ADVERTISEMENT

ಹಿರೇಕೆರೂರು: ದಡಾರ ಲಸಿಕೆ ಪಡೆದಿದ್ದ ಮಕ್ಕಳು ಅಸ್ವಸ್ಥ

ಹಿರೇಕೆರೂರು ಚನ್ನಳ್ಳಿ ತಾಂಡಾ ಅಂಗನವಾಡಿ ಕೇಂದ್ರ, ಆರೋಗ್ಯ ಇಲಾಖೆ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 16:08 IST
Last Updated 20 ಡಿಸೆಂಬರ್ 2024, 16:08 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚನ್ನಳ್ಳಿ ತಾಂಡಾ ಮಕ್ಕಳು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚನ್ನಳ್ಳಿ ತಾಂಡಾ ಮಕ್ಕಳು   

ಹಿರೇಕೆರೂರು: ತಾಲ್ಲೂಕಿನ ಚನ್ನಳ್ಳಿ ತಾಂಡಾ ಅಂಗನವಾಡಿ ಕೇಂದ್ರದಲ್ಲಿ ದಡಾರ ಹಾಗೂ ಇತರೆ ಲಸಿಕೆ ಪಡೆದಿದ್ದ ಕೆಲ ಮಕ್ಕಳು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ತಾಂಡಾದಲ್ಲಿರುವ 4ನೇ ಅಂಗನವಾಡಿ ಕೇಂದ್ರದಲ್ಲಿ 25 ಮಕ್ಕಳಿದ್ದಾರೆ. ಇದೇ ಅಂಗನವಾಡಿಯಲ್ಲಿ ಡಿ. 12ರಂದು ತಾಲ್ಲೂಕು ಆರೋಗ್ಯ ಇಲಾಖೆಯಿಂದ ದಡಾರ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 3 ತಿಂಗಳಿನಿಂದ 3 ವರ್ಷದ ಒಳಗಿರುವ 16 ಮಕ್ಕಳಿಗೆ ದಡಾರ ಲಸಿಕೆ ನೀಡಲಾಗಿತ್ತು. ಇದರ ಜೊತೆಯಲ್ಲಿ ಜೆಇ ಹಾಗೂ ವಿಟಮಿನ್ ಎ ಲಸಿಕೆಯನ್ನು ಕೊಡಲಾಗಿತ್ತೆಂದು ವೈದ್ಯರೊಬ್ಬರು ಹೇಳಿದರು.

ಲಸಿಕೆ ಪಡೆದ ಕೆಲ ಗಂಟೆಗಳ ಬಳಿಕ 7 ಮಕ್ಕಳಿಗೆ ಬೇಧಿ ಶುರುವಾಗಿತ್ತು. ಜ್ವರವೂ ಕಾಣಿಸಿಕೊಂಡಿತ್ತು. ಮಕ್ಕಳ ಕಾಲುಗಳು ಊದಿಕೊಂಡಿತ್ತು. ಚರ್ಮದಲ್ಲಿ ಮಕ್ಕಳಿಗೆ ತುರಿಕೆ ಶುರುವಾಗಿತ್ತು. ಗಾಬರಿಗೊಂಡಿದ್ದ ಪೋಷಕರು, ಸರ್ಕಾರಿ ಆಸ್ಪತ್ರೆಗೆ ಮಕ್ಕಳನ್ನು ಕರೆದೊಯ್ದಿದ್ದರು. 

ADVERTISEMENT

ಸ್ಥಳೀಯ ಆಸ್ಪತ್ರೆಯಲ್ಲಿ ಕೆಲ ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ನಾಲ್ವರು ಮಕ್ಕಳನ್ನು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ಹಾಗೂ ಇಬ್ಬರು ಮಕ್ಕಳನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಇಬ್ಬರು ಮಕ್ಕಳು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಪೋಷಕರು ಹೇಳಿದರು.

ಎಲ್ಲ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

5 ಗಂಟೆಯೊಳಗೆ ಹದಗೆಟ್ಟ ಆರೋಗ್ಯ: ’ಮಗುವಿಗೆ ದಡಾರ ಲಸಿಕೆ ಹಾಕಿಸಲಾಗಿತ್ತು. 5 ಗಂಟೆಯ ನಂತರ ನಮ್ಮ ಮಗುವಿಗೆ ಜ್ವರ ಕಾಣಿಸಿಕೊಂಡಿತು. ಕಾಲುಗಳು ಊದಿಕೊಂಡವು. ಮೈಬಣ್ಣ ಕೆಂಪಾಯಿತು. ನಂತರ ಮೈಗೆ ತುರಿಕೆಯಾಗ ತೊಡಗಿತು’ ಎಂದು ತಾಯಿ ಗೀತಾಂಜಲಿ ಲಮಾಣಿ ಹೇಳಿದರು.

’ಆಸ್ಪತ್ರೆಗೆ ಮಗುವನ್ನು ಕರೆದೊಯ್ದು 7 ದಿನ ಚಿಕಿತ್ಸೆ ಕೊಡಿಸಿದೆವು. ಈಗ ಮಗು ಚೇತರಿಸಿಕೊಂಡಿದೆ. ಆರೋಗ್ಯ ಸಮಸ್ಯೆ ಹದಗೆಡಲು ಏನು ಕಾರಣ ಎಂಬುದನ್ನು ಆರೋಗ್ಯ ಇಲಾಖೆ ಪತ್ತೆ ಮಾಡಬೇಕು’ ಎಂದು ಆಗ್ರಹಿಸಿದರು.

ವೈದ್ಯರಿಂದ ಪರಿಶೀಲನೆ: ’ಹಿರೇಕೆರೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಕ್ಕಳಿಗೆ ದಡಾರ ಲಸಿಕೆ ಕೊಡಲಾಗಿದೆ. ಎಲ್ಲಿಯೂ ಸಮಸ್ಯೆ ಆಗಿಲ್ಲ. ಆದರೆ, ಚನ್ನಳ್ಳಿ ತಾಂಡಾದಲ್ಲಿ ಆರೋಗ್ಯ ಸಮಸ್ಯೆ ಆಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ವೈದ್ಯರು ಹೇಳಿದರು.

‘ಗ್ರಾಮದಲ್ಲಿ ಜನರು ಬಳಸುವ ನೀರಿನ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

‘ರಕ್ತದ ಮಾದರಿ ಸಂಗ್ರಹ: ಪರೀಕ್ಷೆ ವರದಿ ಶೀಘ್ರ’

‘ಚನ್ನಳ್ಳಿ ತಾಂಡಾದ ಅಂಗನವಾಡಿ ಕೇಂದ್ರದಲ್ಲಿ ಲಸಿಕೆ ಪಡೆದಿದ್ದ ಐವರು ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಅಂಥ ಮಕ್ಕಳು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಸುರಗಿಹಳ್ಳಿ ತಿಳಿಸಿದರು. ಮಕ್ಕಳ ಅನಾರೋಗ್ಯದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಯಾವ ಕಾರಣಕ್ಕೆ ಈ ರೀತಿಯಾಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಮಕ್ಕಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯದಲ್ಲೇ ವರದಿ ಬರಲಿದ್ದು ನಂತರವೇ ನಿಖರ ಕಾರಣ ತಿಳಿಯಲಿದೆ’ ಎಂದರು. ‘ದಡಾರ ವಿಟಮಿನ್ ಎ ಹಾಗೂ ಜೆಇ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗಿತ್ತು. ಇದಾದ ನಂತರ ಐವರು ಮಕ್ಕಳಲ್ಲಿ ಬೇಧಿ ಕಾಣಿಸಿಕೊಂಡಿದೆ. ವಿಟಮಿನ್ ಎ ಲಸಿಕೆಯಲ್ಲಿ ವ್ಯತ್ಯಾಸವಾಗಿರುವ ಅನುಮಾನವಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಮಕ್ಕಳನ್ನು ಸಮೀಪದ ವೀರಾಪುರ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಸಮ್ಮುಖದಲ್ಲಿಯೇ ಲಸಿಕೆ ನೀಡುವಂತೆ ಖಡಕ್ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.