ಹಾವೇರಿ: ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ವರದಾ, ಕುಮದ್ವತಿ, ಧರ್ಮಾ, ತುಂಗಭದ್ರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನದಿ ಪಾತ್ರದ ಜಮೀನಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ನದಿಪಾತ್ರದ ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ.
ಜಿಲ್ಲೆಯ ದೊಡ್ಡ ನದಿ ವರದಾದಲ್ಲಿ ನೀರಿನ ಹರಿವು ಹೆಚ್ಚಿದೆ. ನಾಗನೂರು, ದೇವಗಿರಿ, ಕೂಡಲ, ಕಳಸೂರು, ಬೆಳವಗಿ ಹಾಗೂ ಸುತ್ತಮುತ್ತ ಜಮೀನುಗಳು ಜಲಾವೃತ್ತಗೊಂಡಿವೆ. ಅಡಿಕೆ, ಗೋವಿನ ಜೋಳ, ಸೋಯಾಬಿನ್ ಹಾಗೂ ಇತರೆ ಬೆಳೆಗಳು ನೀರಿನಲ್ಲಿ ಮುಳುಗಿವೆ.
ನಾಗನೂರು ಗ್ರಾಮದ ಮಸೀದಿವರೆಗೂ ನೀರು ಬಂದಿದ್ದು, ಈ ಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು, ಜನರು ನದಿ ನೀರಿನಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕುಮದ್ವತಿ ನದಿ ಹರಿವು ಹೆಚ್ಚಿದ್ದು, ರಟ್ಟೀಹಳ್ಳಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲಿವಾಳ, ಚಪ್ಪರದಹಳ್ಳಿ ಗ್ರಾಮಗಳ ನಡುವಿನ ಸೇತುವೆ ಮುಳಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ರಾಣೆಬೆನ್ನೂರು ಹಾಗೂ ಕುಮಾರಪಟ್ಟಣ ಬಳಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ತಡಸ ಬಳಿಯ ಬೆಣ್ಣೆ ಹಳ್ಳ ಸಹ ತುಂಬಿ ಹರಿಯುತ್ತಿದೆ.
ಆಲಮಟ್ಟಿ: 40 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
ಆಲಮಟ್ಟಿ ವರದಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಶನಿವಾರ 40 ಸಾವಿರ ಕ್ಯುಸೆಕ್ ನೀರು ಹೊರಹರಿಸಲಾಗುತ್ತಿದೆ.
‘ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕನೀರು ಹರಿಸುತ್ತಿದ್ದು, ಆರೂ ಘಟಕಗಳ ಮೂಲಕ 261 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ’ ಎಂದು ಕೆಪಿಸಿಎಲ್ ಅಧಿಕಾರಿ ಚಂದ್ರಶೇಖರ ದೊರೆ ತಿಳಿಸಿದರು.
ನದಿಗೆ ನೀರು ಹರಿಸುತ್ತಿರುವ ಕಾರಣ ನದಿ ತೀಋದ ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಸೂಚಿಸಿದ್ದಾರೆ.
ಕರಾವಳಿ: ತಗ್ಗಿದ ಮಳೆ
ಮಂಗಳೂರು ವರದಿ: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ನದಿಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮಂಗಳೂರು–ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ನೆಮ್ಮರ್ ಎಸ್ಟೇಟ್ ಸಾಲಮರ ಬಳಿ ಕಾಂಕ್ರಿಟ್ ತಡೆಗೋಡೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಣ್ಣು ತೆಗೆದು ತಡೆಗೋಡೆ ಸರಿಪಡಿಸುವ ಕಾರ್ಯ ಆರಂಭಿಸಲಾಗಿದೆ. ರಸ್ತೆಯ ಒಂದು ಭಾಗದಲ್ಲಿ ಗೋಡೆ ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ.
ಬಾಳೆಹೊನ್ನೂರು ಸಮೀಪದ ಮಾಗುಂಡಿ–ಮಹಲ್ ಗೋಡು–ಕಳಸ ನಡುವಿನ ರಸ್ತೆ ಮೇಲೆ ನೀರು ಹರಿದು ಶುಕ್ರವಾರ ಸಂಪರ್ಕ ಕಡಿತಗೊಂಡಿತ್ತು. ಶನಿವಾರ ಸಂಚಾರಕ್ಕೆ ಮುಕ್ತವಾಗಿದೆ.
ಸಿ.ಎಂ ಏಕೆ ಭೇಟಿ ನೀಡಿಲ್ಲ?: ಹುಬ್ಬಳ್ಳಿ: ‘ರಾಜ್ಯದ ಕರಾವಳಿ ಚಿಕ್ಕಮಗಳೂರು ಕೊಡಗಿನಲ್ಲಿ ಅಪಾರ ಮಳೆಯಾಗಿ ಸಾಕಷ್ಟು ಹಾನಿ ಆಗಿದೆ. ಏಳು ಮಂದಿ ಮೃತರಾದರೂ ಮುಖ್ಯಮಂತ್ರಿ ಮತ್ತು ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ‘ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ. ‘ಪರಿಹಾರಕ್ಕಾಗಿ ಹಣ ನೀಡುವುದು ಬೇರೆ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಬೇಕಿತ್ತು. ಎನ್‌ಡಿಆರ್‌ಎಫ್‌ನಡಿ ಕೇಂದ್ರ ಸರ್ಕಾರ ಮಳೆ ಹಾನಿ ಪರಿಹಾರ ನೀಡಲಿದೆ. ರಾಜ್ಯ ಸರ್ಕಾರ ಎಷ್ಟು ಕೊಡುತ್ತದೆಯೋ ನೋಡೋಣ’ ಎಂದು ಪ್ರತಿಕ್ರಿಯಿಸಿದರು.
ಮೈಸೂರು ಭಾಗ –ತಗ್ಗಿದ ಮಳೆ ಬಿರುಸು
ಮೈಸೂರು: ಮೈಸೂರು ಭಾಗದ ಜಿಲ್ಲೆಗಳಲ್ಲಿ ಶನಿವಾರ ಮಳೆ ಅಬ್ಬರ ಕಡಿಮೆಯಾಗಿತ್ತು. ಕೊಡಗು ಜಿಲ್ಲೆಯಲ್ಲಿ ಬಿರುಗಾಳಿಗೆ ವಿದ್ಯುತ್ ಕಂಬಗಳು ಬೀಳುತ್ತಿವೆ. 24 ಗಂಟೆಯಲ್ಲಿ ಜಿಲ್ಲೆಯಲ್ಲಿ 84 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಕೊಡಗುವಿನಲ್ಲಿ ಪ್ರವಾಹಪೀಡಿತ ಪ್ರದೇಶಗಳಾದ ಸಿದ್ದಾಪುರದ ಕರಡಿಗೋಡು ಹಾಗೂ ಕುಶಾಲನಗರದ ಬಡಾವಣೆಗಳಲ್ಲಿ ನೀರು ಕಡಿಮೆಯಾಗಿದೆ. 35 ಮಂದಿ ಕಾಳಜಿ ಕೇಂದ್ರಗಳಲ್ಲೇ ಆಶ್ರಯ ಪಡೆದಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಸಂಕೇನಹಳ್ಳಿಯಲ್ಲಿ ಮನೆ ಕೊಟ್ಟಿಗೆ ಕುಸಿದು ಮೂರು ಜಾನುವಾರುಗಳು ಮೃತಪಟ್ಟವು. ಬೇಲೂರಿನ ವಿಷ್ಣುಸಮುದ್ರ ಕೆರೆ ಹಾಗೂ ರಾಜಗೆರೆಯ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿ ಪಾತ್ರದ ಮುಳ್ಳೂರು ಹಳೆ ಹಂಪಾಪುರ ದಾಸನಪುರ ಹರಳೆ ಗ್ರಾಮಗಳಿಗೆ ನೀರಿನ ಹರಿವು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಶನಿವಾರ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.