ADVERTISEMENT

ಹಕ್ಕುಪತ್ರ ವಿತರಣೆಯಲ್ಲಿ ಹಾವೇರಿ ಜಿಲ್ಲೆ ಮುಂದು: ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 2:59 IST
Last Updated 1 ನವೆಂಬರ್ 2025, 2:59 IST
ಹಾನಗಲ್ ತಾಲ್ಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಿಸ್ಸೀಮೇಶ್ವರ ನೂತನ ಕಂದಾಯ ಉಪ ಗ್ರಾಮದ ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅನಾವರಣಗೊಳಿಸಿದರು.
ಹಾನಗಲ್ ತಾಲ್ಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಿಸ್ಸೀಮೇಶ್ವರ ನೂತನ ಕಂದಾಯ ಉಪ ಗ್ರಾಮದ ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅನಾವರಣಗೊಳಿಸಿದರು.   

ಹಾನಗಲ್: ‘ರಾಜ್ಯದ ಪ್ರತಿಯೊಬ್ಬರ ವಾಸಕ್ಕೂ ಸ್ವಂತ ಸೂರು ಕಲ್ಪಿಸಬೇಕು’ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ಮನೆ ಕಟ್ಟಿಕೊಂಡು ವಾಸವಿದ್ದರೂ ಹಲವರಿಗೆ ದಾಖಲೆಯಿಲ್ಲ. ಇಂಥವರಿಗೆ ಹಕ್ಕುಪತ್ರ ನೀಡಲಾಗುತ್ತಿದ್ದು, ಈ ಕೆಲಸದಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲ್ಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಶುಕ್ರವಾರ ಜರುಗಿದ ‘ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ತಮ್ಮದೇ ಸೂರು ನಿರ್ಮಿಸಿಕೊಳ್ಳುವ ಕನಸು ಇಟ್ಟುಕೊಂಡಿರುತ್ತಾರೆ. ಅದನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದರೆ, ಕೆಲವರ ಕನಸು ಈಡೇರುವುದಿಲ್ಲ. ನಮ್ಮ ಸರ್ಕಾರ, ಈಗ ಹಕ್ಕುಪತ್ರದ ಮೂಲಕ ಸೂರಿನ ಕನಸು ಈಡೇರಿಸುತ್ತಿದೆ’ ಎಂದರು.

ADVERTISEMENT

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳ ಜೊತೆಗೆ ತಾಲ್ಲೂಕಿನ ಜನತೆಗೆ ಹಕ್ಕುಪತ್ರ ದೊರಕಿಸುವ 6ನೇ ಗ್ಯಾರಂಟಿಯ ಭರವಸೆ ನೀಡಿದ್ದೆ. 30-40 ವರ್ಷಗಳ ಕಾಲ ಮನೆ ಮಾಲೀಕತ್ವ ಇಲ್ಲದೇ ಪರಿತಪಿಸುತ್ತಿದ್ದ ಸಾವಿರಾರು ಕುಟುಂಬಗಳಿಗೆ ಹಕ್ಕು ನೀಡಿರುದ ಸಾರ್ಥಕತೆ ನನ್ನದಾಗಿದೆ’ ಎಂದರು.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಮಾತನಾಡಿ, ‘ಜಿಲ್ಲೆಯಲ್ಲಿಯೇ ಹಾನಗಲ್ ತಾಲ್ಲೂಕಿನಲ್ಲಿ ಅತೀ ಹೆಚ್ಚು ಗ್ರಾಮಗಳಲ್ಲಿ ಹಕ್ಕುಪತ್ರ ನೀಡುವ ಕೆಲಸವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 373 ಗ್ರಾಮಗಳ ಫಲಾನುಭವಿಗಳನ್ನು ಗುರುತು ಮಾಡಿದ್ದೇವೆ. ಅದರಲ್ಲಿ ಹಾನಗಲ್ ತಾಲೂಕಿನಲ್ಲಿ 150ಕ್ಕೂ ಅಧಿಕ ಗ್ರಾಮಗಳನ್ನು ಗುರುತಿಸಲಾಗಿದೆ. ಎಲ್ಲರಿಗೂ ಹಕ್ಕುಪತ್ರ ಸಿಗಲಿದೆ’ ಎಂದರು.

ಫಲಾನುಭವಿಗಳ ಸಂತಸ: ಹಕ್ಕುಪತ್ರ ಸ್ವೀಕರಿಸಿ ಮಾತನಾಡಿದ ಆಲದಕಟ್ಟಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ದೇವಣ್ಣನವರ, ‘ಸುಮಾರು 40 ವರ್ಷದಿಂದ ಮನೆ ಕಟ್ಟಿಕೊಂಡು ವಾಸವಿದ್ದರೂ ಜಾಗ ನಮ್ಮ ಹೆಸರಿಗೆ ಇರಲಿಲ್ಲ. ಜಾಗ ನಮ್ಮದಾಗಿಸಿಕೊಳ್ಳಲು ಅಲೆದಾಡುತ್ತಿದ್ದೆವು. ಈಗ ನಮ್ಮ ಬಾಗಿಲಿಗೆ ಬಂದಿ ಹಕ್ಕುಪತ್ರ ನೀಡಿರುವುದು ಸಂತಸ ತಂದಿದೆ’ ಎಂದರು.

ಬಿಂಗಾಪೂರ ಗ್ರಾಮದ ಆರ್‌.ಬಿ.ಪಾಟೀಲ, ‘ನಾವು ದಿನದ ದುಡಿಮೆ ನಂಬಿ ಬದುಕುವವರು. ಯಾವ ರಾಜಕೀಯ ಪಕ್ಷದ ಸಹವಾಸವೂ ಇಲ್ಲ. ಮನೆಯ ಜಾಗ ನಮ್ಮ ಹೆಸರಿಗೆ ಮಾಡುತ್ತಾರೆಂದು ಭರವಸೆ ನೀಡುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತ ಬಂದಿದ್ದೆವು. ಈಗ ನಮ್ಮ ಬೇಡಿಕೆ ಈಡೇರಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ಎಸ್‌ಪಿ ಯಶೋಧಾ ವಂಟಗೋಡಿ, ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ತಹಶೀಲ್ದಾರ್ ರೇಣುಕಾ ಎಸ್., ಆಲದಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಳವ್ವ ದೇವಸೂರ, ಮಾರನಬೀಡ ಗ್ರಾಮ ಪಂಚಯ್ತಿ ಅಧ್ಯಕ್ಷ ಈರಣ್ಣ ಜಾಡರ, ಉಪಾಧ್ಯಕ್ಷೆ ನಗೀನಾ ಹರವಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.