ADVERTISEMENT

ಹಾವೇರಿ | ‘ಯುವಜನತೆಯಿಂದ ಧರ್ಮದ ಉಳಿವು ಸಾಧ್ಯ’

ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ | ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಭಾಗಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:18 IST
Last Updated 16 ಡಿಸೆಂಬರ್ 2025, 2:18 IST
ಹಾವೇರಿಯ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ’ದ ನಾಲ್ಕನೇ ದಿನವಾದ ಸೋಮವಾರ ‘ಯುವ ಸಮ್ಮೇಳನ’ ಜರುಗಿತು
ಹಾವೇರಿಯ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ’ದ ನಾಲ್ಕನೇ ದಿನವಾದ ಸೋಮವಾರ ‘ಯುವ ಸಮ್ಮೇಳನ’ ಜರುಗಿತು   

ಹಾವೇರಿ: ‘ಯುವಜನತೆಯು ಧರ್ಮದತ್ತ ಮುಖಮಾಡಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ. ಇಂದಿನ ಯುವಜನತೆ ಧಾರ್ಮಿಕತೆಯತ್ತ ಬರಬೇಕು. ಶಾಖಾಹಾರಿಗಳಾಗಬೇಕು. ಭಾರತದ ಘನತೆ ಎತ್ತಿ ಹಿಡಿಯಬೇಕು’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ’ದ ನಾಲ್ಕನೇ ದಿನವಾದ ಸೋಮವಾರ ಜರುಗಿದ ‘ಯುವ ಸಮ್ಮೇಳನ’ದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ದೇಶದ ಜನಸಂಖ್ಯೆಯಲ್ಲಿ ಶೇ. 70ರಷ್ಟು ಯುವಜನತೆ ಇದ್ದಾರೆ. ಇಡೀ ಜಗತ್ತನ್ನು ನಡುಗಿಸುವ ಶಕ್ತಿ ಭಾರತಕ್ಕಿದೆ. ಯುವಜನತೆಯು ವ್ಯಸನಗಳಿಗೆ ದಾಸರಾಗದೇ, ವ್ಯಸನ ಮುಕ್ತರಾಗಿ ದೇಶಕ್ಕೆ ಹೊಸ ಶಕ್ತಿಯಾಗಲು ಸಂಕಲ್ಪ ಮಾಡಬೇಕು’ ಎಂದರು.

ADVERTISEMENT

‘ವಿದೇಶಿಗರು ಭಾರತದ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಆದರೆ, ದೇಶದ ಜನತೆ ನಮ್ಮ ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿ ಅಳವಡಿಸಿಕೊಳ್ಳತ್ತಿರುವುದು ವಿಷಾದಕರ ಸಂಗತಿ. ಜಗತ್ತಿನ ಇತಿಹಾಸದಲ್ಲಿ ಭಾರತಕ್ಕೆ ವಿಶೇಷ ವೈಶಿಷ್ಟವಿದೆ. ವಿದೇಶಿಗರು, ಭಾರತದ ಸಂಸ್ಕೃತಿ, ಸಂಸ್ಕಾರ, ಮಠ- ಹಾಗೂ ಮಸೀದಿಗಳ ಪರಂಪರೆ ಕಣ್ತುಂಬಿಕೊಳ್ಳಲು ನಮ್ಮ ದೇಶಕ್ಕೆ ಬರುತ್ತಾರೆ. ಭಾರತ ಆರ್ಥಿಕತೆ ಮೇಲೆ ನಿಂತಿಲ್ಲ. ಇಲ್ಲಿಯ ಪಂಪರೆ-, ಸಂಸ್ಕೃತಿ ಹಾಗೂ ಸಂಸ್ಕಾರಗಳ ಮೇಲೆ ನಿಂತಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜ ಮಾತನಾಡಿ, ‘ದೇಶದಾದ್ಯಂತ ವಿದೇಶಿ ಸಂಸ್ಕೃತಿಯು ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸುವುದು ಅನಿವಾರ್ಯವಾಗಿದೆ. ನಮ್ಮ ಪರಂಪರೆ ಕುರಿತು ಹಿರಿಯರು, ಇಂದಿನ ಯುಪೀಳಿಗೆಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ಅರಿವು ಮೂಡಿಸಬೇಕು’ ಎಂದರು.

ಮೂಡಬಿದಿರೆಯ ಯುವರಾಜ ಜೈನ್‌ ಮಾತನಾಡಿ, ‘ಯುವಕರು ಉದ್ಯೋಗ ಹುಡುಕುವ ಬದಲು, ಉದ್ಯೋಗ ಸೃಷ್ಟಿಸುವಂತೆ ಬೆಳೆಯಬೇಕು. ಜ್ಞಾನದಿಂದ ಜಗತ್ತಿನಲ್ಲಿ ಹೆಸರು ಮಾಡಬಹುದು. ಮಕ್ಕಳಿಗೆ ಶಿಕ್ಷಣದ ಜೊತಗೆ ಸಂಸ್ಕಾರದ ಅವಶ್ಯಕತೆ ಇದೆ. ಪೋಷಕರು, ಮಕ್ಕಳಿಗೆ ಸಂಸ್ಕಾರ ನೀಡಬೇಕು’ ಎಂದರು.

ಕರ್ನಾಟಕ ಜೈನ್ ಅಸೋಸಿಯೇಶನ್ ಕಾರ್ಯಕಾರಿ ಮಂಡಳಿ ಸದಸ್ಯ ಎಸ್.ಎ. ವಜ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ದರ್ಶನ್ ಲಮಾಣಿ, ವಿಮಲಕುಮಾರ ಬೋಗಾರ, ಮಂಜುನಾಥ ಸುಧೀರ್ ಉಪಾಧ್ಯೆ, ಶಿವಬಸಪ್ಪ ಹಲಗಣ್ಣನವರ, ಬ್ರಹ್ಮಕುಮಾರ ಹೊಸೂರ, ಮದನಕುಮಾರ ಶೆಟ್ಟರ, ದೇವೇಂದ್ರ ಹಳ್ಳಿಯವರ, ಷಣ್ಮುಖಪ್ಪ ಚೂರಿ, ರಾಚಣ್ಣ ಮಾಗನೂರ, ಮಹಾವೀರ ಉಪಾಧ್ಯೆ, ನವೀನ ಜಗಶೆಟ್ಟಿ, ಪ್ರದೀಪ ಬಳಿಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.