ರಟ್ಟೀಹಳ್ಳಿ: ತಾಲ್ಲೂಕಿನ ಕಣವಿಶಿದ್ದಗೇರಿ (ಸಿದ್ಧಗಿರಿ, ಸಿದ್ಗೇರಿ) ಗ್ರಾಮದ ಕಣವಿಶಿದ್ಧೇಶ್ವರ ದೇವಸ್ಥಾನ 12ನೇ ಶತಮಾನದ ಐತಿಹಾಸಿಕ ಪ್ರಸಿದ್ಧಿವುಳ್ಳ ಪುರಾತನ ದೇವಸ್ಥಾನ. ತಾಲ್ಲೂಕು ಕೇಂದ್ರ ರಟ್ಟೀಹಳ‍್ಳಿಯಿಂದ ಕೇವಲ 4 ಕಿ.ಮೀ. ದೂರದಲ್ಲಿರುವ ಈ ಗ್ರಾಮ ದಕ್ಷಿಣ ಕಾಶಿಯೆಂದು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಆರಾಧ್ಯದೈವ ಕಣವಿಸಿದ್ಧಪ್ಪ.
ಈಚೆಗೆ ಉತ್ತರಪ್ರದೇಶದಲ್ಲಿ ನಡೆದ ಮಹಾಕುಂಭಮೇಳದಲ್ಲಿ ಅಘೋರಿ ಸಾಧುರೊಬ್ಬರು ಈ ಕಣವೀಶನ ಮಹಿಮೆಯನ್ನು ತಿಳಿಸಿದ್ದಾರೆ. ಎತ್ತರದ ಬೃಹದಾಕಾರದ ಬೆಟ್ಟದ ಗುಹೆಯಲ್ಲಿ ಈಶ್ವರ ಲಿಂಗ ಇಲ್ಲಿ ನೆಲಸಿದ್ದಾನೆ. ಕಣವಿಶಿದ್ದಪ್ಪನಿಗೆ ಪ್ರದಕ್ಷಿಣೆ ಹಾಕಬೇಕು ಎಂದರೆ ಬೆಟ್ಟದ ಗುಹೆಯ ಒಳಗೆ ಸಾಗಿ ಬರುವುದೇ ಒಂದು ವಿಸ್ಮಯ.
ನಿತ್ಯ ಸೂರ್ಯೋದಯದಲ್ಲಿ ಸೂರ್ಯನ ಕಿರಣಗಳು ಈ ಶಿವಲಿಂಗದ ಮೇಲೆ ಬೀಳುವುದು ಒಂದು ವಿಸ್ಮಯಕಾರಿ ವಿಷಯ. ದೇವಸ್ಥಾನಕ್ಕೆ ಹೊಂದಿಕೊಂಡು ಇರುವ ಬೆಟ್ಟ ಹತ್ತಿದ್ದಲ್ಲಿ ಅಲ್ಲಿ ಸಿಗುವುದು ಅಂತರಗಂಗೆ (ಬೆಟ್ಟದ ಮೇಲೆ ಬಂಡೆಯಲ್ಲಿ ದೊಡ್ಡದಾದ ರಂಧ್ರವಿದೆ) ಇಲ್ಲಿ ವರ್ಷದ 365 ದಿನವು ನೀರು ಇರುತ್ತದೆ. ಈ ಅಂತರಗಂಗೆಯಲ್ಲಿ ಭಕ್ತರು ಸಿದ್ದಪ್ಪನಿಗೆ ಪ್ರಾರ್ಥಿಸಿ ತಮ್ಮ ಅಭಿಷ್ಟೇಯ ಕೋರಿಕೆಯನ್ನು ಕೇಳಿಕೊಂಡು ಕೈತೂರಿದರೆ ಅವರಿಗೆ ಶುದ್ಧವಾದ ಗಂಗೆ, ಅಥವಾ ಬಾಳೆಹಣ್ಣು, ಎಲೆಗಳು ಸಿಗುವುದು. ಒಂದು ವೇಳೆ ಅವರ ಕೋರಿಕೆ ಈಡೇರುವುದಿಲ್ಲ ಎಂದಾದರೆ ಅವರಿಗೆ ಏನೂ ಸಿಗುವುದಿಲ್ಲ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು ಮತ್ತು ಅಂತಹ ಕೌತುಕದ ವಿಸ್ಮಯ ಇಂದಿಗೂ ಇಲ್ಲಿ ನಡೆಯುತ್ತದೆ.
ಸಿದ್ದಪ್ಪನ ದೇವಸ್ಥಾನದ ಎದುರಿಗೆ ಇರುವುದು ಎತ್ತರವಾದ ಓಂ ಬೆಟ್ಟ. ಬೆಟ್ಟದ ತುದಿಯಲ್ಲಿ ಒಂದು ದೀಪಮಾಲಾ ಸ್ತಂಭವಿದ್ದು, ಸ್ತಂಭದ ಮೇಲೆ ದೀಪ ಹಚ್ಚಿದರೆ ಅದರ ಪ್ರಕಾಶಮಾನ ಬೆಳಕಿನ ಛಾಯೆ ಈಶ್ವರ ಲಿಂಗದ ಮೇಲೆ ಬೀಳುತ್ತದೆ.
ದೇವಸ್ಥಾನದಲ್ಲಿ ನಿತ್ಯ ಪೂಜೆ, ಅಭಿಷೇಕ. ನೈವೇದ್ಯಕಾರ್ಯಗಳು ಜರುಗುತ್ತವೆ. ಅಲ್ಲದೇ ದೇವಸ್ಥಾನಕ್ಕೆ ಟ್ರಸ್ಟ ಕಮಿಟಿ ಇದ್ದು ಪ್ರತಿವರ್ಷ ಶಿವರಾತ್ರಿ, ಹಾಗೂ ಕಣವಿಶಿದ್ದಪ್ಪನ ಜಾತ್ರೆ, ಶ್ರಾವಣ ಮಾಸದ ಕಾರ್ಯಕ್ರಮಗಳು ಅತೀ ವೈಭವದಿಂದ ಜರುಗುತ್ತವೆ ಎನ್ನುತ್ತಾರೆ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಪುತ್ರಪ್ಪ ಕರಿಯಣ್ಣನವರ.
ದೇವಸ್ಥಾನದ ಪಕ್ಕದಲ್ಲಿ ಬೃಹತ್ ಪರಮೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಸಮುದಾಯ ಭವನ ನಿರ್ಮಿಸಿದ್ದು, ಹಲವಾರು ಮಂಗಲ ಕಾರ್ಯಗಳು ಇಲ್ಲಿ ಜರುಗುತ್ತವೆ. ಈ ಪುರಾತನ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರರಾಜ್ಯದಿಂದ ನೂರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ.
ಪ್ರವಾಸಿಗರು ಹಾಗೂ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಬೇಕುಫಕ್ಕೀರೇಶ ತುಮ್ಮಿನಕಟ್ಟಿ ಬಟ್ಲಕಟ್ಟಿ ಭಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.