
ಹಾವೇರಿ: ಮಾರುಕಟ್ಟೆಯಲ್ಲಿ ಸೊಪ್ಪಿನ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಸೊಪ್ಪು ಬೆಳೆದಿದ್ದ ರೈತರು ಆರ್ಥಿಕವಾಗಿ ಕಂಗಾಲಾಗಿದ್ದಾರೆ. ಸೊಪ್ಪು ಬೆಳೆಯಲು ತಗುಲಿದ ವೆಚ್ಚವೂ ಬಾರದಿದ್ದರಿಂದ ನೊಂದಿರುವ ರೈತರು, ರಸ್ತೆಯಲ್ಲಿಯೇ ಸೊಪ್ಪಿನ ಗಂಟುಗಳನ್ನು ಎಸೆದು ಕಣ್ಣೀರಿಡುತ್ತಿದ್ದಾರೆ.
ಜಿಲ್ಲೆಯ ಹಲವು ಜಮೀನುಗಳಲ್ಲಿ ರೈತರು ಸೊಪ್ಪು ಬೆಳೆದಿದ್ದಾರೆ. ಚಳಿ ಹವಾಮಾನ ಹೆಚ್ಚಿರುವುದರಿಂದ, ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೊಪ್ಪಿನ ಇಳುವರಿ ಬರುತ್ತಿದೆ. ಮಾರುಕಟ್ಟೆಗೆ ಬರುವ ಸೊಪ್ಪಿನ ಪ್ರಮಾಣವೂ ಹೆಚ್ಚಾಗಿದೆ. ಪೂರೈಕೆ ಹೆಚ್ಚಿರುವುದರಿಂದ ಬೇಡಿಕೆ ಕಡಿಮೆಯಾಗಿ ಬೆಲೆಯೂ ಕುಸಿದಿದೆ.
ಕೊತಂಬರಿ, ಪಾಲಕ್, ಮೆಂತೆ, ಸಬಸಗಿ ಸೇರಿದಂತೆ ಎಲ್ಲ ಬಗೆಯ ಸೊಪ್ಪಿನ ಬೆಲೆ ಕುಸಿದಿದೆ. ಒಂದು ಕಟ್ಟಿಗೆ ₹ 50 ಪೈಸೆ ಹಾಗೂ ₹ 1 ಮಾತ್ರ ಸಿಗುತ್ತಿದೆ. ಸೊಪ್ಪು ಮಾರಲು ಮಾರುಕಟ್ಟೆಗೆ ಬರುತ್ತಿರುವ ರೈತರು, ಅಂದುಕೊಂಡ ದರ ಸಿಗದಿದ್ದರಿಂದ ರಸ್ತೆಯಲ್ಲಿಯೇ ಸೊಪ್ಪಿನ ಗಂಟು ಎಸೆದು ಹೋಗುತ್ತಿದ್ದಾರೆ. ಅದೇ ಸೊಪ್ಪು, ಜಾನುವಾರುಗಳಿಗೆ ಆಹಾರವಾಗುತ್ತಿದೆ.
‘ಚಳಿಗಾಲದಲ್ಲಿ ಸೊಪ್ಪು ಬೆಳೆದರೆ ಉತ್ತಮ ಇಳುವರಿ ಬರುವುದಾಗಿ ಹೇಳಿದ್ದರಿಂದ, 1 ಎಕರೆಯಲ್ಲಿ ಸೊಪ್ಪು ಬೆಳೆದಿದ್ದೇನೆ. ಅದನ್ನು ನಿತ್ಯವೂ ಮಾರುಕಟ್ಟೆಗೆ ತರುತ್ತಿದ್ದೇನೆ. ಒಂದು ವಾರದಿಂದ ಸೊಪ್ಪಿಗೆ ದರವಿಲ್ಲ. ಒಂದು ಕಟ್ಟಿಗೆ ₹ 50 ಪೈಸೆ ಅಥವಾ ₹ 1 ಕೇಳುತ್ತಿದ್ದಾರೆ. ಈ ದರಕ್ಕೆ ಮಾರಿದರೆ, ಸೊಪ್ಪು ಬೆಳೆಯ ಬೀಜದ ಖರ್ಚು ಸಹ ವಾಪಸು ಬರುವುದಿಲ್ಲ’ ಎಂದು ಹಾವೇರಿ ರೈತ ಸಂಗಮೇಶ ಅಳಲು ತೋಡಿಕೊಂಡರು.
‘ಈ ಹಿಂದೆ ಒಂದು ಕಟ್ಟಿಗೆ ₹ 4ರಿಂದ ₹ 8ವರೆಗೂ ದರ ಸಿಗುತ್ತಿತ್ತು. ಆದರೆ, ಈಗ ದಿಢೀರ್ ಬೆಲೆ ಕುಸಿತವಾಗಿದೆ. ಫಸಲು ಉತ್ತಮವಾಗಿದ್ದರೂ ದರ ಇಲ್ಲದಿದ್ದರಿಂದ, ಆರ್ಥಿಕವಾಗಿ ನಷ್ಟ ಉಂಟಾಗಿದೆ’ ಎಂದರು.
ಹಾನಗಲ್ ರೈತ ವೀರೇಶ, ‘ನೀರಾವರಿ ಜಮೀನಿನಲ್ಲಿ ಕೊತಂಬರಿ, ಮೆಂತೆ, ಸಬಸಗಿ ಸೊಪ್ಪು ಬೆಳೆಯುತ್ತಿದ್ದೇವೆ. ವಾರದಿಂದ ಸೂಕ್ತ ದರವಿಲ್ಲ. ಒಂದು ಕಟ್ಟಿಗೆ ₹ 50 ಕೇಳಿದರೆ ಹೇಗೆ ಕೊಡುವುದು ? ಆ ದರಕ್ಕೆ ಕೊಟ್ಟರೂ ಖರ್ಚು ಸಹ ವಾಪಸು ಬರುವುದಿಲ್ಲ’ ಎಂದು ಹೇಳಿದರು.
ಸೊಪ್ಪಿನ ಮಾರಾಟವೂ ಕ್ಷೀಣ: ಮಾರುಕಟ್ಟೆಯಲ್ಲಿ ಸೊಪ್ಪಿನ ಮಾರಾಟವೂ ಕಡಿಮೆಯಾಗಿದೆ. ಹೆಚ್ಚು ಸೊಪ್ಪು ಲಭ್ಯವಿದ್ದರೂ, ಅದಕ್ಕ ತಕ್ಕಂತೆ ಗ್ರಾಹಕರು ಖರೀದಿಸುತ್ತಿಲ್ಲ. ಹೀಗಾಗಿ, ಮಾರುಕಟ್ಟೆಯಲ್ಲಿಯೂ ಸೊಪ್ಪು ಮಾರಾಟವಾಗದೇ ಉಳಿಯುತ್ತಿದೆ.
‘ಸುಮಾರು ವರ್ಷಗಳಿಂದ ಸೊಪ್ಪು ಮಾರುತ್ತಿದ್ದೇನೆ. ಈ ಬಾರಿ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೊಪ್ಪು ಮಾರುಕಟ್ಟೆಗೆ ಬಂದಿದೆ. ಸೊಪ್ಪಿನ ಬೆಲೆ ತೀರಾ ಕಡಿಮೆಯಾಗಿದೆ. ಬೆಲೆ ಕಡಿಮೆಯಿದ್ದರೂ,ಖರೀದಿಸಲು ಗ್ರಾಹಕರ ಕೊರತೆಯಿದೆ. ಹೀಗಾಗಿ, ರೈತರಿಗೂ ಬೆಲೆ ಸಿಗುತ್ತಿಲ್ಲ. ನಮ್ಮಂಥ ವ್ಯಾಪಾರಿಗಳಿಗೂ ನಷ್ಟವಾಗುತ್ತಿದೆ’ ಎಂದು ಲಾಲ್‌ಬಹದ್ದೂರು ಶಾಸ್ತ್ರಿ ಮಾರುಕಟ್ಟೆಯ ಸೊಪ್ಪಿನ ವ್ಯಾಪಾರಿ ಅಶ್ರಫ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.