ಧುಂಡಶಿ ಗ್ರಾಮದ ಹತ್ತಿರದ ಹೊಲ ಒಂದರಲ್ಲಿ ಶುಂಠಿ ಬೆಳೆಗೆ ಗೊಬ್ಬರ ಹೊತ್ತು ಸಾಗುತ್ತಿರುವ ಕಾರ್ಮಿಕರು.
ತಡಸ: ಸಮೀಪದ ಧುಂಡಶಿ ಹೋಬಳಿಯಲ್ಲಿ ಒಟ್ಟು ಕೃಷಿ ಭೂಮಿ 12,840 ಹೆಕ್ಟೇರ್ ಇದ್ದು, ಕಳೆದ ವರ್ಷ 300 ಹೆಕ್ಟೇರ್ ಪ್ರದೇಶದಲ್ಲಿದ್ದ ಶುಂಠಿ ಬೆಳೆಯು, ಈ ವರ್ಷ 800 ಹೆಕ್ಟೇರ್‌ಗೆ ವ್ಯಾಪಿಸಿದೆ.
ರೈತರು ತಮ್ಮ ಹೊಲ–ಗದ್ದೆಯನ್ನು ಬೇರೆಯವರಿಗೆ ಎಕರೆಗೆ ₹1 ಲಕ್ಷದಂತೆ 18 ತಿಂಗಳವರೆಗೆ ಲಾವಣಿ ರೂಪದಲ್ಲಿ ನೀಡುತ್ತಿರುವುದರಿಂದ ಶುಂಠಿ ಬೆಳೆ ಹೆಚ್ಚಿದೆ. ಆದರೆ, ಇತರೆ ಬೆಳೆಗಳ ಪ್ರಮಾಣ ಕುಸಿತವಾಗುತ್ತಿದೆ.
ಭತ್ತ, ಗೋವಿನಜೋಳ ಕುಸಿತ: ‘ಶುಂಠಿಯತ್ತ ಕೃಷಿಕರು ವಾಲುತ್ತಿರುವುದರಿಂದ ಭತ್ತ ಹಾಗೂ ಗೋವಿನ ಜೋಳ ಬೆಳೆ ಪ್ರಮಾಣ ಕುಸಿತ ಕಂಡಿದೆ. ಅಕ್ಕಿಯನ್ನು ಹೆಚ್ಚು ದರಕ್ಕೆ ಖರೀದಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನೀರಲಗಿ ಗ್ರಾಮದ ರೈತ ರಾಮಣ್ಣ ಹೇಳಿದರು.
ಕೃಷಿ ಕಾರ್ಮಿಕರ ಕೊರತೆ: ಶುಂಠಿ ಕೃಷಿ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಹೆಚ್ಚಿಗೆ ಕೂಲಿ ಸಿಗುತ್ತಿದೆ. ಇದರಿಂದಾಗಿ ಇತರೆ ಬೆಳೆ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಾರೆ.
ಹೊರ ರಾಜ್ಯ–ಜಿಲ್ಲೆಯವರಿಗೆ ಲಾಭ: ‘ಮಂಗಳೂರು, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಭಾಗದ ಶುಂಠಿ ಬೆಳೆಗಾರರು ಇಲ್ಲಿಗೆ ಬಂದು, ರೈತರಿಂದ ಜಮೀನು ಪಡೆದು, ಬೆಳೆ ಬೆಳೆಯುತ್ತಿದ್ದಾರೆ. ಅವರು ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ.
‘ಸಾಲ ತೀರಿಸಿದ್ದೇನೆ’
‘ಪ್ರತಿ ವರ್ಷ ಅತಿವೃಷ್ಟಿ–ಅನಾವೃಷ್ಟಿಯಿಂದ ಬೆಳೆ ಹಾಳಾಗುತ್ತಿದೆ. ಸಾಲ ಮಾಡಿ ಕೃಷಿ ಮಾಡಿದರೂ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ನಾಲ್ಕು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದು ಸಾಲ ತೀರಿಸಿದ್ದೇನೆ’ ಎಂದು ರೈತ ಸೋಮಶೇಖರ ಹೇಳಿದರು.
‘ಕಳೆದ ವರ್ಷಕ್ಕಿಂತ ಈ ವರ್ಷ ಶುಂಠಿ ಬೆಳೆ ಪ್ರಮಾಣ ಹೆಚ್ಚಿದ್ದು ಈ ಬೆಳೆ ಪ್ರೋತ್ಸಾಹಕ್ಕೆ ಸರ್ಕಾರದಿಂದ ಯಾವುದೇ ಯೋಜನೆ ಇಲ್ಲ. ಶುಂಠಿ ಬೆಳೆಗಾರರ ಜೊತೆ ಪಾಲುದಾರರಾಗಿ ರೈತರು ಕೃಷಿ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ ಕಿಶೋರ ನಾಯ್ಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.