ADVERTISEMENT

ಮತೀಯ ಗೂಂಡಾಗಿರಿ ಸಮರ್ಥಿಸಿಕೊಳ್ಳುವುದು ಸರೀನಾ?: ಡಿಕೆ ಶಿವಕುಮಾರ್‌

ಮುಖ್ಯಮಂತ್ರಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 14:24 IST
Last Updated 22 ಅಕ್ಟೋಬರ್ 2021, 14:24 IST
ಹಾನಗಲ್‌ ತಾಲ್ಲೂಕು ಆಡೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರು ತೈಲ ಬೆಲೆ ಏರಿಕೆ ಹಾಗೂ ಅಚ್ಛೇದಿನ ವ್ಯಂಗ್ಯ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು
ಹಾನಗಲ್‌ ತಾಲ್ಲೂಕು ಆಡೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರು ತೈಲ ಬೆಲೆ ಏರಿಕೆ ಹಾಗೂ ಅಚ್ಛೇದಿನ ವ್ಯಂಗ್ಯ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು   

ಹಾವೇರಿ: ಬಸವರಾಜ ಬೊಮ್ಮಾಯಿ ಅವರು ಹಿಂದೆ ಗೃಹಸಚಿವರಾಗಿದ್ದರು. ಈಗ ಮುಖ್ಯಮಂತ್ರಿಯಾಗಿದ್ದಾರೆ. ಮತೀಯ ಗೂಂಡಾಗಿರಿ ಸಮರ್ಥಿಸಿಕೊಳ್ಳುತ್ತಿರುವುದು ಸರೀನಾ? ಪೊಲೀಸರ ಘನತೆ, ಗೌರವ ಏನಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

ಹಾನಗಲ್‌ ತಾಲ್ಲೂಕಿನ ನರೇಗಲ್‌ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,ಸಂವಿಧಾನ, ಪೊಲೀಸ್ ಇಲಾಖೆ ಏಕಿರಬೇಕು? ಗೃಹ ಸಚಿವರಾಗಿ ಕೆಲಸ ಮಾಡಿದವರೇ ತಮ್ಮ ಪಕ್ಷದ ಪಟಾಲಂನ ಕಿಡಿಗೇಡಿತನ ಸಮರ್ಥಿಸಿಕೊಳ್ಳುವುದು ರಾಜ್ಯ ಮತ್ತು ಇಡೀ ದೇಶಕ್ಕೆ ಕೆಟ್ಟ ಉದಾಹರಣೆಯಾಗಿ ನಿಲ್ಲುವಂತೆ ಮಾಡಿದೆ. ನಮ್ಮನ್ನು ಕಾಯುವ ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡುವ ಪ್ರಯತ್ನ ಖಂಡನೀಯ. ಈ ಬಗ್ಗೆ ನಾವು ಮುಂದೆ ಹೋರಾಟ ಮಾಡುತ್ತೇವೆ ಎಂದರು.

ಚರ್ಚ್‌ಗೆ ಬಲವಂತವಾಗಿ ನುಗ್ಗಿ ಭಜನೆ ಮಾಡಿದವರ ವಿರುದ್ಧ ಅಲ್ಲಿನ ಪೊಲೀಸರು ಎಫ್‌ಐಆರ್‌ ದಾಖಲಿಸಿರುವುದು ಸ್ವಾಗತಾರ್ಹ. ನಾವು ಹಿಂದೂಗಳೇ. ಆದರೆ, ಬೇರೆ ಧರ್ಮದವರ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಮಾಡಿರುವ ದಾಳಿ ಖಂಡನೀಯ. ಈ ವಿಚಾರವಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಅರವಿಂದ ಬೆಲ್ಲದ ಅವರನ್ನು ಸೇರಿಸಿ ಪ್ರಕರಣ ದಾಖಲಿಸಬೇಕು ಎಂದು ಕಿಡಿಕಾರಿದರು.

ADVERTISEMENT

ಬೊಮ್ಮಾಯಿಗೆ ಸೋಲಿನ ಭಯ:ಹಾನಗಲ್‌ ತಾಲ್ಲೂಕಿನ ಆಡೂರಿನ ಪ್ರಚಾರ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಇದೇ ಜಿಲ್ಲೆಯವನಾದ ನನ್ನ ಮರ್ಯಾದೆ ನಿಮ್ಮ ಕೈಯಲ್ಲಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಗೊಂಬೆ ಇದ್ದಂತೆ. ನಾನೇ ಇಲ್ಲಿ ಅಭ್ಯರ್ಥಿ. ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ವಿದ್ಯುತ್‌ ಇಲಾಖೆ ನೌಕರರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರಂತೆ. ಬೊಮ್ಮಾಯಿ ಅವರಿಗೆ ಬಿಜೆಪಿ ಅಭ್ಯರ್ಥಿ ಸೋಲುತ್ತಾರೆ ಎಂಬ ಭಯ ಕಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಇದ್ದಾಗ ವಿದ್ಯುತ್‌ ಇಲಾಖೆ ನೌಕರರ ಉದ್ಯೋಗ ಕಾಯಂ ಮಾಡಿ, ಸಂಬಳ ಜಾಸ್ತಿ ಮಾಡಲಾಗಿದೆ. ಹೀಗಾಗಿ ಕಾಂಗ್ರೆಸ್‌ಗೆ ಮತ ನೀಡಲು ನೌಕರರು ನಿರ್ಧಾರ ಕೈಗೊಂಡಿದ್ದಾರೆ. ಪ್ರತಿ ಮನುಷ್ಯನಿಗೂ ಉಪಕಾರ ಸ್ಮರಣೆ ಇರುವುದು ಅಗತ್ಯ. ರೈತರಿಗೂ ಉಪಕಾರ ಸ್ಮರಣೆ ಇದೆ. ಬೆಲೆ ಏರಿಕೆ ಮೂಲಕ ತಮಗೆ ಇನ್ನಿಲ್ಲದ ತೊಂದರೆ ಕೊಟ್ಟಿರುವ ಬಿಜೆಪಿಗೆ ವೋಟು ಹಾಕಲ್ಲಾ ಅಂತಾ ಅನ್ನದಾತರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.