ಶಿಗ್ಗಾವಿ: ಕಳೆದ 15 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ನೀರಿನಿಂದಾಗಿ ತಾಲ್ಲೂಕಿನ ಬಾಡ ಮತ್ತು ಹುಣಸಿಕಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಮಳೆ ನೀರಿನಿಂದ ಹದಗೆಟ್ಟು ಕೆಸರಾಗಿ ನಿತ್ಯ ಸಂಚರಿಸುವುದು ಕಷ್ಟಕರವಾಗಿದೆ.
ಹುಣಸಿಕಟ್ಟ ಗ್ರಾಮದಿಂದ ಬಾಡ ಗ್ರಾಮಕ್ಕೆ ಬರುವ ಪ್ರಮುಖ ರಸ್ತೆಯಾಗಿದ್ದು, ಮಳೆಗಾಲ ಬಂದರೆ ಸಾಕು ರಸ್ತೆಯಲ್ಲಿ ನೀರು ಹರಿದು ಇಡೀ ರಸ್ತೆಯಲ್ಲ ಕೆಸರುಮಯವಾಗಿ ಪಾದಚಾರಿಗಳು, ವಾಹನಗಳು ಓಡಾಡದಂತಾಗುತ್ತದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ.
ವಾಹನಗಳಿಲ್ಲದೆ ಸಂಚಾರ ಸ್ಥಗಿತವಾಗುತ್ತಿವೆ. ಹೀಗಾಗಿ ರೈತರು, ವ್ಯಾಪಾರಸ್ಥರು ಸಹ ಸಂಚರಿಸದಂತಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಈ ಕಡೆ ಗಮನ ಹರಿಸಿ ರಸ್ತೆ ಡಾಂಬರೀಕರಣ ಮಾಡಬೇಕು. ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಗ್ರಾಮಸ್ಥರರಾದ ಜಗದೀಶ ಸಿದ್ದಣ್ಣವರ, ಮಾಲತೇಶ ಕಮ್ಮಾರ, ಅಶೋಕ ಸಿದ್ದಣ್ಣವರ, ಶೇಖಪ್ಪ ಹಾದಿಮನಿ, ರಮೇಶ ಕಲಿವಾಳ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮರ ಬಿದ್ದು ರಸ್ತೆ ಸಂಚಾರಕ್ಕೆ ಕಿರಿಕಿರಿ:
ತಾಲ್ಲೂಕಿನ ಮುನವಳ್ಳಿಯಿಂದ ಶಿಗ್ಗಾವಿಗೆ ಹೋಗುವ ರಸ್ತೆ ನಡುವೆ ದೊಡ್ಡಹಳ್ಳದ ಹತ್ತಿರದಲ್ಲಿ ಮರ ಬಿದ್ದು 3 ತಾಸು ರಸ್ತೆ ಸಂಚಾರ ಸ್ಥಗಿತವಾಗಿತ್ತು. ನಂತರ ಹೆಸ್ಕಾಂ ಮತ್ತು ಸಾರ್ವಜನಿಕರು, ರಸ್ತೆ ಪಕ್ಕದ ರೈತರು ಸೇರಿ ಮರವನ್ನು ತೆರವುಗೊಳಿಸುವಲ್ಲಿ ನೆರವಾದರು.
ನಂತರ ರಸ್ತೆ ಸಂಚಾರ ಸುಗಮಗೊಂಡಿತು. ಮುನವಳ್ಳಿಯಿಂದ ಶಿಗ್ಗಾವಿಗೆ ಹೋಗುವ ವಾಹನಗಳು, ಪಾದಚಾರಿಗಳು, ದ್ವಿಚಕ್ರ ವಾಹನಗಳು ಬಂಕಾಪುರ ಮಾರ್ಗವಾಗಿ ಮತ್ತು ದುರ್ಗಾದೇವಿ ದೇವಸ್ಥಾನದ ರಸ್ತೆ ಮಾರ್ಗವಾಗಿ ಸುತ್ತುವರೆದು ಹೋಗುವಂತೆ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.