ADVERTISEMENT

ಶಿಗ್ಗಾವಿ | ‘ಜಾತಿ ಮತಕ್ಕಿಂತ ಮಾನವೀಯತೆ ಮುಖ್ಯ‘ : ಭಾರತಿ ಹೆಗಡೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:40 IST
Last Updated 26 ನವೆಂಬರ್ 2025, 5:40 IST
ಶಿಗ್ಗಾವಿ ಪಟ್ಟಣದ ಗೌರಮ್ಮ ಬ.ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಶಿಗ್ಗಾವಿ ಪಟ್ಟಣದ ಗೌರಮ್ಮ ಬ.ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಶಿಗ್ಗಾವಿ: ‘ಮನುಷ್ಯ ಜನಿಸಿದ ಬಳಿಕ ಜಾತಿ ಮತಗಳ ಆಧಾರದ ಮೇಲೆ ಬದುಕುವುದನ್ನು ಬಿಟ್ಟು ಮಾನವೀಯತೆ ಗುಣಗಳನ್ನು ಬೆಳೆಸಿಕೊಂಡು ಬದುಕುವುದು ಮುಖ್ಯವಾಗಿದೆ. ಅದರಿಂದ ಬದುಕು ಮೌಲ್ಯಾಧಾರಿತವಾಗಿ ಸಾಗಲು ಸಾಧ್ಯವಿದೆ’ ಎಂದು ಬೆಂಗಳೂರು ಸಂತ ಕವಿ ಕನಕದಾಸರು ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಭಾರತಿ ಹೆಗಡೆ ಹೇಳಿದರು.

ಪಟ್ಟಣದ ಗೌರಮ್ಮ ಬ.ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ನಡೆದ ‘ಕನಕದಾಸರು ಮತ್ತು ಶಿಶುನಾಳ ಶರೀಫರು: ತೌಲನಿಕ ಅನುಸಂಧಾನ’ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಮನುಷ್ಯನಾಗಿ ಬದುಕಿದರೆ ಮಾತ್ರ ಆತನ ಜೀವನ ಸಾರ್ಥಕವಾಗುತ್ತದೆ. ಜಾತಿ, ಮತಗಳಿಂದ ಮನುಷ್ಯನ ಬೆಳವಣಿಗೆ ಕುಗ್ಗುವಂತಾಗಿದೆ. ಸರ್ವ ಸಮುದಾಯದಲ್ಲಿ ಸಮಾನತೆ, ಒಗ್ಗಟ್ಟು ಮೂಡಿದಾಗ ಇಡೀ ನಾಡಿನ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಸಮಾನತೆ ಆಧಾರ ಸ್ತಂಭವಾಗಿದೆ ಎಂಬುವುದನ್ನು ಮರೆಯುವಂತಿಲ್ಲ’ ಎಂದರು.

ADVERTISEMENT

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜೆ.ಎಂ. ನಾಗಯ್ಯ ಉದ್ಘಾಟಿಸಿ ಅವರು ಮಾತನಾಡಿ, ‘ಮನಸ್ಥಿತಿ ಕುಗ್ಗಿದಾಗ ಕೋಮು ಸಂಘರ್ಷಕ್ಕೆ ಕಾರಣವಾಗುತ್ತವೆ. ಅವರಿಗೆ ತಮ್ಮ ಧರ್ಮಗಳೇ ಶ್ರೇಷ್ಠವಾಗಿವೆ. ಆದರೂ ಈ ನೆಲದ ಸಂಸ್ಕೃತಿ, ಧರ್ಮ ಸಮಾನತೆ, ಧರ್ಮ ಸಮನ್ವಯ ಸಾಧಿಸಿದ್ದು ವಿಶೇಷ‌. ಅದನ್ನು ಶಾಸನಗಳಿಂದಲೂ, ಗ್ರಂಥಗಳಿಂದಲೂ ಗುರುತಿಸಲು ಸಾಧ್ಯವಿದೆ’ ಎಂದರು.

ಕಾಸರಗೋಡು ಡಾ.ಪ್ರಮಿಳಾ ಮಾಧವ ‘ಕನಕ ಶರೀಫರ ಕೃತಿಗಳ ತಾತ್ವಿಕ ನೆಲೆ’ ಕುರಿತು ಉಪನ್ಯಾಸ ಮಂಡಿಸಿ, ‘ಕನಕದಾಸರು, ಶರೀಫರ ತತ್ವ ಪದಗಳು ಇಡೀ ಮನುಕುಲವನ್ನು ಜಾಗೃತಗೊಳಿಸಿವೆ. ಲೌಕಿಕ ಜೀವನದಿಂದ ಅಲೌಕಿಕ ಜೀವನದ ಕುರಿತು ತಿಳಿಸಿದ್ದಾರೆ. ಹೀಗಾಗಿ ಅಲೌಕಿಕ ಅರಿವು ಅವಶ್ಯ. ಮನುಷ್ಯನ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಲು ತತ್ವಪದಗಳು ಸಹಕಾರಿಯಾಗಿವೆ’ ಎಂದರು.

ಬೆಂಗಳೂರಿನ ಜೆ.ಶ್ರೀನಿವಾಸ ಮೂರ್ತಿ ‘ಕನಕ– ಶರೀಫರು, ಮತ ಒಳ– ಹೊರಗೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ‘ಪ್ರಾಚೀನ ಕಾಲದಿಂದ ಜಾತಿ ಮತಗಳು ಕುಲಕಸುಬುಗಳಿಂದ ಬಂದಿದ್ದು, ಇಂದು ಅವುಗಳು ಮೆರೆಯಾಗುತ್ತಿವೆ. ಆದರೆ ಸರ್ಕಾರ ಜಾತಿ ಸಮೀಕ್ಷೆ ಮಾಡುವ ಮೂಲಕ ಕವಿಗಳ ಜಾತಿ ಸಮೀಕ್ಷೆ ಮಾಡುತ್ತಿದೆ. ಅದು ಮತ ಬ್ಯಾಂಕ್ ರಾಜಕಾರಣವಾಗಿದೆ. ಇಂದು ಕುಲಕಸಬುಗಳಿಂದ ಜಾತಿ ನಮೂದಿಸುವುದು ಅವರಿಗೆ ಅವಮಾನ ಮಾಡಿದಂತಾಗುತ್ತಿದೆ, ಇದು ಆಗಬಾರದು’ ಎಂದರು.

ಬಾಗಲಕೋಟೆ ಗುರುಸ್ವಾಮಿ ಹಿರೇಮಠ ಅವರು ಕನಕ– ಶರೀಫರ ಚಿಂತನೆಗಳ ಪ್ರಸ್ತುತತೆ ಮತ್ತು ಹಾವೇರಿ ಬೋವಿ ಹೊನ್ನಪ್ಪ ಅವರು ಕನಕ– ಶರೀಫರು ಗುರುತತ್ವ ಮತ್ತು ಜನಪದ ಸಾಹಿತ್ಯ ಕುರಿತು ಉಪನ್ಯಾಸ ಮಂಡಿಸಿದರು.

ಪ್ರಾಧ್ಯಾಪಕ ಡಿ.ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಆನಂದ ಇಂದೂರ ಮಾತನಾಡಿದರು. ಪ್ರಾಧ್ಯಾಪಕರಾದ ಡಿ.ಎಸ್. ಸೊಗಲದ, ಇಮ್ತಿಯಾಜ್ ಖಾನ್, ಅಂಬಿಳಿ ಪಿಳ್ಳೈ, ಪ್ರವೀಣ ಜೈನ್, ಸುರೇಶ ವಾಲ್ಮೀಕಿ, ಶ್ರದ್ಧಾ ಬೆಳದಡಿ, ಮಂಜಪ್ಪ ಚಲವಾದಿ, ಸತೀಶ ಸಿಂಗ್ ಎಸ್. ಸೇರಿದಂತೆ ವಿವಿಧ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.