
ರಾಣೆಬೆನ್ನೂರು: ರೈತರು ವಾಣಿಜ್ಯ ಬೆಳೆಗಳನ್ನು ಬೆಳೆದಾಗ ಸಿಗುವ ಲಾಭಕ್ಕಿಂತ ಬೀಜೋತ್ಪಾದನೆಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯ. ಹಾವೇರಿ ಜಿಲ್ಲೆಯು ಬೀಜೋತ್ಪಾದನೆಗೆ ಪ್ರತಿಕೂಲವಾದ
ವಾತಾವರಣ ಹೊಂದಿದೆ. ಬೀಜೋತ್ಪಾದನೆಯಲ್ಲಿ ಹೆಚ್ಚಿನ ರೈತರು ಪಾಲ್ಗೊಂಡು ಉದ್ಯಮಶೀಲರಾಗಿ ಪ್ರಗತಿ ಹೊಂದಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಪ್ರೊ.ಎ.ಎಚ್. ಬಿರಾದಾರ ಹೇಳಿದರು.
ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದಲ್ಲಿ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರದಿಂದ ಶುಕ್ರವಾರ ರೈತರಿಗೆ ಏರ್ಪಡಿಸಿದ್ದ ಬೀಜೋತ್ಪಾದನೆ ತರಬೇತಿ ಒಂದು ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಗ್ಗಾಂವ್ ಬೈಪ್ ಸಂಸ್ಥೆಯ ಅಧಿಕಾರಿ ಈರಣ್ಣ ಸಿ.ಬಾಗೇವಾಡಿ ಮಾತನಾಡಿ, ಶಿಗ್ಗಾಂವ್ ತಾಲ್ಲೂಕಿನ ರೈತರು ಬೀಜೋತ್ಪಾದನೆ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಸಂತೋಷ್ ಎಚ್.ಎಂ ಮಾತನಾಡಿ, ‘ಪ್ರತಿಯೊಬ್ಬ ರೈತನಿಗೆ ತಳಿಯ ಶುದ್ಧತೆ ಹೊಂದಿರುವ ಉತ್ತಮ ಮೊಳಕೆ ಹೊಡೆಯುವ ಸಾಮರ್ಥ್ಯ ಹೊಂದಿರುವ ಬೀಜಗಳು ಬಿತ್ತನೆಗೆ ದೊರಕಬೇಕು. ಬೀಜಗಳು ಕೃಷಿ ಮತ್ತು ತೋಟಗಾರಿಕೆಯಲ್ಲಿ ಅತಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ಗುಣಮಟ್ಟದ ಪ್ರಮಾಣಿತ ಬೀಜಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ’ ಎಂದು ತಿಳಿಸಿದರು.
ಕೇಂದ್ರದ ಬೇಸಾಯಶಾಸ್ತ್ರದ ವಿಷಯತಜ್ಞ ಸಿದ್ಧಗಂಗಮ್ಮ ಕೆ.ಆರ್ ಮಾತನಾಡಿ, ಸೋಯಾಬೀನ್ ಬೆಳೆಯ ಬೀಜೋತ್ಪಾದನೆಯಲ್ಲಿ ಕಳೆ ನಿರ್ವಹಣೆ ಕುರಿತು, ಮಣ್ಣು ವಿಜ್ಞಾನದ ವಿಷಯ ತಜ್ಞೆ ರಶ್ಮಿ ಸಿ. ಎಂ ಅವರು, ರೈತರಿಗೆ ಮಣ್ಣು ಮಾದರಿ ಸಂಗ್ರಹಣೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಮಣ್ಣಿನ ಆರೋಗ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಶಿಗ್ಗಾಂವ ತಾಲ್ಲೂಕಿನ ಬೆಳಗಲಿ, ಮತ್ತು ಹಿರೇಬೆಂಡಿಗೇರಿ ಗ್ರಾಮದ ಸುಮಾರು 30 ಜನ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.