
ಹಾವೇರಿ: ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ನಗರದ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಡಿ. 9ರಿಂದ ಡಿ. 30ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮಠದ ಸದಾಶಿವ ಸ್ವಾಮೀಜಿಯವರ ಪಟ್ಟಾಧಿಕಾರದ 15ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಬೆಳ್ಳಿ ತುಲಾಭಾರ ಮಾಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ 80 ಕೆ.ಜಿ. ಬೆಳ್ಳಿ ಸಂಗ್ರಹಿಸಲಾಗಿದೆ.
ಜಾತ್ರೆಯ ಜೊತೆಯಲ್ಲಿಯೇ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವವನ್ನೂ ಆಚರಿಸಲಾಗುತ್ತಿದೆ.
ಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ, ‘ಜಾತ್ರೆ ನಿಮಿತ್ತ ಹಳ್ಳಿಯ ಜನರನ್ನು ದುಶ್ಚಟಮುಕ್ತಗೊಳಿಸಲು ಜನಜಾಗೃತಿ ಪಾದಯಾತ್ರೆ, ಜಾನುವಾರು ಜಾತ್ರೆ, ಕೃಷಿ ಮೇಳ, ರುದ್ರಾಕ್ಷಿ ದೀಕ್ಷೆ, ಪ್ರವಚನ, ಫಲಪುಷ್ಪ ಪ್ರದರ್ಶನ, ಗ್ರಂಥಾಲಯ ಲೋಕಾರ್ಪಣೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ಭಕ್ತರೆಲ್ಲರೂ ಸೇರಿ ಸದಾಶಿವ ಸ್ವಾಮೀಜಿಯವರಿಗೆ ಬೆಳ್ಳಿ ತುಲಾಭಾರ ಮಾಡುತ್ತಿದ್ದಾರೆ. ತುಲಾಭಾರ ಬೇಡವೆಂದು ಸ್ವಾಮೀಜಿ ಪಟ್ಟು ಹಿಡಿದಿದ್ದರು. ಭಕ್ತರು ಹೆಚ್ಚು ಒತ್ತಾಯಿಸಿದ್ದರಿಂದ ಒಪ್ಪಿದ್ದಾರೆ. ಬೆಳ್ಳಿಯನ್ನು ಸಂಪೂರ್ಣವಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಸತಿ ನಿಲಯ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ ಬಳಸುವುದಾಗಿ ಸ್ವಾಮೀಜಿ ಷರತ್ತು ಹಾಕಿದ್ದಾರೆ’ ಎಂದು ಹೇಳಿದರು.
‘ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 27ರಂದು ವಚನ ವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 51 ಸಾವಿರ ಜನ ಸೇರಲಿದ್ದಾರೆ. ಜನರ ನಡುವೆ ಸ್ವಾಮೀಜಿಯವರನ್ನು ಕೂರಿಸಿ, ವಚನಗಳ ಮೂಲಕ ಅವರಿಗೆ ನಮನ ಸಲ್ಲಿಸಲಾಗುವುದು. ಇದು ವಿಶ್ವದಲ್ಲಿಯೇ ದಾಖಲೆಯಾಗುವ ಕಾರ್ಯಕ್ರಮವಾಗಲಿದೆ’ ಎಂದರು.
ಜಾತ್ರಾ ಕಮಿಟಿ ಪರವಾಗಿ ಮಾತನಾಡಿದ ಮಾಜಿ ಶಾಸಕ ಶಿವರಾಜ ಸಜ್ಜನರ, ‘ತುಲಾಭಾರಕ್ಕೆ 86 ಕೆ.ಜಿ. ಬೆಳ್ಳಿ ಅಗತ್ಯವಿದೆ. 101 ಕೆ.ಜಿ. ಬೆಳ್ಳಿ ನೀಡುವುದಾಗಿ ಭಕ್ತರು ವಾಗ್ದಾನ ಮಾಡಿದ್ದಾರೆ. ಈಗಾಗಲೇ 80 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ’ ಎಂದರು.
ಮೈಸೂರು ಮಹಾರಾಜರಿಗೆ ಆಹ್ವಾನ: ‘ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಹಲವು ಕಾರ್ಯಕ್ರಮಗಳು ನಡೆಯಲಿವೆ. ಮೈಸೂರಿನ ಮಹಾರಾಜರೂ ಆಗಿರುವ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರನ್ನೂ ಆಹ್ವಾನಿಸಲಾಗಿದೆ’ ಎಂದು ಸಜ್ಜನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.