ಹಾನಗಲ್: ತಾಲ್ಲೂಕಿನಲ್ಲಿ ಹರಿಯುತ್ತಿರುವ ಧರ್ಮಾ ನದಿಯ ನೀರು, ಕಂಚಿನೆಗಳೂರ ವಡ್ಡಿನ ಮೂಲಕ ಸೌಂದರ್ಯ ಸೃಷ್ಟಿಸುತ್ತಿದೆ. ಈ ಜಲಪಾತದ ಸೊಬಗು ನಿಸರ್ಗಪ್ರಿಯರ ನೆಚ್ಚಿನ ತಾಣವಾಗಿದೆ.
ಉತ್ತಮ ಮಳೆಯಿಂದಾಗಿ ನದಿ ಪಾತ್ರ ಹಿಗ್ಗಿಸಿಕೊಂಡು ಧರ್ಮಾ ಹರಿಯುತ್ತಿದೆ. ಪ್ರತಿ ಬಾರಿ ಧರ್ಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದಂತೆಲ್ಲ ಕಂಚಿನೆಗಳೂರ ವಡ್ಡು ಆಕರ್ಷಣೀಯವಾಗುತ್ತದೆ. ಈ ವರ್ಷವೂ ಜಲ ಕಳೆ ಬಂದಿದೆ. ಈ ಸ್ಥಳಕ್ಕೆ ಮಳೆಗಾಲದ ಸಮಯದಲ್ಲಿ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಪ್ರಕೃತಿದತ್ತ ಜಲವೈಭವ ಕಣ್ತುಂಬಿಕೊಳ್ಳುತ್ತಾರೆ. ಇದೇ ಸ್ಥಳದಲ್ಲಿ ಸುಂದರವಾದ ಬ್ರಹ್ಮ ಲಿಂಗು ಪ್ರತಿಷ್ಠಾಪನೆಗೊಂಡು, ಪ್ರವಾಸ ತಾಣವಾಗಿದೆ.
ಮುಂಡಗೋಡ ತಾಲ್ಲೂಕಿನ ಮಳಗಿ ಜಲಾಶಯದಲ್ಲಿ ಸಂಗ್ರಹಗೊಂಡ ಬಳಿಕ ಹಾನಗಲ್ ತಾಲ್ಲೂಕು ಪ್ರವೇಶಿಸುವ ಧರ್ಮಾ ನದಿ, ಕಂಚಿನೆಗಳೂರ, ನರೇಗಲ್ ಬಳಿಕ ಕೂಡಲದಲ್ಲಿ ವರದಾ ನದಿಯನ್ನು ಸೇರಿಕೊಳ್ಳುತ್ತದೆ. ಧರ್ಮಾ ನದಿಯಲ್ಲಿ ಮಳೆಗಾಲದಲ್ಲಿ ನೀರಿನ ಪ್ರಮಾಣ ಅಧಿಕವಾದಾಗ ಕಂಚಿನೆಗಳೂರ ಹೊರಭಾಗದಲ್ಲಿ ಪ್ರಕೃತಿದತ್ತ ಬಂಡೆಗಳ ಕಟ್ಟೆ ಎದುರಾಗುತ್ತದೆ. ಈ ಸ್ಥಳವೇ ಸದ್ಯಕ್ಕೆ ಪ್ರೇಕ್ಷಣಿಕ ಸ್ಥಳವಾಗಿ ಮಾರ್ಪಟ್ಟಿದೆ.
ನೀರಿನ ಹರಿವು ಹೆಚ್ಚಾದಂತೆಲ್ಲ ವಡ್ಡು ಕೋಡಿ ಬಿದ್ದು ಹರಿಯತೊಡಗುತ್ತದೆ. ಆಗ ಜಲಪಾತದ ದೃಶ್ಯಕಾವ್ಯ ಸೃಷ್ಠಿಯಾಗುತ್ತದೆ. ಹೆಚ್ಚುವರಿಯಾದ ನೀರನ್ನು ಮತ್ತೊಂದೆಡೆ ಹೊರಳಿಸುವ ವ್ಯವಸ್ಥೆಯನ್ನು ಧರ್ಮಾ ಯೋಜನೆ ಮಾಡಿದೆ. ಇದಕ್ಕೆ ನರೇಗಲ್ ಪಿಕಪ್ ಎನ್ನಲಾಗುತ್ತದೆ.
ನರೇಗಲ್ ಫಿಡರ್ ಕಾಲುವೆ ಇಲ್ಲಿಂದ ಆರಂಭವಾಗಿ ನರೇಗಲ್ ಮತ್ತು ಸಿಂಗಾಪೂರ ಗ್ರಾಮಗಳ ನಾಲ್ಕು ಕೆರೆಗಳನ್ನು ತುಂಬಿಸುತ್ತದೆ. ಅಲ್ಲದೆ, ಕಾಲುವೆ ನೀರು ಸುತ್ತಲಿನ 500 ಹೆಕ್ಟರ್ ಕೃಷಿ ಭೂಮಿಗೆ ನೀರಾವರಿ ಆಸರೆಯಾಗುತ್ತಿದೆ ಎಂದು ಧರ್ಮಾ ಯೋಜನೆ ಎಇಇ ಗಿರೀಶ ಎನ್. ತಿಳಿಸಿದರು.
ಮಳೆಗಾಲದ ಸಮಯದಲ್ಲಿ ಕಂಚಿನೆಗಳೂರ ವಡ್ಡು ಪಿಕ್‌ನಿಕ್ ಸ್ಪಾಟ್ ಆಗುತ್ತಿದೆ. ಸಾಕಷ್ಟು ಜನ ಇಲ್ಲಿಗೆ ಬರುತ್ತಾರೆ. ನದಿ ತಟದಲ್ಲಿರುವ ಬ್ರಹ್ಮ ಲಿಂಗು ಚನ್ನಬಸವಣ್ಣ ಮಹರಾಜರ ದೇವಸ್ಥಾನ ಬಸವಣ್ಣ ದೇವರ ಗುಡಿ ಇಲ್ಲಿ ಧಾರ್ಮಿಕ ವಾತಾವರಣ ಮೇಳೈಸಲು ಕಾರಣವಾಗಿದೆ.– ರಂಗನಾಥ ಲಂಗಟಿ, ಗ್ರಾಮಸ್ಥರ
ಮಳೆಗಾಲದಲ್ಲಿ ಧರ್ಮಾ ನದಿ ತುಂಬಿ ಹರಿಯುತ್ತಿದ್ದರೆ ಕಂಚಿನೆಗಳೂರ ವಡ್ಡು ವೀಕ್ಷಣೆಗೆ ಮನಸ್ಸು ಹಾತೊರೆಯುತ್ತದೆ. ಮಕ್ಕಳನ್ನು ಕರೆದುಕೊಂಡು ವಡ್ಡಿನ ಭೇಟಿಗೆ ತೆರಳುತ್ತೇವೆ. ಅಪಾರ ಜಲರಾಶಿ ಪ್ರಕೃತಿಯ ಸೌಂದರ್ಯ ಮನಸ್ಸನ್ನು ಮುದಗೊಳಿಸುತ್ತದೆ.– ಸೋಮಶೇಖರ ಕೊತಂಬರಿ, ಹಾನಗಲ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.