ADVERTISEMENT

ಸರ್ವಜ್ಞನ ನಾಡಿನಲ್ಲಿ ಕನ್ನಡ ಕಲರವ

ರಟ್ಟೀಹಳ್ಳಿ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 16:46 IST
Last Updated 28 ಜನವರಿ 2023, 16:46 IST
ರಟ್ಟೀಹಳ್ಳಿ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಸೂರಿನಲ್ಲಿ ಶನಿವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಉದ್ಘಾಟಿಸಿದರು
ರಟ್ಟೀಹಳ್ಳಿ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಸೂರಿನಲ್ಲಿ ಶನಿವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಉದ್ಘಾಟಿಸಿದರು   

ರಟ್ಟೀಹಳ್ಳಿ: ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಭಾನುವಾರ ಮಾಸೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ 7.30ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಾರಾಯಣಪ್ಪ ಗೌರಕ್ಕನವರ, ನಾಡ ಧ್ವಜಾರೋಹಣವನ್ನು ತಾಲ್ಲೂಕು ದಂಡಾಧಿಕಾರಿ ಅರುಣಕುಮಾರ ಕಾರಗಿ, ಪರಿಷತ್ತಿನ ಧ್ವಜಾರೋಹಣವನ್ನು ರಾಘವೇಂದ್ರ ಎ.ಜಿ. ನೆರವೇರಿಸಿದರು.

ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನದ ಅಧ್ಯಕ್ಷ ದಾನೇಶ ಅಂಗಡಿ ಅವರ ಮೆರವಣಿಗೆಯು ಮಾಸೂರಿನ ಐಕ್ಯ ಮಂಟಪದಿಂದ ಉದ್ಘಾಟನೆಗೊಂಡು ಡೊಳ್ಳು ಕುಣಿತ, ಜಾಂಜಮೇಳ, ವೀರಗಾಸೆ, ಹಲಗೆ, ಸಮಾಳ, ಸ್ಥಬ್ಧಚಿತ್ರಗಳು ಸೇರಿದಂತೆ ವಿವಿಧ ಕಲಾತಂಡ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ವಜ್ಞನ ವೇದಿಕೆಗೆ ತಲುಪಿತು.

ADVERTISEMENT

ವರಕವಿ ಸರ್ವಜ್ಞ ವೇದಿಕೆಯಲ್ಲಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ಸರ್ವಜ್ಞ ನಡೆದಾಡಿದ ನಾಡಿನಲ್ಲಿ ನಾವೆಲ್ಲರು ಸೇರಿರುವುದು ನಮ್ಮ ಪುಣ್ಯದಫಲ, ಸರ್ವಜ್ಞ ತ್ರಿಪದಿಗಳ ಮೂಲಕ ಈ ನಾಡಿನ ಜನತೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕನಕದಾಸರು- ಸಂತ ಶಿಶುನಾಳ ಷರೀಫರು ದಾಸ ಸಾಹಿತ್ಯ ನಮ್ಮ ಜಿಲ್ಲೆಯ ಹೆಮ್ಮೆಯ ಕೊಡುಗೆ. ಸರ್ವಜ್ಞ ಪ್ರಾಧಿಕಾರಕ್ಕೆ ಸರ್ಕಾರ ₹25 ಕೋಟಿ ಘೋಷಣೆ ಈಗಾಗಲೇ ಮಾಡಿದೆ. ಮುಂಬರುವ ಬಜೆಟ್ ನಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ ಎಂದರು.

ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದಾನೇಶ ಅಂಗಡಿ ಮಾತನಾಡಿ, ಕನ್ನಡ ಭಾಷೆ, ನಾಡು, ನುಡಿ ಸಂರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸರ್ಕಾರ ಹೆಚ್ಚಿನ ಪ್ರಾಧ್ಯಾನತೆ ನೀಡಬೇಕು. ಇಲ್ಲಿನ ನೆಲ, ಜಲ, ಪ್ರೀತಿಸುವಂತ ಮನಸ್ಸುಗಳು ಒಂದಾಗಿ ಕನ್ನಡಾಭಿಮಾನ ಬೆಳಸಿಕೊಳ್ಳಬೇಕು ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಷರಿಷತ್ತು ಅಧ್ಯಕ್ಷ ರಾಘವೇಂದ್ರ ಎ.ಜಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾನ್ನಿಧ್ಯವನ್ನು ತಿಪ್ಪಾಯಿಕೊಪ್ಪ ಮಠದ ವಿರೂಪಾಕ್ಷ ಸ್ವಾಮೀಜಿ, ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲಿಂಗಯ್ಯ ಹಿರೇಮಠ ವಹಿಸಿದ್ದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿದರು. ತಹಶೀಲ್ದಾರ್‌ ಅರುಣಕುಮಾರ ಕಾರಗಿ ಪುಸ್ತಕ ಮಳಗಿ, ಮಾಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಾವ್ಯ ಹಿತ್ತಲಮನಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು.

ವೇದಿಕೆಯಲ್ಲಿ ಟಿಎಪಿಸಿಎಂಎಸ್‌ ಅಧ‍್ಯಕ್ಷ ಎಸ್.ಎಸ್.ಪಾಟೀಲ, ರಾಜ್ಯ ಸಾಂಬಾರು ಮಂಡಳಿ ಅಧ್ಯಕ್ಷ ಎನ್.ಎಂ. ಈಟೇರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ, ಜೆ.ಪಿ. ಪ್ರಕಾಶಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಧರ್ಮಸ್ಥಳ ಯೋಜನಾಧಿಕಾರಿ ಗಣಪತಿ ನಾಯ್ಕ್, ನಿಕಟಪೂರ್ವ ಕ.ಸಾ.ಪ. ಅಧ್ಯಕ್ಷ ಸೋಮೇಶ್ವರ ಮೇಸ್ತಾ, ಕ.ಸಾ.ಪ. ನಗರ ಘಟಕ ಅಧ್ಯಕ್ಷ ಗಣೇಶ ವೇರ್ಣೇಕರ, ಮಂಜುನಾಥ ತಲ್ಲೂರ ಸ್ವಾಗತಿಸಿದರು. ಕುಮಾರ ಕಬ್ಬಿಣಕಂತಿಮಠ ವಂದಿಸಿದರು. ಎಸ್.ಎಂ. ಕ್ವಾರಡಿ ಮತ್ತು ಶ್ವೇತಾ ಸಜ್ಜನಶೆಟ್ಟರ ನಿರೂಪಿಸಿದರು.

ಕವಿಗೋಷ್ಠಿ, ಮಹಿಳಾ ಗೋಷ್ಠಿ, ಸರ್ವಜ್ಞ ವಿಚಾರ ಗೋಷ್ಠಿಗಳು ಜರುಗಿದವು. ಸಮಾರೋಪ ಸಮಾರಂಭದಲ್ಲಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ, ಸಮಾರಂಭದ ಅಧ್ಯಕ್ಷತೆ ಮಾಜಿ ಶಾಸಕ ಯು.ಬಿ. ಬಣಕಾರ, ಮುಖ್ಯ ಅತಿಥಿಗಳಾಗಿ ಸಮ್ಮೇಳನಾಧ್ಯಕ್ಷ ದಾನೇಶ ಅಂಗಡಿ ಪಾಲ್ಗೊಂಡರು. ಸಮಾರೋಪ ನುಡಿಯನ್ನು ಸಾಹಿತಿ ಜಯಪ್ಪ ಹೊನ್ನಾಳಿ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.