಸಭೆ ಎದುರು ಇತ್ತೀಚೆಗೆ ಪ್ರತಿಭಟನೆ ಸಹ ನಡೆಸಲಾಗಿದೆ’ ಎಂದು ನೀರಗಂಟಿಗಳು ಹೇಳಿದರು.  ‘ನೀರು ಸರಬರಾಜು ವ್ಯವಸ್ಥೆ ಹಳೆಯದಾಗಿದೆ. ವಾಲ್ವ್ ಪೈಪ್‌ ಹಾಗೂ ಇತರೆ ವಸ್ತುಗಳು ಸಹ ಹಳೆಯವು. ದುರಸ್ತಿಯಲ್ಲೇ ನಗರಸಭೆಯವರು ಕಾಲಹರಣ ಮಾಡುತ್ತಿದ್ದಾರೆ. ನೀರು ಸರಬರಾಜು ಸಹ ಕಷ್ಟವಾಗುತ್ತಿದೆ. ನೀರು ಸರಬರಾಜು ವ್ಯವಸ್ಥೆ ಹೊಸದಾಗಿ ಆಗಬೇಕಿದೆ’ ಎಂದು ನಗರದ ನಿವಾಸಿಯೊಬ್ಬರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.