
ರಟ್ಟೀಹಳ್ಳಿ: ‘ಪ್ರಪಂಚದಲ್ಲಿ ಸ್ವಂತ ಲಿಪಿ ಹೊಂದಿರುವ ಏಕೈಕ ಭಾಷೆ ಕನ್ನಡ. ಕನ್ನಡ ವೈಜ್ಞಾನಿಕ ಭಾಷೆಯಾಗಿದೆ’ ಎಂದು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಜಯಪ್ಪ ಹೊನ್ನಾಳಿ ಹೇಳಿದರು.
ತಾಲ್ಲೂಕಿನ ಹಳ್ಳೂರು ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಬಸವಾದಿ ಶರಣರು ತಮ್ಮ ವಚನ ಸಾಹಿತ್ಯ ಮೂಲಕ ಕನ್ನಡ ಭಾಷೆಯನ್ನು ದೈವ ಭಾಷೆಯಾಗಿಸಿದ್ದಾರೆ’ ಎಂದರು.
‘ಪ್ರತಿಯೊಬ್ಬ ಕನ್ನಡಿಗರು ಕನ್ನಡದಲ್ಲಿಯೇ ತಮ್ಮ ಹಸ್ತಾಕ್ಷರ ಮಾಡಬೇಕು. ರಾಜ್ಯೋತ್ಸವ ದಿನದಂದು ಮಾತ್ರ ಕನ್ನಡ ಭಾಷೆ ಆರಾಧಿಸುವ ಬದಲು ವರ್ಷಪೂರ್ತಿ ಆರಾಧನೆಯಾಗಬೇಕು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ‘ಕನ್ನಡ ನಾಡು, ನುಡಿ, ಜಲ, ಸಂರಕ್ಷಣೆಯಲ್ಲಿ ಕನ್ನಡಪರ ಸಂಘಟನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅಪಾರ. ತಾಲ್ಲೂಕಿನ ಮದಗ, ಮಾಸೂರು ಕೆರೆ ಹಾಗೂ ಐತಿಹಾಸಿಕ ಹಳ್ಳೂರು ಗ್ರಾಮವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸುವ ಗುರಿಹೊಂದಲಾಗಿದೆ’ ಎಂದು ತಿಳಿಸಿದರು.
ಕಬ್ಬಿಣಕಂತಿಮಠದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಮನೆ, ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಸಿಕೊಟ್ಟ ಭಾಷೆ ಕನ್ನಡ. ಮಾತೃಭಾಷೆ ನೀಡುವಂತ ಸಂತೋಷ ಬೇರೆ ಭಾಷೆಯಿಂದ ಪಡೆಯಲು ಸಾಧ್ಯವಿಲ್ಲ’ ಎಂದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಮಾಜಿ ಮುಖ್ಯಸಚೇತಕ ಡಿ.ಎಂ. ಸಾಲಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ ಮಾತನಾಡಿದರು.
ಪ್ರಾಚಾರ್ಯ ರಾಘವೇಂದ್ರ ಎ.ಜಿ. ಪ್ರಾಸ್ತವಿಕ ಮಾತನಾಡಿದರು. ಎಸ್.ಬಿ. ಪಾಟೀಲ ಸ್ವಾಗತಿಸಿದರು. ಸಿ.ಎಸ್. ಚಕ್ರಸಾಲಿ ನಿರೂಪಿಸದರು. ಸಂಗೀತಾ ಪಾಟೀಲ, ನಸರುಲ್ಲಾ ದೊಡ್ಡಮನಿ ವಂದಿಸಿದರು.
ತಹಶೀಲ್ದಾರ್ ಶ‍್ವೇತಾ ಅಮರಾವತಿ, ಬಿ.ಎಂ. ಮೆಣಸಿನಕಾಯಿ, ರೈತ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಗ್ರಾ.ಪಂ ಅಧ್ಯಕ್ಷೆ ಲತಾ ಹರಿಜನ, ಪಿಡಿಒ ಭರತಕುಮಾರ ಅಡಿವೇರ, ಸಾಹಿತಿ ನಿಂಗಪ್ಪ ಚಳಗೇರಿ, ಎಂ.ಎಸ್. ಶಶಿಕಲಾಗೌಡ, ಮೆಟ್ಟಿಗೇರಿ ಗೋಪಾಲ, ಇಒ ಎನ್. ರವಿ, ಶಂಭಣ್ಣ ಗೂಳಪ್ಪನವರ, ಕಸಾಪ ನಗರ ಘಟಕ ಅಧ್ಯಕ್ಷ ಗಣೇಶ ವೇರ್ಣೇಕರ, ಬಿಇಒ ಎನ್. ಶ್ರೀಧರ, ಪ್ರಾಚಾರ್ಯ ಎನ್.ಸಿ. ಕಠಾರೆ, ವಸಂತ ದ್ಯಾವಕ್ಕಳವರ, ಕವಿವಿ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ತಲ್ಲೂರ, ನಾಗನಗೌಡ ಕೋಣ್ತಿ ಸೇರಿದಂತೆ ಇತರರು ಇದ್ದರು.
ಮೆರವಣಿಗೆ ಸ್ಮರಣ ಸಂಚಿಕೆ ಬಿಡುಗಡೆ
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಜಯಪ್ಪ ಹೊನ್ನಾಳಿ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾಧ್ಯಮೇಳಗಳೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ಸ್ವಾಗತಿಸಲಾಯಿತು. ಈ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಕೃತಿಗಳ ಲೋಕಾರ್ಪಣೆ ಕೃಷಿ ವಸ್ತು ಪ್ರದರ್ಶನ ಪುಸ್ತಕ ಮಳಿಗೆ ಉದ್ಘಾಟನೆ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ ಚಿತ್ರಕಲಾ ಪ್ರದರ್ಶನ ಮಳಿಗೆ ಉದ್ಘಾಟನೆಯನ್ನು ಗಣ್ಯರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.