ADVERTISEMENT

ಅತಿವೃಷ್ಟಿ: ವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಿ; ಮನೋಜ್‌ ಜೈನ್‌ ಸೂಚನೆ

ಬೆಳೆ– ಮನೆ ಹಾನಿ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ನೀಡಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 13:35 IST
Last Updated 21 ನವೆಂಬರ್ 2021, 13:35 IST
ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್‌ ಭಾನುವಾರ ಭೇಟಿ ನೀಡಿ, ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಇದ್ದಾರೆ 
ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್‌ ಭಾನುವಾರ ಭೇಟಿ ನೀಡಿ, ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಇದ್ದಾರೆ    

ಹಾವೇರಿ: ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆ ಸಮೀಕ್ಷೆಯನ್ನು ತ್ರಿಸದಸ್ಯ ಸಮಿತಿಯಿಂದ ಜಂಟಿ ಸಮೀಕ್ಷೆ ಕೈಗೊಂಡು ಏಳು ದಿನದೊಳಗಾಗಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಸಾಫ್ಟ್‌ವೇರ್‌ನಲ್ಲಿ ಅಪ್‍ಲೋಡ್ ಮಾಡಬೇಕು. ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಅತಿವೃಷ್ಟಿ ಹಾನಿ, ಸಕಾಲ ಯೋಜನೆ, ಕಂದಾಯ ಪ್ರಕರಣಗಳ ವಿಲೇವಾರಿ, ಕೋವಿಡ್ ಲಸಿಕೆ ಕಾರ್ಯಕ್ರಮಗಳ ಪ್ರಗತಿ ಸೇರಿದಂತೆ ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಮಳೆಯಿಂದಾಗಿ ಚಾವಣಿ ಕುಸಿತ, ಗೋಡೆಗಳ ಕುಸಿತ ಹಾಗೂ ಕೆಲ ಮನೆಗಳು ಶಿಥಿಲಗೊಂಡಿರುವುದು ಕಂಡುಬಂದಿದೆ. ಕಚ್ಚಾ ಮನೆಗಳು ಮಳೆ ಮುಂದುವರಿದರೆ ಕುಸಿಯುವ ಲಕ್ಷಣಗಳಿವೆ. ಇಂತಹ ಮನೆಗಳಲ್ಲಿ ವಾಸವಿರುವವರಿಗೆ ಜಾಗೃತಿ ಮೂಡಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಮನೆ ನೀರು ನುಗ್ಗಿ ಹಾನಿಯಾದವರಿಗೆ ಸರ್ಕಾರದ ನಿಯಮದಂತೆ ₹10 ಸಾವಿರ ಪರಿಹಾರವನ್ನು ತುರ್ತಾಗಿ ವಿತರಣೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ADVERTISEMENT

ಸಮೀಕ್ಷೆ ನಿಖರವಾಗಿರಲಿ:

ಮಳೆಯಿಂದ ಹಾನಿಯಾದ ಮನೆ ಹಾಗೂ ಬೆಳೆಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ದಾಖಲೀಕರಣ ನಿಖರವಾಗಿರಬೇಕು. ಮನೆ ಹಾನಿಯ ಪ್ರಮಾಣ ಪರಿಗಣಿಸಿ ‘ಸಿ’ ಯಿಂದ ‘ಬಿ’ ವರ್ಗಕ್ಕೆ ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಮನೆ ಮತ್ತು ಬೆಳೆ ತಾಕುಗಳಲ್ಲಿ ಫಲಾನುಭವಿಗಳ ವಿವರ, ಹಾನಿಯ ಮಾಹಿತಿಯನ್ನು ಛಾಯಾಚಿತ್ರ, ವಿಡಿಯೊ ಹಾಗೂ ಜಿಪಿಎಸ್ ಅಳವಡಿಸಬೇಕು. ಕೇಂದ್ರ ವಿಪತ್ತು ನಿರ್ವಹಣಾ ತಂಡದ ಮುಂದೆ ಹಾನಿಯ ಪ್ರಮಾಣವನ್ನು ಸಮರ್ಥವಾಗಿ ಸಾಕ್ಷ್ಯ ಸಹಿತವಾಗಿ ಮಂಡಿಸಲು ದಾಖಲೀಕರಣ ಮಾಡಬೇಕು ಎಂದರು.

1065 ಮನೆಗಳಿಗೆ ಹಾನಿ:

ಹಾನಿಯ ಕುರಿತಂತೆ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ‘ನವಂಬರ್ 17ರಿಂದ ನ.20ರವರೆಗೆ ಅಧಿಕ ಮಳೆಯಾಗಿದ್ದು, ವಾಡಿಕೆ 37 ಮಿ.ಮೀ. ಬದಲಾಗಿ 54 ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ 1065 ಮನೆಗಳು ಹಾನಿಯಾಗಿವೆ.ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ ಕಾರಣ 7 ಕಾಳಜಿ ಕೇಂದ್ರಗಳನ್ನು ತೆರೆದು 137 ಕುಟುಂಬಗಳ 750 ಸಂತ್ರಸ್ತರು, ನಾಲ್ಕು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.

15 ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. 18 ಜಾನುವಾರುಗಳ ಜೀವಹಾನಿಯಾಗಿದೆ. ಶುಂಠಿ, ಟೊಮೆಟೊ, ಮೆಣಸಿನಕಾಯಿ ಬೆಳೆ ಸೇರಿದಂತೆ ಅಂದಾಜು 359.60 ಹೆಕ್ಟೇರ್ ತೋಟಗಾರಿಕೆ ಬೆಳೆ, ಹತ್ತಿ, ಭತ್ತ, ಮೆಕ್ಕೆಜೋಳ ಸೇರಿದಂತೆ ಅಂದಾಜು 26,649 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 135 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. 125 ಅಂಗನವಾಡಿ ಕಟ್ಟಡ ಮತ್ತು ಒಂದು ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ಮೂರು ಕಡೆ ಸಣ್ಣ ನೀರಾವರಿ ಇಲಾಖೆ ಕೆರೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್‌, ಜಿ.ಪಂ. ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಬೆಳೆ-ಮನೆ ಹಾನಿ ಪರಿಶೀಲನೆ

ಹಾವೇರಿ: ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭಾನುವಾರಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಶಾಲೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಪರಿಶೀಲನೆ ನಡೆಸಿದರು.

ಶಿಗ್ಗಾವಿ ತಾಲ್ಲೂಕು ತಡಸ ಹಾಗೂ ತಿಮ್ಮಾಪುರ ಮತಗಟ್ಟೆಗಳಿಗೆ ತೆರಳಿ ಮತದಾರರ ಪಟ್ಟಿಯ ಪರಿಷ್ಕರಣೆ ಅಂಗವಾಗಿ ಸೇರ್ಪಡೆ, ಮಾರ್ಪಾಡು, ತಿದ್ದುಪಡಿ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸಿ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ತಿಮ್ಮಾಪುರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಭತ್ತದ ಫಸಲು ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೆಕ್ಕೆಜೋಳ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ, ಪರಿಹಾರ ಪಾವತಿಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್‌ ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.