ADVERTISEMENT

ಮುಗಿಯಲ್ಲ ಯುಜಿಡಿ, ಗುಂಡಿಗಳಲ್ಲೇ ಓಡಾಡಿ...

ದಶಕ ಕಳೆದರೂ ಅಂತ್ಯಗೊಳ್ಳದ ಕಾಮಗಾರಿ * ನಾಗರಿಕರಿಗೆ ತಪ್ಪುತ್ತಲೇ ಇಲ್ಲ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:30 IST
Last Updated 10 ನವೆಂಬರ್ 2019, 19:30 IST
ಹಾವೇರಿಯ ಅಶ್ವಿನಿನಗರದಲ್ಲಿ ಒಳಚರಂಡಿ ಮುಚ್ಚಳ ರಸ್ತೆಗಿಂತ ಎತ್ತರದಲ್ಲಿದೆ
ಹಾವೇರಿಯ ಅಶ್ವಿನಿನಗರದಲ್ಲಿ ಒಳಚರಂಡಿ ಮುಚ್ಚಳ ರಸ್ತೆಗಿಂತ ಎತ್ತರದಲ್ಲಿದೆ   

ಹಾವೇರಿ: ಗುತ್ತಿಗೆದಾರರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯುಜಿಡಿ ಕಾಮಗಾರಿ ವೇಗ ಕಳೆದುಕೊಂಡಿದೆ. ಆಮೆಗತಿಯ ಕಾರ್ಯವೈಖರಿಯಿಂದ ನಾಗರಿಕರಿಗೆ ನಿತ್ಯ ದೂಳಿನ ಮಜ್ಜನವಾಗುತ್ತಿದ್ದರೆ, ರಸ್ತೆಯಲ್ಲಿರುವ ಚೇಂಬರ್‌ಗಳು ಹಾಗೂ ಅದರ ಸುತ್ತ ಬಿದ್ದಿರುವ ಗುಂಡಿಗಳು ಸವಾರರನ್ನು ಹೈರಾಣಾಗಿಸಿವೆ. ಕಾಮಗಾರಿ ಶುರುವಾಗಿ ದಶಕ ಕಳೆದರೂ, ಮುಗಿಯುವ ಲಕ್ಷಣ ಮಾತ್ರ ಕಾಣುತ್ತಿಲ್ಲ.

31 ವಾರ್ಡ್‌ಗಳಿರುವ ಹಾವೇರಿ ನಗರವು 76 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. 2009ರಲ್ಲಿ ₹ 35 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಈವರೆಗೆ ಶೇ 70ರಷ್ಟು ಕೆಲಸ ಪೂರ್ಣಗೊಂಡಿದೆ. ಅಸಮರ್ಪಕ ಕಾರ್ಯವೈಖರಿಯ ಕಾರಣದಿಂದಮಾಮೂಲಿ ಚರಂಡಿಯಲ್ಲೇ ಒಳಚರಂಡಿ ನೀರು ಹರಿಯುತ್ತಿದೆ.

ಯುಜಿಡಿ ನೀರನ್ನು ಸಂಸ್ಕರಿಸಿ ಚರಂಡಿಗೆ ಹೋಗುವಂತೆ ಮಾಡುವುದು ಸರಿಯಾದ ಕ್ರಮ. ಆದರೆ, ಇಲ್ಲಿ ಕಾಮಗಾರಿಯೇ ಪೂರ್ಣಗೊಳ್ಳದ ಕಾರಣ ಆ ವ್ಯವಸ್ಥೆ ಇನ್ನೂ ಆಗಿಲ್ಲ. ಮಲಿನ ನೀರು ಶುದ್ಧಿಕರಣ ಘಟಕವೂ (ಎಸ್‌ಟಿಪಿ) ನಗರದಲ್ಲಿಲ್ಲ. ಇದರಿಂದ ಮಲಿನ ನೀರು ಚರಂಡಿಗಳ ಮೂಲಕ ಕೆರೆ–ಕಟ್ಟೆಗಳನ್ನು, ಕೊನೆಗೆ ಜಲಾಶಯಗಳನ್ನೂ ಸೇರುತ್ತಿದೆ.

ADVERTISEMENT

‘ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಗಳಿಂದ ಒಳ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ಆ ಮಣ್ಣನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ನಗರದ ಬಹುತೇಕ ಭಾಗಗಳಲ್ಲಿ ಹೊಸದಾಗಿ ಒಳಚರಂಡಿಯ ಪೈಪ್‌ ಅಳವಡಿಸಿ, 2,500ಕ್ಕೂ ಚೇಂಬರ್‌ಗಳನ್ನು ಹಾಕಲಾಗಿದೆ. ಹಾನಗಲ್‌ ರಸ್ತೆಯ ರೇಣುಕಾ ಆಸ್ಪತ್ರೆ ಬಳಿ ಹಾಗೂ ಚಿಕ್ಕನಾಯಕನಕೆರೆ ಸಮೀಪ ಮಣ್ಣು ತುಂಬಿಕೊಂಡಿದ್ದು, ಅದನ್ನು ತೆಗೆದರೆ ಕಾಮಗಾರಿಭಾಗಶಃ ಮುಗಿದಂತೆಯೇ’ ಎನ್ನುತ್ತಾರೆ ಅಧಿಕಾರಿಗಳು.

ಸ್ನಾನ, ಅಡುಗೆ ಕೋಣೆ ಹಾಗೂ ಶೌಚಾಲಯದ ನೀರು ಪ್ರತ್ಯೇಕವಾಗಿ ಹರಿದು ಹೋಗುವುದಕ್ಕೆ ಯುಜಿಡಿ ವ್ಯವಸ್ಥೆ ಬೇಕಾಗುತ್ತದೆ. ಕಾಮಗಾರಿ ಮುಗಿದ ತಕ್ಷಣವೇ ನಗರಸಭೆಗೆ ಹಸ್ತಾಂತರಿಸಿ ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗುತ್ತದೆ. ಆಗ ಒಳಚರಂಡಿಗಳ ಮೂಲಕ ಕೊಳಚೆ ನೀರು ವೀರಾಪೂರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗುತ್ತದೆ. ವೀರಾಪುರ–ಎಲ್‌ಐಸಿ ಹಾಗೂ ದುಂಡಿಬಸವೇಶ್ವರ–ವೀರಾಪುರ ಕಾಮಗಾರಿಯ ಎರಡು ಪ್ರಮುಖ ಮಾರ್ಗಗಳಾಗಿವೆ.

‘ಆಗಸ್ಟ್‌ ಹಾಗೂ ಅಕ್ಟೋಬರ್‌ ಮಳೆಯಿಂದ ಅಶ್ವಿನಿ ನಗರದಲ್ಲಿ ಒಳಚರಂಡಿ ಇರುವ ರಸ್ತೆ ಸಂಪೂರ್ಣ ಕುಸಿದಿದೆ. ಆ ಜಾಗದಲ್ಲಿ ಸ್ಥಳೀಯರೇ ಕಲ್ಲು ಮಣ್ಣು ಸುರಿದಿದ್ದೇವೆ. ಇಲ್ಲಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಓಡಾಟಕ್ಕೆ ತುಂಬ ತೊಂದರೆ ಆಗುತ್ತಿದೆ. ಈ ವಿಚಾರವನ್ನು ಹಲವು ಸಲ ಅಧಿಕಾರಿಗಳ ಗಮನಕ್ಕೆ ತಂದರೂ, ಅವರು ಕ್ಯಾರೆ ಎನ್ನುತ್ತಿಲ್ಲ’ ಎಂದು ವಿ.ಆರ್‌.ಪಾಟೀಲ ಬೇಸರ ವ್ಯಕ್ತಪ‍ಡಿಸಿದರು.

ಡಿಸೆಂಬರ್ ‌31ರ ಗಡುವು: ‘ಒಳಚರಂಡಿ ಕಾಮಗಾರಿ ಉದ್ದ 73 ಕಿ.ಮೀ ಇದೆ. ಮೊದಲು ಗುತ್ತಿಗೆ ಪಡೆದ ಕಂಪನಿ ಸುಮಾರು 50 ಕಿ.ಮೀವರೆಗಿನ ಕೆಲಸವನ್ನಷ್ಟೇ ಮುಗಿಸಿದೆ. ಹೊಸ ಕಂಪನಿಯು ಬ್ಲಾಕ್‌ ಆಗಿರುವ ಪೈಪ್‌ಲೈನ್‌ ದುರಸ್ತಿ ಜತೆಗೆ ಬಾಕಿ ಉಳಿದಿರುವ ಮಾರ್ಗವನ್ನು ಪೂರ್ಣಗೊಳಿಸಲು ಮೇ ತಿಂಗಳವರೆಗೆ ಕಾಲಮಿತಿ ಕೇಳಿತ್ತು. ಆದರೆ, ಸತತವಾಗಿ ಸುರಿದ ಮಳೆಯಿಂದ ಕಾಮಗಾರಿ ನಡೆಸಲು ಆಗಿರಲಿಲ್ಲ. ಅದಕ್ಕಾಗಿ ಇದೇ ಡಿ.31ರವರೆಗೆ ಗಡುವು ನೀಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ಹೊಸ ಟೆಂಡರ್: ‘ಮಂಜುನಾಥ ನಗರ, ಎಲ್‌ಐಸಿ ಕಾಲೋನಿ, ಮಾರುತಿ ನಗರ, ಸದಾಶಿವ ನಗರ, ವಿನಾಯಕ ನಗರ, ನೇತಾಜಿ ನಗರ, ಶಿವಾಜಿನಗರ, ತುಳಸಿ ಐಕಾನ್‌, ವೈಭವ ಲಕ್ಷ್ಮಿ ಪಾರ್ಕ್‌, ಭಾರತಿ ನಗರ, ವಿದ್ಯಾನಗರ ಪಶ್ಚಿಮ, ವಿಜಯ ನಗರ, ಉದಯನಗರ, ನೆಹರೂ ನಗರ, ಇಜಾರಿ ಲಕಮಾಪುರ, ಶಾಂತಿನಗರ, ಕೊರಚರ ಓಣಿ, ತಾಜ್‌ನಗರ, ನಾಗೇಂದ್ರನಮಟ್ಟಿಯ ಕೆಲಭಾಗಗಳಲ್ಲಿ ಕಾಮಗಾರಿ ಆರಂಭಿಸಲು ಹೊಸದಾಗಿ ಟೆಂಡರ್‌ ಆಹ್ವಾನಿಸಬೇಕಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.