ತಡಸ (ದುಂಡಶಿ): ಒಂದು ವಾರದಿಂದ ಬಿಡದೇ ಸುರಿಯುತ್ತಿರುವ ಮಳೆಗೆ ದುಂಡಶಿ ಹೋಬಳಿಯ ಕೆರೆ-ಕಟ್ಟೆ-ಹಳ್ಳಗಳು ತುಂಬಿ ಹರಿಯುತ್ತಿದ್ದು ಮಳೆ ಪ್ರಮಾಣ ಹೆಚ್ಚಾಗಿ ಗೋವಿನ ಜೋಳ, ಸೋಯಾಬೀನ್, ಶೇಂಗಾ ಬೆಳೆ ಹಾಳಾಗುವ ಆತಂಕ ಉಂಟಾಗಿದೆ.
ಕುನ್ನೂರು ಶ್ಯಾಡಂಬಿ ಗ್ರಾಮಗಳ ಮಧ್ಯದಲ್ಲಿರುವ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು ಹಳ್ಳದ ಅಕ್ಕಪಕ್ಕದಲ್ಲಿರುವ ಭತ್ತದ ಗದ್ದೆ, ತೋಟಗಳು ಜಲಾವೃತ್ತವಾಗುವ ಸಾಧ್ಯತೆ ಇದೆ ಎಂದು ಅಡವಿಸೋಮಾಪುರ ಗ್ರಾಮದ ಪ್ರವೀಣ್ ಹೇಳಿದರು.
ಗೋವಿನ ಜೋಳ ಬೆಳೆಯು ಜವಳು ಹಿಡಿದು ಸಂಪೂರ್ಣ ಹಾನಿಗೊಳಗಾಗಿದ್ದು ಸ್ಥಳೀಯ ಶಾಸಕ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪರಿಶೀಲನೆ ನಡೆಸಿಲ್ಲ. ಹಾನಿ ಸಮೀಕ್ಷೆಯೂ ನಡೆಯುತ್ತಿಲ್ ಎಂದು ರೈತರು ದೂರಿದ್ದಾರೆ.
ರೈತರಿಗೆ ಅಗತ್ಯ ಪ್ರಮಾಣದ ಯೂರಿಯಾ ಗೊಬ್ಬರ ಸಿಗದಂತಾಗಿದೆ. ಕೆಲ ಖಾಸಗಿ ಅಂಗಡಿಗಳಲ್ಲಿ ₹ 280 ಬೆಲೆಯ ಯೂರಿಯಾವನ್ನು ₹ 450ರಿಂದ ₹ 500ರವರೆಗೆ ಮಾರುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಯೂರಿಯಾ ಗೊಬ್ಬರ ಸಿಗುವಂತೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.