ಶಿಗ್ಗಾವಿ: ಖಾಸಗಿ ಶಾಲೆಗಳಲ್ಲಿ ಮತ್ತು ಅಂಗಡಿಗಳ ನಾಮಫಲಕಗಳ ಅಳವಡಿಕೆಯಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಬುಧವಾರ ಸ್ವಾಭಿಮಾನ ಕರ್ನಾಟಕ ರಕ್ಷಣಾ ವೇದಿಕೆಯ ಶಿಗ್ಗಾವಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಶಿರಸ್ತೇದಾರ್ ವಿಲ್ಸನ್ ಅವರಿಗೆ ಮನವಿ ಸಲ್ಲಿಸಿದರು.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ‘ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದ್ದು, ಅದರಿಂದ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತಿದೆ. ಖಾಸಗಿ ಶಾಲೆಗಳ ಮತ್ತು ಅಂಗಡಿಗಳ ಎದುರು ಇಂಗ್ಲಿಷ್ ನಾಮಫಲಕಗಳು ರಾರಾಜಿಸುತ್ತಿವೆ. ಸರ್ಕಾರದ ಆದೇಶವನ್ನು ಮೀರಿ ಇಂಗ್ಲಿಷ್ ನಾಮಫಲಕ ಹಾಕುವುದು ಸರಿಯಲ್ಲ. ಅಂಥವರ ಮೇಲೆ ಕಾನೂನು ಮೂಲಕ ಕ್ರಮ ಕೈಗೊಳ್ಳಬೇಕು. ಅಲ್ಲದೇ ಅಂತಹ ಶಾಲೆ ಮತ್ತು ಅಂಗಡಿಗಳ ಮಾಲೀಕರಿಗೆ ನೋಟಿಸ್ ಕಳುಹಿಸಿ ಕನ್ನಡ ನಾಮಫಲಕ ಹಾಕುವಂತೆ ಎಚ್ಚರಿಕೆ ನೀಡಬೇಕು. ಇಲ್ಲವಾದಲ್ಲಿ ಕರವೇ ಸಂಘಟನೆಯಿಂದ ಇತರ ಭಾಷೆ ನಾಮಫಲಕ ನಾಶಗೊಳಿಸಿ ಕನ್ನಡ ನಾಮಫಲಕ ಹಾಕುವವರೆಗೆ ಹೋರಾಟ ಮಾಡಲಾಗುವುದು. ಈ ಕುರಿತು ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಗೊಬ್ಬಿ, ರಿಯಾಜ ದೊಡ್ಡಮನಿ, ಮೃತ್ಯುಂಜಯ ಕರಿಯಜ್ಜಿ, ಗುರುನಾಥ ಹುಬ್ಬಳ್ಳಿ, ಶಿವಪ್ಪ ಅಳವುಂಡಿ, ರಮೇಶ ಬಾಲಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.