ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಗೆ ಪ್ಲೇಟ್ ಅಂಟಿಸಲು ಅಕ್ರಮವಾಗಿ ತಲಾ ₹100 ವಸೂಲಿ ಮಾಡಿರುವ ಆರೋಪ ವ್ಯಕ್ತವಾಗಿದ್ದು, ಈ ವಸೂಲಿ ಸಂಬಂಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಅವರು ವಿಚಾರಣೆ ಆರಂಭಿಸಿದ್ದಾರೆ.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳ ಬಾಗಿಲಿಗೆ, ‘ಆಸ್ತಿ ಸಂಖ್ಯೆ/ಇ–ಸ್ವತ್ತು ಸಂಖ್ಯೆ, ಪಡಿತರ ಚೀಟಿ ಸಂಖ್ಯೆ’ ಮಾಹಿತಿಯುಳ್ಳ ಪ್ಲೇಟ್‌ಗಳನ್ನು ಅಂಟಿಸಿದರೆ ಆಡಳಿತಕ್ಕೆ ಅನುಕೂಲವಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು ಸಲಹೆ ನೀಡಿದ್ದಾರೆ. ಪ್ಲೇಟ್‌ಗಳನ್ನು ಉಚಿತವಾಗಿ ಅಂಟಿಸುವ ಬಗ್ಗೆಯೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇದರ ನಡುವೆಯೇ, ಅಕ್ಕಿಆಲೂರು ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಪ್ಲೇಟ್ ಅಂಟಿಸಿ ತಲಾ ₹100 ವಸೂಲಿ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮವಾಗಿ ₹100 ಪಡೆದಿರುವ ಸಿಬ್ಬಂದಿ, ‘ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿ’ ಹೆಸರಿನಲ್ಲಿ ರಶೀದಿ ಸಹ ನೀಡಿದ್ದಾರೆ.
ಹಣ ವಸೂಲಿಯನ್ನು ಪ್ರಶ್ನಿಸಿ ಕೆಲ ನಿವಾಸಿಗಳು ನೀಡಿರುವ ದೂರು ಆಧರಿಸಿ ಪ್ಲೇಟ್ ಅಂಟಿಸುವ ಕೆಲಸವನ್ನು ಬಂದ್ ಮಾಡಿಸಿರುವ ಇ.ಒ ಪರಶುರಾಮ ಪೂಜಾರ, ವಸೂಲಿ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
60 ಮನೆಗಳಿಂದ ಹಣ ವಸೂಲಿ: ‘ಅಕ್ಕಿಆಲೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳಿಗೂ ಪ್ಲೇಟ್ ಅಂಟಿಸಲು ಸಿಬ್ಬಂದಿಗೆ ಹೇಳಲಾಗಿತ್ತು. ಕೆಲಸವೂ ಆರಂಭವಾಗಿತ್ತು. ಸುಮಾರು 60 ಮನೆಗಳಿಂದ ತಲಾ ₹100 ವಸೂಲಿ ಮಾಡಲಾಗಿತ್ತು. ಬಹುತೇಕರು ಹಣ ಕೊಟ್ಟು ಸುಮ್ಮನಾಗಿದ್ದರು. ಆದರೆ, ಕೆಲವರು ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಗಲಾಟೆ ಮಾಡಿದ್ದರು. ಹಣ ವಸೂಲಿ ಏಕೆ? ಎಂದು ಪ್ರಶ್ನಿಸಿದ್ದರು. ಅವಾಗಲೇ ಇದೊಂದು ಅಕ್ರಮ ವಸೂಲಿ ಎಂಬುದು ಪತ್ತೆಯಾಗಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.
ಹಣ ವಸೂಲಿ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪರಶುರಾಮ ಪೂಜಾರ, ‘ಅಕ್ಕಿಆಲೂರು ಪಿಡಿಒ ಕುಮಾರ ಮಕರವಳ್ಳಿ ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಹಣ ವಸೂಲಿ ಮಾಡಲು ಅನುಮತಿ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ನೀಡುತ್ತೇನೆ. ಸಿಇಒ ಅವರೇ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.
‘ಪ್ಲೇಟ್ ಅಂಟಿಸುವ ಬಗ್ಗೆ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಜೊತೆ ಚರ್ಚಿಸಿ ಪಿಡಿಒ ತೀರ್ಮಾನ ತೆಗೆದುಕೊಳ್ಳಬೇಕು. ಪ್ಲೇಟ್ ಅಂಟಿಸಿ ಹಣ ಪಡೆಯಲು ಎಲ್ಲಿಯೋ ಅವಕಾಶವಿಲ್ಲ. ಆದರೆ, ಪಿಡಿಒ ಅವರು ಅವಕಾಶ ಮಾಡಿಕೊಟಿದ್ದಾರೆ. ಸುಮಾರು 50ರಿಂದ 60 ಮನೆಗಳಿಂದ ಹಣ ವಸೂಲಿ ಮಾಡಿರುವುದು ಗಮನಕ್ಕೆ ಬಂದಿದೆ. ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಹೇಳಿದರು.
ಹಣ ವಸೂಲಿ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಿಡಿಒ ಕುಮಾರ ಮಕರವಳ್ಳಿ ಅವರು ಲಭ್ಯರಾಗಲಿಲ್ಲ.
ಅಕ್ಕಿಆಲೂರು ಪಂಚಾಯಿತಿಯಿಂದ ಪ್ಲೇಟ್‌ಗಾಗಿ ಹಣ ವಸೂಲಿ ಮಾಡಿದ ವಿಷಯ ಗಮನಕ್ಕೆ ಬಂದಿದೆ. ಇಒ ವರದಿ ನೀಡಿದ ನಂತರ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುರುಚಿ ಬಿಂದಲ್ ಜಿ.ಪಂ. ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.