
ಹಾವೇರಿ: ‘ಕನ್ನಡ ಭಾಷೆ ಉಳಿದರೆ ಮಾತ್ರ ಕರ್ನಾಟಕ ಉಳಿಯುತ್ತದೆ. ಕನ್ನಡ ಭಾಷೆ ಉಸಿರಾಡಬೇಕಾದರೆ, ಕನ್ನಡ ಶಾಲೆಗಳು ಉಸಿರಾಡಬೇಕು’ ಎಂದು ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಹೇಳಿದರು.
ಇಲ್ಲಿಯ ವಿನಾಯಕನಗರದ ಉದ್ಯಾನದಲ್ಲಿ ನಾಗರಿಕರ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ‘ಬಾರಿಸು ಕನ್ನಡ ಡಿಂಡಿಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಶಾಲೆಗಳು ಉಸಿರುಗಟ್ಟಿರುವ ಸ್ಥಿತಿಯಲ್ಲಿವೆ. ಕನ್ನಡ ಭಾಷೆ ಉಳಿಯಬೇಕಾದರೆ, ಕನ್ನಡ ಶಾಲೆಗಳಿಗೆ ಆಮ್ಲಜನಕ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಅವರು ಆಗ್ರಹಿಸಿದರು.
‘ಕನ್ನಡ... ಕನ್ನಡ... ಬನ್ನಿ ನಮ್ಮ ಸಂಗಡ’ ಎಂದು ಚಂದ್ರಶೇಖರ ಪಾಟೀಲ ಅವರು ಹೇಳಿದ್ದಾರೆ. ಈಗ ನಮ್ಮ ಸಂಗಡ ಬನ್ನಿ ಎಂದರೆ, ಎಷ್ಟು ಕೊಡುತ್ತೀರಾ ಮುಂಗಡ? ಎನ್ನುವವರೇ ಹೆಚ್ಚಾಗಿದ್ದಾರೆ. ಕನ್ನಡದ ಕೆಲಸ ಕೂಲಿ ಕೆಲಸವಲ್ಲ. ಅದು ಕರುಳಿನ ಕೆಲಸ. ಅದು ದಲ್ಲಾಳಿಯ ಕೆಲಸವಲ್ಲ, ದೀಕ್ಷೆಯ ಕೆಲಸ. ಕನ್ನಡ ಭಾಷೆ ಉಳಿಯುವುದು ಕಥೆ, ಕಾದಂಬರಿಗಳಿಂದಲ್ಲ. ಜನರು ಭಾಷೆಯನ್ನು ಹೆಚ್ಚಾಗಿ ಬಳಸಿದರೆ ಮಾತ್ರ ಕನ್ನಡ ಉಳಿಯುತ್ತದೆ’ ಎಂದರು.
‘ರಾಜ್ಯಕ್ಕೆ ಬರುವ ಬೇರೆ ರಾಜ್ಯದವರು ಅತಿಥಿಯಾಗಿ ಮಾತ್ರ ಬರಬೇಕು. ಯಜಮಾನರಾಗಿ ಬರಬಾರದು. ಬೇರೆ ಭಾಷೆಯವರು ಯಜಮಾನರಾಗಿ ಬಂದರೆ, ಕರ್ನಾಟಕದ ಜನ ಕನ್ನಡ ನೆಲದಲ್ಲೇ ಜೀತದಾಳುಗಳಾಗಿ ಪರಿಭಾಷಿಕರ ಸೇವಕರಾಗಿ ಎರಡನೇ ದರ್ಜೆಯ ಪ್ರಜೆಗಳಾಗಿ ಬಾಳುವ ಸ್ಥಿತಿ ಬರುತ್ತದೆ. ಕನ್ನಡಕ್ಕೆ ಧಕ್ಕೆಯಾಗುವ ಸ್ಥಿತಿ ಬಂದರೆ, ಗೋಕಾಕ ಮಾದರಿ ಚಳವಳಿ ಅನಿವಾರ್ಯವಾಗಲಿದೆ’ ಎಂದು ಹೇಳಿದರು.
ವೇದಿಕೆಯ ಅಧ್ಯಕ್ಷ ನಿಜಲಿಂಗಪ್ಪ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಎಸ್.ಎ ಸಾಣೆ, ಎಸ್.ಬಿ. ಗಂಜಿಗಟ್ಟಿ, ಬಸವರಾಜ ಬೆಲ್ಲದ, ಬಸವಂತಪ್ಪ ಭರಮಗೌಡ್ರ ಇದ್ದರು. ಬಸವರಾಜ ಮರಳಿಹಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಜಗದೀಶ ನಾಗನೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.