ADVERTISEMENT

ನಷ್ಟದ ಸುಳಿಯಲ್ಲಿ ಹಾವೇರಿಯ ಹೋಟೆಲ್ ಉದ್ಯಮ

ಗ್ರಾಹಕರ ತೀವ್ರ ಕೊರತೆ: ಕಂಗಾಲಾದ ಬಾರ್‌ ಆ್ಯಂಡ್‌‌ ರೆಸ್ಟೋರೆಂಟ್‌ ಮಾಲೀಕರು

ಸಿದ್ದು ಆರ್.ಜಿ.ಹಳ್ಳಿ
Published 26 ಆಗಸ್ಟ್ 2020, 19:45 IST
Last Updated 26 ಆಗಸ್ಟ್ 2020, 19:45 IST
ಹಾವೇರಿ ನಗರದ ಸ್ವಾತಿ ಹೋಟೆಲ್‌ನಲ್ಲಿ ಬುಧವಾರ ಗ್ರಾಹಕರಿಲ್ಲದೆ ಭಣಗುಡುತ್ತಿರುವ ದೃಶ್ಯ
ಹಾವೇರಿ ನಗರದ ಸ್ವಾತಿ ಹೋಟೆಲ್‌ನಲ್ಲಿ ಬುಧವಾರ ಗ್ರಾಹಕರಿಲ್ಲದೆ ಭಣಗುಡುತ್ತಿರುವ ದೃಶ್ಯ   

ಹಾವೇರಿ: ಕೊರೊನಾ ಲಾಕ್‌ಡೌನ್‌ ಅವಧಿ ಮುಗಿದರೂಜಿಲ್ಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಹಿಡಿದ ಗ್ರಹಣ ಇನ್ನೂ ಪೂರ್ಣ ಬಿಟ್ಟಿಲ್ಲ.ಗ್ರಾಹಕರ ಕೊರತೆಯಿಂದ ಮಾಲೀಕರು ಕಂಗಾಲಾಗಿದ್ದಾರೆ. ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ 300ಕ್ಕೂ ಅಧಿಕ ಹೋಟೆಲ್‌ ಹಾಗೂ 80ಕ್ಕೂ ಅಧಿಕ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳಿವೆ. ಸೋಂಕಿನ ಭಯದಿಂದ ಗ್ರಾಹಕರು ಹೋಟೆಲ್‌ಗಳಿಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ವ್ಯಾಪಾರ–ವಹಿವಾಟು ಶೇ 50ರಷ್ಟು ಕಡಿಮೆಯಾಗಿದೆ. ಆದರೂ, ಮಾಲೀಕರಿಗೆ ಕಟ್ಟಡದ ಬಾಡಿಗೆ, ಕಾರ್ಮಿಕರ ಸಂಬಳ, ಬ್ಯಾಂಕ್‌ ಸಾಲ ಮುಂತಾದವುಗಳ ಹೊರೆ ಕಡಿಮೆಯಾಗಿಲ್ಲ.

ಮಾರ್ಚ್‌ 22ರಿಂದ ಲಾಕ್‌ಡೌನ್‌ ಜಾರಿಯಾದ ನಂತರ ಹಾವೇರಿ ನಗರದ ಬಹುತೇಕ ಹೋಟೆಲ್‌ಗಳು ಮೇ ಅಂತ್ಯದವರೆಗೆ ಬಾಗಿಲು ಮುಚ್ಚಿದ್ದವು. ಜೂನ್‌ನಿಂದ ಪಾರ್ಸಲ್‌ ಕೊಡಲು ಆರಂಭಿಸಿದರೂ, ಜುಲೈ 2ನೇ ವಾರದಿಂದ ಸರ್ವಿಸ್‌ ನೀಡಲು ಅವಕಾಶ ದೊರೆಯಿತು. ಈಗ ಲಾಕ್‌ಡೌನ್‌ ಪೂರ್ಣ ತೆರವಾಗಿದ್ದರೂ, ಹೋಟೆಲ್ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ.

ADVERTISEMENT

ಲಾಕ್‌ಡೌನ್‌ ಬರೆ:‘ಕೊರೊನಾ ಆಟ, ಮಳೆಯ ಕಾಟದಿಂದ ಹಳ್ಳಿ ಜನರು ನಗರದತ್ತ ಮುಖ ಮಾಡುತ್ತಿಲ್ಲ. ಶೇ 40ರಷ್ಟು ಗ್ರಾಹಕರು ಮಾತ್ರ ಬರುತ್ತಿದ್ದಾರೆ.ಈಗ ಉಸಿರುಗಟ್ಟಿಸುವ ವಾತಾವರಣ ಇಲ್ಲದಿದ್ದರೂ, ಲಾಕ್‌ಡೌನ್‌ ಎಳೆದ ಬರೆ, ಇನ್ನೂ ಪೂರ್ತಿ ವಾಸಿಯಾಗಿಲ್ಲ’ ಎನ್ನುತ್ತಾರೆ ಹಾವೇರಿಯ ‘ಸ್ವಾತಿ ಹೋಟೆಲ್’‌ ಮಾಲೀಕ ಉದಯಕುಮಾರ್‌ ಶೆಟ್ಟಿ.

₹10 ಲಕ್ಷ ನಷ್ಟ:‘ಸೋಂಕಿನ ಭೀತಿ, ವಾಹನ ಸೌಕರ್ಯದ ಕೊರತೆ, ತೆರೆಯದ ಶಾಲಾ–ಕಾಲೇಜು ಮತ್ತು ಚಿತ್ರಮಂದಿರಗಳು, ಆರ್ಥಿಕ ಮುಗ್ಗಟ್ಟು ಮುಂತಾದ ಕಾರಣಗಳಿಂದ ಗ್ರಾಮೀಣ ಜನರು ನಗರಗಳತ್ತ ಅಷ್ಟಾಗಿ ಬರುತ್ತಿಲ್ಲ. ಮೊದಲು ಬಂದಂತೆ ವಿದ್ಯಾರ್ಥಿಗಳು, ಯುವಕ–ಯುವತಿಯರು ಹೋಟೆಲ್‌ಗಳಿಗೆ ಬರುತ್ತಿಲ್ಲ. ದಿನಕ್ಕೆ ₹50 ಸಾವಿರ ವ್ಯಾಪಾರ ಆಗುತ್ತಿತ್ತು. ಈಗ ₹25ರಿಂದ 30 ಸಾವಿರಕ್ಕೆ ವ್ಯಾಪಾರ ಕುಸಿದಿದೆ. ಲಾಕ್‌ಡೌನ್‌ ಅವಧಿಯಲ್ಲಿ ಎರಡೂವರೆ ತಿಂಗಳು ವ್ಯಾಪಾರ ಬಂದ್‌ ಪರಿಣಾಮ ₹10 ಲಕ್ಷ ನಷ್ಟವಾಗಿದೆ’ ಎನ್ನುತ್ತಾರೆ ಹಾವೇರಿ ನಗರದ ‘ರೇಣುಕಾ ದರ್ಶಿನಿ’ ಮಾಲೀಕರಾದ ಪ್ರಕಾಶ್‌ ಶೆಟ್ಟಿ.

ಡಾಬಾಗಳ ಸ್ಥಿತಿ ದಯನೀಯ:‘ಪ್ರವಾಸಿಗರನ್ನೇ ನೆಚ್ಚಿರುವಹೆದ್ದಾರಿ ಬದಿಯ ಡಾಬಾಗಳ ಸ್ಥಿತಿ ದಯನೀಯವಾಗಿದೆ. ಶೇ 50ರಷ್ಟು ಕಾರ್ಮಿಕರಿಗೆ ಮಾತ್ರ ಮರಳಿ ಕೆಲಸ ಸಿಕ್ಕಿದ್ದು, ಉಳಿದವರು ಬೇರೆ ವೃತ್ತಿಗಳತ್ತ ಮುಖ ಮಾಡಿದ್ದಾರೆ. ವಾರಾಂತ್ಯದಲ್ಲಿ ಗ್ರಾಹಕರ ಕೊರತೆ ಕಾಡುತ್ತದೆ. ಸರ್ಕಾರ ಹೋಟೆಲ್ ಉದ್ಯಮಗಳ ಪುನಃಶ್ಚೇತನಕ್ಕೆ ನೆರವು ನೀಡಬೇಕು’ ಎನ್ನುತ್ತಾರೆ ‘ಜೈಶಂಕರ್‌ ಡಾಬಾ’ದ ಮಾಲೀಕ ಅಶೋಕ ಶೆಟ್ಟಿ.

ನಿರುದ್ಯೋಗ ಸಮಸ್ಯೆ:ಬಾರ್‌ ಆ್ಯಂಡ್‌ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಲ್ಲಿ ಶೇ 30ರಷ್ಟು ಕಾರ್ಮಿಕರನ್ನು ಕಡಿತಗೊಳಿಸಲಾಗಿದೆ. ಊರುಗಳಿಗೆ ಹೋದ ಕೆಲವು ಕಾರ್ಮಿಕರನ್ನು ಮಾಲೀಕರು ಕೆಲಸಕ್ಕೆ ಪುನಃ ಕರೆಯದ ಕಾರಣ, ಬೇರೆ ಉದ್ಯೋಗಗಳನ್ನು ಅರಸುತ್ತಾ ಕಾರ್ಮಿಕರು ಪರದಾಡುತ್ತಿದ್ದಾರೆ. ಜೀವನ ನಿರ್ವಹಣೆಯೂ ಕಷ್ಟವಾಗಿದ್ದು, ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂಬುದು ಹೋಟೆಲ್‌ ಕಾರ್ಮಿಕರ ಒಕ್ಕೊರಲ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.