ADVERTISEMENT

ಹಾವೇರಿ: ಅಕ್ರಮ ಎಸಗಿದರೆ ಪರವಾನಗಿ ರದ್ದು; ಸಚಿವ ಕೆ.ಗೋಪಾಲಯ್ಯ ಖಡಕ್‌ ಸೂಚನೆ

ತೂಕ ಮತ್ತು ದರದಲ್ಲಿ ವ್ಯತ್ಯಾಸವಾದರೆ ಕ್ರಮ: ಆಹಾರ ಸಚಿವ ಕೆ.ಗೋಪಾಲಯ್ಯ ಖಡಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 14:25 IST
Last Updated 29 ಏಪ್ರಿಲ್ 2020, 14:25 IST
ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಹಾರ ಸಚಿವ ಕೆ.ಗೋಪಾಲಯ್ಯ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಹಾರ ಸಚಿವ ಕೆ.ಗೋಪಾಲಯ್ಯ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಹಾವೇರಿ: ತೂಕ, ಅಳತೆಯಲ್ಲಿ ಮೋಸ ಹಾಗೂ ಪಡಿತರದಾರರಿಂದ ಸೇವಾ ವೆಚ್ಚದ ನೆಪದಲ್ಲಿ ಹಣ ವಸೂಲಿ ಮಾಡುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೋನಾ ಸಂದರ್ಭದಲ್ಲಿ ಪಡಿತರ ದಾಸ್ತಾನು, ವಿತರಣೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ ಅಡಿ ಪಡಿತರ ವಿತರಣೆ ಕುರಿತಂತೆ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.ಕೊರೊನಾ ಸಂಕಷ್ಟ ಕಾಲದಲ್ಲಿ ಯಾರಿಗೂ ರೇಷನ್ ನಿರಾಕರಿಸಬಾರದು. ಅನರ್ಹರೆಂದು ಕಂಡು ಬಂದರೂ ಕರೋನಾ ಮುಗಿಯುವವರೆಗೂ ಯಾವ ಕಾರ್ಡ್‍ಗಳನ್ನೂ ಅನರ್ಹಗೊಳಿಸಬಾರದು ಎಂದರು.

ತಂಡ ರಚನೆಗೆ ಸೂಚನೆ

ADVERTISEMENT

ಗ್ರಾಹಕರಿಂದ ಯಾವುದೇ ಸೇವಾ ವೆಚ್ಚವನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ವಸೂಲಿ ಮಾಡುವ ಹಾಗಿಲ್ಲ. ಸರ್ಕಾರವೇ ಅವರಿಗೆ ಸೇವಾ ವೆಚ್ಚವನ್ನು ನೀಡುತ್ತಿದೆ. ಪಡಿತರದಾರರಿಂದ ಯಾರಾದರೂ ಒಂದು ಪೈಸೆ ಹಣ ಪಡೆದರೆ ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಿ. ಕಂದಾಯ, ಆಹಾರ ಇಲಾಖೆ ಹಾಗೂ ಅಳತೆ ಮತ್ತು ತೂಕ ಇಲಾಖೆಯ ಅಧಿಕಾರಿಗಳ ಒಳಗೊಂಡಂತೆ ಹತ್ತರಿಂದ ಹದಿನೈದು ತಂಡಗಳನ್ನು ರಚಿಸಿ ಜಿಲ್ಲೆಯ ಎಲ್ಲ 456 ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ಮೇಲೆ ನಿಗಾವಹಿಸಲು ಸೂಚನೆ ನೀಡಿದರು.

ಪಡಿತರ ಕಾರ್ಡಿಗಾಗಿ ಅರ್ಜಿ ಹಾಕಿದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ರೇಷನ್ ನೀಡಬೇಕು. ಪ್ರತಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ನೀಡಬೇಕು ಹಾಗೂ ಎಪಿಎಲ್ ಕುಟುಂಬ ರೇಷನ್ ಬೇಡಿಕೆ ಸಲ್ಲಿಸಿದರೆ ಒಂದು ಕೆ.ಜಿ. ಅಕ್ಕಿಗೆ ₹15ರ ದರದಲ್ಲಿ ಪಡೆಯಲು ಅವಕಾಶವಿದೆ. ಮೇ ತಿಂಗಳಲ್ಲಿ ರೇಷನ್ ಜೊತೆಗೆ ಒಂದು ಕೆ.ಜಿ. ತೊಗರಿ ಬೇಳೆಯನ್ನು ನೀಡಲಾಗುವುದು ಎಂದರು.

ಸಿ.ಎಂ ಜತೆ ಚರ್ಚೆ

ಹಾವೇರಿ ಜಿಲ್ಲೆಯಲ್ಲಿ ಪಡಿತರ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿದವರ ಅರ್ಹತೆ ಪರಿಶೀಲಿಸಿ ತ್ವರಿತವಾಗಿ ಅರ್ಹರಿಗೆ ಕಾರ್ಡ್ ವಿತರಿಸಿ. ಮೇ ತಿಂಗಳಲ್ಲಿ ರಾಜ್ಯದ ಎಲ್ಲ 19,800 ಪಡಿತರ ಅಂಗಡಿಗಳನ್ನು ಏಕಕಾಲದಲ್ಲಿ ತೆರೆದು ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಟ್ಟಿಗೆ ನೀಡುವ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಗುರುವಾರ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲೆಯ 456 ಅಂಗಡಿಗಳಲ್ಲೂ ಏಕ ಸಮಯದಲ್ಲಿ ತೆರೆದು ಪಡಿತರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

800 ರೈತರ ನೋಂದಣಿ

ಬೆಂಬಲ ಬೆಲೆಯಡಿ ಭತ್ತ ಪೂರೈಸಲು 800 ರೈತರು ನೋಂದಾಯಿಸಿಕೊಂಡಿದ್ದು, ಈವರೆಗೆ 655 ರೈತರಿಂದ 2085.682 ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಲಾಗಿದೆ. ಈ ಪೈಕಿ 561 ರೈತರಿಗೆ ₹ 3.20 ಕೋಟಿ ಪಾವತಿ ಮಾಡಲಾಗಿದೆ. ಬಾಕಿ ರೈತರಿಂದ ಭತ್ತ ಖರೀದಿಯ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಜಿಲ್ಲೆಗೆ 4,280 ಫಲಾನುಭವಿಗಳ ಗುರಿ ನಿಗದಿ ಮಾಡಿದೆ. ಎಲ್ಲ ಫಲಾನುಭವಿಗಳಿಗೂ ಸಿಲಿಂಡರ್‌ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 1,28,881 ಫಲಾನುಭವಿಗಳಿಗೆ ಸಿಲಿಂಡರ್‌ ವಿತರಣೆಯ ಗುರಿ ನಿಗದಿಪಡಿಸಿದ್ದು, ಈವರೆಗೆ 51,299 ಫಲಾನುಭವಿಗಳು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 49,490 ಫಲಾನುಭವಿಗಳಿಗೆ ರೀಫಿಲ್‌ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.