ADVERTISEMENT

ಪೀಪಲ್ ಪಾಲಿಟಿಕ್ಸ್‌ನಲ್ಲಿ ನಂಬಿಕೆ ಇಟ್ಟಿದ್ದೇನೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 15:51 IST
Last Updated 5 ಮಾರ್ಚ್ 2023, 15:51 IST
ಶಾಲಾ‌ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ
ಶಾಲಾ‌ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ   

ಹಾವೇರಿ: ರಾಜಕಾರಣದಲ್ಲಿ ಪವರ್ ಪಾಲಿಟಿಕ್ಸ್, ಪೀಪಲ್ ಪಾಲಿಟಿಕ್ಸ್ ಎಂಬ ಎರಡು ರೀತಿಗಳಿದ್ದು, ನಾನು ಪೀಪಲ್ ಪಾಲಿಟಿಕ್ಸ್ ನಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿ ತಾಲೂಕು ಶಿಕ್ಷಣ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಮೃತ ಮಹೋತ್ಸವ ಹಾಗೂ ಶಾಲಾ‌ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಶಿಕ್ಷಣ ಬಹಳಷ್ಟು ಬದಲಾವಣೆ ಹೊಂದುತ್ತಿದೆ. ಮೊದಲು ಶಿಕ್ಷಣ ಅಂದರೆ ಅಕ್ಷರದ ಜ್ಞಾನ ಹಾಗೂ ನೈತಿಕ ಮೌಲ್ಯಗಳ ಆಧಾರದ ಮೇಲೆ ಶಿಕ್ಷಣ ನೀತಿ ಇತ್ತು. ಬಳಿಕ ಭಾಷೆ , ವಿಜ್ಞಾನ, ಗಣಿತ ಇತ್ಯಾದಿ ವಿಷಯಗಳ ಮೇಲೆ ಶಿಕ್ಷಣಕ್ಕೆ ಮಹತ್ವ ಬಂತು. ಈಗ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನವನ್ನು ಆಧರಿಸಿದೆ. ಬದಲಾವಣೆ ಅನುಗುಣವಾಗಿ ಪಠ್ಯ ಬದಲಿಸಬೇಕು. ಆ ಬದಲಾವಣೆ ಆಗಿದ್ದಕ್ಕೆ ಈ ಸಂಸ್ಥೆ ಬಹಳ ದೊಡ್ಡದಾಗಿ ಬೆಳೆದಿದೆ ಎಂದರು.

ADVERTISEMENT

ಇಂದಿನ‌ ದಿನಗಳಲ್ಲಿ ಕಾನ್ವೆಂಟ್ ಶಾಲೆಗಳು ಬಹಳ ಆಗಿವೆ. ಕಾನ್ವೆಂಟ್ ಅಂತ ಹೇಳಿದರೆ ಇಂಗ್ಲಿಷ್ ಕಲಿಸೋದಷ್ಟೆ.
ಕಾನ್ವೆಂಟ್ ಅಂತ ಹೆಸರು ಹಾಕಿ ಬೋರ್ಡ್ ಹಾಕಿದರೆ ಪಾಲಕರು ಪಾಳೆ ಹಚ್ಚುತ್ತಾರೆ. ಇಂಥದ್ದನ್ನು ಬಿಟ್ಟು ನಿಜವಾದ ಜ್ಞಾನ ಸಿಗುವ ಶಾಲೆಗಳಿಗೆ ಪಾಲಕರು ಮಹತ್ವ ಕೊಡಬೇಕಿದೆ ಎಂದು ಹೇಳಿದರು.

2012ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಮುಗಿದ ಮೇಲೆ ಸುಮಾರು 10 ವರ್ಷ ಶಿಕ್ಷಣ ಕ್ಷೇತ್ರ ಯಾವ ಮಟ್ಟಕ್ಕೆ ಎತ್ತರಿಸಬೇಕೋ ಆ ಕೆಲಸ ಆಗಿರಲಿಲ್ಲ. ನನಗೆ ಇದು ಕಾಡುತ್ತಿತ್ತು. ಹೀಗಾಗಿ ಕಳೆದ ವರ್ಷ ಬಜೆಟ್ ನಲ್ಲಿ ಶೇ 12ರಷ್ಟು ಹಣವನ್ನು ನಾನು ಶಿಕ್ಷಣಕ್ಕೆ ಮೀಸಲಿಟ್ಟು ಸುಮಾರು 8000 ಕೊಠಡಿ ಕಟ್ಟಲು ತೀರ್ಮಾನ ಮಾಡಿದೆ. ವಿವಿಧ ಯೋಜನೆಯಡಿ 9500 ಶಾಲಾ ಕೊಠಡಿಗಳನ್ನು ಈ ವರ್ಷ ಜೂನ್ ತಿಂಗಳೊಳಗೆ ಕಟ್ಟಿ ಮುಗಿಸುತ್ತಿದ್ದೇವೆ. ಇದಕ್ಕಾಗಿ ವಿವೇಕ ಎಂಬ ಯೋಜನೆ ಜಾರಿಗೊಳಿಸಲಾಗಿದೆ. ಜೊತೆಗೆ 15000 ಶಾಲಾ ಶಿಕ್ಷಕರ ನೇಮಕಾತಿ ಮಾಡುತ್ತಿದ್ದೇವೆ. ಕೊಠಡಿ ಕಟ್ಟುವುದರ ಜೊತೆ ಶಿಕ್ಷಣದ ಆತ್ಮವಾದ ಗುರುಗಳೂ ಅಷ್ಟೇ ಮುಖ್ಯ. ಹೀಗಾಗಿ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಶಿಕ್ಷಣ ಹಾಗೂ ಆರೋಗ್ಯ ಬಹಳ ಪ್ರಮುಖ. ಇವೆರಡು ಕೊಟ್ಟರೆ ಮಕ್ಕಳು ದೇಶ ಕಟ್ಟುತ್ತಾರೆ. ಹೀಗಾಗಿ ಪಿಯು ಇಂದ ಡಿಗ್ರಿ ವರೆಗೂ ಫ್ರೀ ಎಜುಕೇಶನ್ ಮಾಡಿದ್ದೇನೆ. ಶುಲ್ಕ ಕಟ್ಟೋದೇ ಬೇಡ. ಅದನ್ನು ಸರ್ಕಾರ ತುಂಬುತ್ತೆ. ವಿದ್ಯಾರ್ಥಿನಿಯರಿಗೆ ಫ್ರೀ ಬಸ್ ಪಾಸ್ ಮಾಡಿದ್ದೇವೆ. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿಸಲು ಫ್ರೀ ಬಸ್ ಪಾಸ್ ಮಾಡಿದ್ದೇನೆ. ರೈತ ಮಹಿಳೆಯರ ಬಡಮಕ್ಕಳಿಗೆ ಅಂಗನವಾಡಿ ಕೊಟ್ಟಿದ್ದೇವೆ. ವಿದ್ಯಾರ್ಥಿಗಳಿಗೆ 2000 ಸ್ಕೂಲ್ ಬಸ್ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.