ADVERTISEMENT

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ: ಸಾಕಷ್ಟು ಅನುದಾನ ಬಂದಿಲ್ಲ– ದೊಡ್ಡರಂಗೇಗೌಡ ತರಾಟೆ

ಬೆಳಗಾವಿಯ ಒಂದಂಗುಲ ಬಿಡೆವು; ‘ಡಬಲ್‌ ಎಂಜಿನ್‌’ ನಿರ್ಲಕ್ಷ್ಯ: ಅಧ್ಯಕ್ಷರ ನುಡಿ

ಎಸ್.ರಶ್ಮಿ
Published 6 ಜನವರಿ 2023, 20:16 IST
Last Updated 6 ಜನವರಿ 2023, 20:16 IST
ಹಾವೇರಿಯಲ್ಲಿ ಶುಕ್ರವಾರ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕನ್ನಡ ಧ್ವಜ ಹಸ್ತಾಂತರಿಸಿದರು. ಸಚಿವ ಶಿವರಾಮ ಹೆಬ್ಬಾರ್‌, ಶಾಸಕ ಬಿ.ಎಸ್‌. ಯಡಿಯೂರಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಇದ್ದಾರೆ
ಹಾವೇರಿಯಲ್ಲಿ ಶುಕ್ರವಾರ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕನ್ನಡ ಧ್ವಜ ಹಸ್ತಾಂತರಿಸಿದರು. ಸಚಿವ ಶಿವರಾಮ ಹೆಬ್ಬಾರ್‌, ಶಾಸಕ ಬಿ.ಎಸ್‌. ಯಡಿಯೂರಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಇದ್ದಾರೆ   

ಕನಕ–ಶರೀಫ–ಸರ್ವಜ್ಞ ವೇದಿಕೆ (ಹಾವೇರಿ): ‘ಡಬಲ್‌ ಎಂಜಿನ್‌ ಸರ್ಕಾರದ ಅನುಕೂಲಗಳ ಬಗ್ಗೆ ಪದೇಪದೆ ಹೇಳುವ ಸರ್ಕಾರ ಕನ್ನಡಕ್ಕೆ ಮಾಡಿದ್ದೇನು’ ಎಂದು ಪ್ರಶ್ನಿಸಿ, 86ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ದೊಡ್ಡರಂಗೇಗೌಡರು ತರಾಟೆಗೆ ತೆಗೆದುಕೊಂಡರು.

ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣವನ್ನು ಮಾಡುತ್ತ, ಕನ್ನಡ ಶಾಸ್ತ್ರೀಯ ಭಾಷೆಯಾಗಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಕೇಂದ್ರದಿಂದ ಸಾಕಷ್ಟು ಅನುದಾನ ಬಂದಿಲ್ಲ ಎಂಬುದನ್ನು ಉಲ್ಲೇಖಿಸುತ್ತ ಸ್ಪಷ್ಟವಾಗಿ ಮತ್ತು ತರಾಟೆಗೆ ತೆಗೆದುಕೊಳ್ಳುವ ಧ್ವನಿಯಲ್ಲಿಯೇ ಪ್ರಶ್ನಿಸಿದರು.

ತಮಿಳು ಮಾದರಿಯ ನಿದರ್ಶನ ನೀಡಿದ ಅವರು, ‘ಸಂಸ್ಕೃತ ಮತ್ತು ತಮಿಳು ಭಾಷೆಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು ₹40–50 ಕೋಟಿ ಅನುದಾನ ನೀಡಲಾಗಿದೆ. ಕನ್ನಡಕ್ಕೆ ನಾಲ್ಕಾರು ಕೋಟಿಯೂ ದಾಟಿಲ್ಲ, ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದೇವೆ, ಇದು ನಮ್ಮ ಜಡತ್ವದ ಕುರುಹು ಅಲ್ಲವೇನು?’ ಎಂದು ಪ್ರಶ್ನಿಸಿದರು.

ADVERTISEMENT

ಬೆಳಗಾವಿಯ ಒಂದಂಗುಲ ಬಿಡೆವು: ನೆರೆಯ ಮಹಾರಾಷ್ಟ್ರದವರು ಬೆಳಗಾವಿ
ಗಾಗಿ ಮೊಂಡಾಟ ಹಿಡಿದಿದ್ದಾರೆ. ಸಂಯಮವನ್ನು ಕಳೆದುಕೊಳ್ಳದೆಯೇ ನ್ಯಾಯಯುತವಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಧೈರ್ಯ ಸ್ಥೈರ್ಯಕ್ಕೆ ಹೆಸರಾದ ರಾಜಾ ಹುಲಿಯಂತಹ ರಾಜಕಾರಣಿ ಬಿ.ಎಸ್‌.
ಯಡಿಯೂರಪ್ಪ, ಚಾಣಾಕ್ಷ ಮುಖ್ಯ
ಮಂತ್ರಿ ಬಸವರಾಜ ಬೊಮ್ಮಾಯಿ, ಮರಾಠಿಗರು ಸೊಲ್ಲೆತ್ತದಂತೆ ಪರಿಹಾರ ಪಡೆಯಬೇಕು ಎಂದರು.

ಬೆಳಗಾವಿಯ ಒಂದಂಗುಲವನ್ನೂ ಕನ್ನಡಿಗರು ಬಿಡೆವು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಒಂದೇ ತಂತಿಯಲ್ಲಿರುವಂಥವು. ಈ ತಂತು ಮೂರಾಗದಂತೆ ಶ್ರಮಿಸಲಾಗುವುದು. ಕಾಸರಗೋಡಿನ ಕನ್ನಡಿಗ ಮಕ್ಕಳು ಮಲಯಾಳಂ ಕಲಿಯಬೇಕಾಗಿದೆ. ಅಲ್ಲಿ ಕನ್ನಡ ಶಾಲೆಗಳನ್ನು ತೆರೆಯಬೇಕು. ಕರ್ನಾಟಕದಲ್ಲಿ ಮುಚ್ಚಿರುವ ನೂರು ಕನ್ನಡ ಮಾಧ್ಯಮದ ಶಾಲೆಗಳನ್ನು ಮತ್ತೆ ತೆರೆಯಬೇಕು. ತಮ್ಮ ಶಾಲೆಯೆಂಬ ಮಮತೆ ಇರುವ ಸಾಕಷ್ಟು ಕನ್ನಡಿಗರಿದ್ದಾರೆ. ಜನಪ್ರತಿನಿಧಿಗಳೂ ಮೂರು ಶಾಲೆಗಳನ್ನು ದತ್ತು ಪಡೆದರೂ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಕನ್ನಡ ಪರ ಹೋರಾಟಗಾರರ ಕುರಿತು ಕರುಣೆ ಇರಲಿ: ಸರ್ಕಾರವು ಕನ್ನಡ ಪರ ಹೋರಾಟಗಾರರನ್ನು ಜೈಲಿಗಟ್ಟುವ ಕ್ರಮ ಕೈಬಿಡಬೇಕು. ಅವರೇನು ಉಗ್ರವಾದಿಗಳಲ್ಲ, ಕನ್ನಡಮ್ಮನ ಹಿತಕ್ಕಾಗಿ, ಭುವನೇಶ್ವರಿಯ ಕಾಳಜಿಗಾಗಿ ಹೋರಾಟಕ್ಕೆ ಇಳಿದವರು. ಅಭಿಮಾನದಿಂದ ವ್ಯಗ್ರರಾದವರು. ಅವರ ಕುರಿತು ಅಂತಃಕರುಣೆಯಿಂದ ನೋಡಬೇಕು. ಅವರ ಮೇಲಿನ ಪ್ರಕರಣಗಳನ್ನೆಲ್ಲ ವಾಪಸು ಪಡೆಯಿರಿ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಲ್ಲಿ ಕೋರಿದರು.

ಪ್ರಗತಿಪರರಿಗೆ ಪ್ರತ್ಯುತ್ತರ: ‘ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಾತ್ರೆಯೆಂದು ಕರೆದರು, ಜರೆದರು. ಅಂಥವರಿಗೆಲ್ಲ ಗೊತ್ತಿರಲಿ, ಸಂತೆಯಿರದೆ ಬದುಕು ಸಾಗದು, ಜಾತ್ರೆಗಳಿರದೆ ಸಹಬಾಳ್ವೆ ಕಲಿಯಲಾಗದು. ಇದು ಜಾತ್ರೆಯೇ ಹೌದು. ಕನ್ನಡದ ಹಿತಚಿಂತನೆಗೆ ನೆರೆದ ಜಾತ್ರೆ ಇದು. ಕನ್ನಡ ನುಡಿ, ಗಡಿಗಾಗಿ ಮಥಿಸುವ ಜಾತ್ರೆ ಇದು. ಇದನ್ನು ಬಹಿಷ್ಕರಿಸುವುದು ಕನ್ನಡತನವಲ್ಲ’ ಎಂದೂ ಹೇಳಿದರು.

ಪುಸ್ತಕೋದ್ಯಕ್ಕೆ ಪ್ರೋತ್ಸಾಹ: ಕನ್ನಡವನ್ನು ಬೆಳೆಸಲು ಪುಸ್ತಕೋದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಬೇಕು. ಕೇವಲ 300 ಪುಸ್ತಕಕೊಳ್ಳುವ ಬದಲು ಐನೂರು ಪುಸ್ತಕಗಳನ್ನು ಕೊಳ್ಳಬೇಕು. ಅದೇ ವರ್ಷ ಪ್ರಕಾಶಕರಿಗೆ ಹಣ ಪಾವತಿಯಾಗುವಂತೆ ಆಗಬೇಕು ಎಂದು ಅಧ್ಯಕ್ಷ ದೊಡ್ಡರಂಗೇಗೌಡರು ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡರು.

ಹಾಡಿನಿಂದಲೇ ಆರಂಭ

ಕನಕ–ಶರೀಫ–ಸರ್ವಜ್ಞ ವೇದಿಕೆ (ಹಾವೇರಿ): ಶರಣೆಂಬೆ ಗುರುವಿಗೆ/ ಶರಣೆಂಬೆ ಅರಿವಿಗೆ/ ಶರಣೆಂಬೆ ಸಾಹಿತ್ಯ ಸರಸ್ವತಿಗೆ ಎಂದು ಸುಶ್ರಾವ್ಯವಾಗಿ ಜನಪದ ತ್ರಿಪದಿ ಶೈಲಿಯಲ್ಲಿ ಹಾಡುತ್ತಲೇ ದೊಡ್ಡರಂಗೇಗೌಡರು ಅಧ್ಯಕ್ಷೀಯ ಭಾಷಣವನ್ನು ಆರಂಭಿಸಿದರು.

ತಮ್ಮ ಮಾತಿನುದ್ದಕ್ಕೂ ಜನಪದೀಯ ತ್ರಿಪದಿಗಳನ್ನು ಬಳಸುತ್ತ, ‘ಸತ್ಯವೆಂಬುದು ಕಹಿಯಾಗಿರುತ್ತದೆ. ರೂಕ್ಷವಾಗಿರುತ್ತದೆ. ಬಡತನ, ಬರ,.ಅತಿವೃಷ್ಟಿ ಹಿಂಗೆಲ್ಲ ಎಂಥದನ್ನೇ ಅನುಭವಿಸಿದರೂ ಬದುಕಿನ ಪಾಡನ್ನು. ಅಕ್ಕಿ ಕೊಳ್ಳಲು ಮಕ್ಕಳ ಮಾರ್ಯಾಯ ಎಂದು ಜನಪದದ ತಾಯಿ ಹಾಡುತ್ತ ಸಂಕಟ ಹೇಳಿಕೊಳ್ಳುತ್ತಾಳೆ. ಬದುಕಿನ ಕ್ರೌರ್ಯವನ್ನೂ ಸಾಹಿತ್ಯ ಸಹನೀಯಗೊಳಿಸುತ್ತದೆ’ ಎಂದು ಅವರು ಪ್ರತಿಪಾದಿಸುತ್ತಲೇ ಹೋದರು.

ನೆಲ್ಲಕ್ಕಿ ಬೋನವನು ಉಣಲೊಲ್ಲ ನನ್ನ ನಲ್ಲ

ಏಕೊಲ್ಲ, ಇಲ್ಲದದಕ್ಕೆ ಒಲ್ಲ

ಬಡತನದ ಬವಣೆಯನ್ನೂ ಸರಸವಾಗಿ ಹಾಡುವ, ತಿಟ್ಹತ್ತಿ ತಿರುಗಿ ನೋಡುವ ಹೆಣ್ಣುಮಗಳು ಕಕ್ಕುಲಾತಿಯಿಂದ ತವರು ಮನೆ ಬೆಳೆಯಲಿ ಎಂದು ಹಾರೈಸುತ್ತಾಳೆ ಎಂದು ಹಲವಾರು ದೃಷ್ಟಾಂತಗಳನ್ನು ನೀಡಿದರು.

ಅಧ್ಯಕ್ಷರ ಆಶಯಗಳು

ಸರ್ವಾಧ್ಯಕ್ಷರ ಭಾಷಣದಲ್ಲಿ ದೊಡ್ಡರಂಗೇಗೌಡರು ತಮ್ಮ ಆಶಯಗಳನ್ನು ಕೆಲವೇ ಅಂಶಗಳಲ್ಲಿ ಪ್ರತಿಪಾದಿಸಿದ್ದಾರೆ.

* ಕನ್ನಡ ಶಾಸ್ತ್ರೀಯ ಭಾಷೆಯಾಗಿ ಅಧ್ಯಯನಕ್ಕೆ ಹೆಚ್ಚಿನ ಅನುದಾನ ತರಬೇಕು

* ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಆಗಬೇಕು

* ಕೇಂದ್ರದ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು

* ಶಾಸ್ತ್ರೀಯ ಭಾಷಾ ಅಧ್ಯಯನದ ಉಪಕೇಂದ್ರಗಳ ಸ್ಥಾಪನೆ ಆಗಲಿ

* ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಆಗಲಿ

* ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗ ಆಗಲಿ

* ಶಾಸನಾತ್ಮಕ ಮಾನ್ಯತೆ ಸಿಗಲಿ

* ತಮಿಳುನಾಡಿನ ಯೋಜನೆಗಳ ಮಾದರಿ ಅಧ್ಯಯನ ಆಗಲಿ

ಪುಸ್ತಕೋದ್ಯಮ, ಕಿರುಚಿತ್ರಗಳಿಗೆ ಪ್ರೋತ್ಸಾಹ

ಕನ್ನಡವನ್ನು ಬೆಳೆಸಲು ಪುಸ್ತಕೋದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಬೇಕು. ಕೇವಲ 300 ಪುಸ್ತಕಕೊಳ್ಳುವ ಬದಲು ಐನೂರು ಪುಸ್ತಕಗಳನ್ನು ಕೊಳ್ಳಬೇಕು. ಅದೇ ವರ್ಷ ಪ್ರಕಾಶಕರಿಗೆ ಹಣ ಪಾವತಿಯಾಗುವಂತೆ ಆಗಬೇಕು. ಈ ನೆಲದ ಕಲಾವಿದರಿಗೆ ಅನುಕೂಲವಾಗುವಂತೆ, ಪ್ರೋತ್ಸಾಹ ನೀಡಲು ಪ್ರತಿ ಜಿಲ್ಲೆಯಲ್ಲಿಯೂ ಕಿರುಚಿತ್ರ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಚಿತ್ರಮಂದಿರಗಳನ್ನೂ ತೆರೆಯಬೇಕು ಎಂದು ಅಧ್ಯಕ್ಷ ದೊಡ್ಡರಂಗೇಗೌಡರು ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡರು.

ಎದೆಎದೆಯ ದುಡಿ ಕನ್ನಡ ನುಡಿ; ನಮ್ಮ ಕನ್ನಡ ನುಡಿನಾಡಿನ ಗುಡಿ; ಬಿಡುಕೊಡೆವು ನಮ್ಮ ಗಡಿ,ಆಕ್ರಮಿಸಿದರೆ ಹೊತ್ತಿಕೊಳ್ಳುವುದು ಅಭಿಮಾನದ ಬೆಂಕಿ ಕಿಡಿ

–ದೊಡ್ಡರಂಗೇಗೌಡ, ಅಧ್ಯಕ್ಷರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.