ADVERTISEMENT

ಹಿರೇಕೆರೂರು: ವಾರಕೊಮ್ಮೆ ತೆರೆಯುವ ರೇಷ್ಮೆ ಕಚೇರಿ

ಸಿಬ್ಬಂದಿ ಕೊರತೆ, ರೈತರಿಗೆ ರೇಷ್ಮೆ ಇಲಾಖೆ ಯೋಜನೆಗಳ ಸಿಗದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 4:06 IST
Last Updated 28 ಡಿಸೆಂಬರ್ 2025, 4:06 IST
ಹಿರೇಕೆರೂರ ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಬಳಿ ಇರುವ ರೇಷ್ಮೆ ಇಲಾಖೆಯ ಕಚೇರಿಗೆ ಬೀಗ ಹಾಕಿರುವುದು 
ಹಿರೇಕೆರೂರ ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಬಳಿ ಇರುವ ರೇಷ್ಮೆ ಇಲಾಖೆಯ ಕಚೇರಿಗೆ ಬೀಗ ಹಾಕಿರುವುದು    

ಹುತ್ತೇಶ ಲಮಾಣಿ

ಹಿರೇಕೆರೂರು: ಪಟ್ಟಣದಲ್ಲಿರುವ ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಕಚೇರಿ ವಾರಕ್ಕೊಮ್ಮೆ ಮಾತ್ರ ತೆರೆಯುತ್ತಿದ್ದು, ವಾರದ ಐದು ದಿನವೂ ಬಂದ್ ಆಗುತ್ತಿದೆ. ಇದರಿಂದಾಗಿ ತಾಲ್ಲೂಕಿನ ರೈತರಿಗೆ ರೇಷ್ಮೆ ಇಲಾಖೆ ಯೋಜನೆಗಳ ಮಾಹಿತಿ ಲಭ್ಯವಾಗುತ್ತಿಲ್ಲ. 

ಕಚೇರಿಯ ಬಹುತೇಕ ಹುದ್ದೆಗಳು ಖಾಲಿಯಿವೆ. ಇದರಿಂದ ರೈತರಿಗೆ ಬೆಳೆಗಳ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ರೇಷ್ಮೆ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಕಚೇರಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಎಂದು ರೈತರು ಆರೋಪಿಸುತ್ತಿದ್ದಾರೆ. ಇಲಾಖೆಯ ಜಿಲ್ಲಾ ಕಚೇರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

ADVERTISEMENT

ಕೃಷಿಕರಿಗೆ ಬೆಳೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕಿದ್ದ ತಾಲ್ಲೂಕಿನ ರೇಷ್ಮೆ ಇಲಾಖೆ ಕಚೇರಿ ವಾರಕ್ಕೊಮ್ಮೆ ಬಾಗಿಲು ತೆರೆಯುತ್ತಿದೆ. ಇದು ಸರ್ಕಾರದ ವ್ಯವಸ್ಥೆಯನ್ನು ಅಣುಕಿಸುವಂತಿದೆ. ತಮ್ಮ ಕೆಲಸ ಕಾರ್ಯಗಳಿಗೆ ಇಲಾಖೆಗೆ ಬರುವ ರೈತರು, ಮುಚ್ಚಿದ ಬಾಗಿಲು ನೋಡಿ ವಾಪಸ್‌ ಹೋಗುತ್ತಿದ್ದಾರೆ.

ಸಾವಿರಾರು ರೈತರು, ರೇಷ್ಮೆ ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರೇಷ್ಮೆ ಬೆಳೆ ಸಾಕಷ್ಟು ವಿಸ್ತರಣೆಯಾಗಿತ್ತು. ಆದರೆ, ವಿವಿಧ ರೋಗಗಳು ಹಾಗೂ ಮಾರುಕಟ್ಟೆಯ ಏರು-ಪೇರು ಕಾರಣದಿಂದ ರೇಷ್ಮೆ ಕೃಷಿ ಕಡಿಮೆಯಾಗಿತ್ತು. ಈಗ ಮತ್ತೆ ರೈತರು ರೇಷ್ಮೆ ಅವಲಂಬಿತರಾಗುತ್ತಿದ್ದಾರೆ. ಆದರೆ, ರೇಷ್ಮೆ ಇಲಾಖೆ ಮಾತ್ರ ರೈತರಿಗೆ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಆರೋಪವಿದೆ.

ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಬಳಿ ರೇಷ್ಮೆ ಇಲಾಖೆ ಕಚೇರಿಯಿದೆ. ಒಬ್ಬ ವಿಸ್ತರಣಾ ಅಧಿಕಾರಿ, ಕಚೇರಿ ಕೆಲಸಕ್ಕೆ ಪ್ರಥಮ, ದ್ವಿತೀಯ ದರ್ಜೆ ಸಹಾಯಕರು, 'ಡಿ'ದರ್ಜೆ ಸೇರಿದಂತೆ ಕೆಲವು ಹುದ್ದೆಗಳಿವೆ. ಆದರೆ, ಈ ಪೈಕಿ ಬಹುತೇಕ ಹುದ್ದೆಗಳು ಖಾಲಿ ಇವೆ. ಪ್ರಭಾರ ರೇಷ್ಮೆ ನಿರೀಕ್ಷಕ ಅಧಿಕಾರಿ ಮಾತ್ರ ಇದ್ದಾರೆ. ಅವರು ಸಹ ಬೇರೆ ತಾಲ್ಲೂಕಿಗೆ ಪೂರ್ಣ ಅವಧಿಯ ಅಧಿಕಾರಿಯಾಗಿದ್ದರಿಂದ, ಹಿರೇಕೆರೂರಿಗೆ ವಾರಕ್ಕೊಮ್ಮೆ ಮಾತ್ರ ಬಂದು ಹೋಗುತ್ತಿದ್ದಾರೆ. ಹೀಗಾಗಿ, ಭಾನುವಾರ ಹೊರತುಪಡಿಸಿ ಐದು ದಿನ ಕಚೇರಿ ಬಂದ್‌ ಆಗುತ್ತಿದೆ.

ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ರೈತರು, 180 ಎಕರೆ ಪ್ರದೇಶದಲ್ಲಿ ಪ್ರತಿವರ್ಷ 50ಕ್ಕೂ ಹೆಚ್ಚು ಟನ್‌ ರೇಷ್ಮೆ ಬೆಳೆಯುತ್ತಿದ್ದಾರೆ. ತಾಲ್ಲೂಕಿಗೊಬ್ಬ ರೇಷ್ಮೆ ಇಲಾಖೆಗೆ ವಿಸ್ತರಣಾಧಿಕಾರಿ ನೇಮಿಸಲು ಸರಕಾರ ಹಿಂದೇಟು ಹಾಕುತ್ತಿದೆ.

ಬೇರೆ ಬೆಳೆಗಳು ಕೈಕೊಟ್ಟಾಗ ರೇಷ್ಮೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳು ರೈತರ ಕೈ ಹಿಡಿಯುತ್ತಿವೆ. ಆದರೆ, ಈ ಕುರಿತು ರೈತರಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ, ಸಲಹೆ, ವೈಜ್ಞಾನಿಕ ವಿವರಗಳನ್ನು ನೀಡಲು ವಿಸ್ತರಣಾಧಿಕಾರಿಗಳಿಲ್ಲ.  

‘ರೇಷ್ಮೆ ಇಲಾಖೆ ಕಚೇರಿ ಬಾಗಿಲು ವಾರಕ್ಕೊಮ್ಮೆ ತೆರೆಯುತ್ತಿದ್ದು, ರೈತರಿಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ. ರೈತರು ಕಚೇರಿಗೆ ಬಂದು, ಬೀಗ ಹಾಕಿರುವ ಬಾಗಿಲು ನೋಡಿ ವಾಪಸ್‌ ಹೋಗುತ್ತಿದ್ದಾರೆ. ಸರ್ಕಾರಕ್ಕೂ ಹಿಡಿಶಾಪ ಹಾಕುತ್ತಿದ್ದಾರೆ ’ ಎಂದು ಸ್ಥಳೀಯ ರೈತ ಮುಖಂಡರು ಹೇಳಿದರು.

‘ಶೀಘ್ರದಲ್ಲಿ ತಾಲ್ಲೂಕು ರೇಷ್ಮೆ ಇಲಾಖೆಗೆ ವಿಸ್ತರಣಾಧಿಕಾರಿ ನೇಮಕವಾಗಬೇಕು. ರೇಷ್ಮೆ ಬೆಳೆಯವ ರೈತರಿಗೆ ಅಗತ್ಯ ಸಲಹೆ, ಮಾರ್ಗದರ್ಶನಗಳನ್ನು ನೀಡಬೇಕು. ರೈತರು ಆರ್ಥಿಕವಾಗಿ ಚೇತರಿಸಿಕೊಳ್ಳುವಂತೆ ಮಾಡಬೇಕು ಮತ್ತು ಮೀನುಗಾರಿಕೆ ಇಲಾಖೆ ಕಚೇರಿ ನಿತ್ಯವೂ ಬಾಗಿಲು ತೆರೆಯಬೇಕು’ ಎಂದು ಅವರು ಒತ್ತಾಯಿಸಿದರು. 

ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲಾಗಿದೆ
ಎಂ.ಎಸ್. ಪಾಟೀಲ ಉಪ ನಿರ್ದೇಶಕ ರೇಷ್ಮೆ ಇಲಾಖೆ 
ರೇಷ್ಮೆ ಇಲಾಖೆ ಕಚೇರಿ ವಾರಕ್ಕೊಮ್ಮೆ ತೆರೆಯುವುದರಿಂದ ರೈತರಿಗೆ ಮಾಹಿತಿ ಸಿಗುತ್ತಿಲ್ಲ. ದೂರದ ಊರಿಂದ ಬಂದು ರೈತರು ವಾಪಸ್‌ ಹೋಗುತ್ತಿದ್ದಾರೆ. ನಿತ್ಯವೂ ಕಚೇರಿ ತೆರೆಯಬೇಕು 
ಹನುಮಂತಪ್ಪ ದೀವಿಗಿಹಳ್ಳಿ ರೈತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.