ADVERTISEMENT

ಬೇಡ್ತಿ–ವರದಾ ನದಿ ಜೋಡಣೆ: ಸಿಎಂ ಜತೆ ಚರ್ಚಿಸಿ, ನಿರ್ಣಯ- ಶಿವರಾಮ ಹೆಬ್ಬಾರ್‌

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 14:20 IST
Last Updated 12 ಜುಲೈ 2022, 14:20 IST
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌   

ಹಾವೇರಿ: ‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಬಗ್ಗೆ ನಾನು ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿ ಜತೆ ವಿಶೇಷ ಸಭೆ ನಡೆಸಿ, ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ, ಸಮಂಜಸವಾದ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಉತ್ತರ ಕನ್ನಡ ಮತ್ತು ಹಾವೇರಿಯಲ್ಲಿ ಯೋಜನೆಯ ಪರ ಮತ್ತು ವಿರುದ್ಧ ಹೋರಾಟಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಪಶ್ಚಿಮ ಘಟ್ಟದ ಸಂರಕ್ಷಣೆ ಒಂದು ಕಡೆ, ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಬೇಕು ಎನ್ನುವುದು ಮತ್ತೊಂದು ಕಡೆಯ ವಾದವಾಗಿದೆ. ಒಂದು ಕಡೆ ನಾನು ಯಲ್ಲಾಪುರ–ಮುಂಡಗೋಡ ಕ್ಷೇತ್ರದ ಶಾಸಕ. ಮತ್ತೊಂದು ಕಡೆ ಈ ಯೋಜನೆಯ ಫಲಾನುಭವಿ ಜಿಲ್ಲೆಯಾದ ಹಾವೇರಿಯ ಜಿಲ್ಲಾ ಉಸ್ತುವಾರಿ ಸಚಿವ. ಹೀಗಾಗಿ ನಾನು ಗೊಂದಲದಲ್ಲಿದ್ದೇನೆ ಎಂದು ಹೇಳಿದರು.

ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳು ಮತ್ತು ಪರಿಸರ ಪ್ರೇಮಿಗಳು, ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ‘ಡಿಪಿಆರ್‌ ರದ್ದತಿ ಸಭೆ’ ಆಯೋಜಿಸಿದ್ದರು. ನಾನು ಆ ಮತಕ್ಷೇತ್ರದ ಜನಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಲೇಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ADVERTISEMENT

ಎರಡೂ ಜಿಲ್ಲೆಗಳಲ್ಲಿ ನಡೆದ ಪರ ಮತ್ತು ವಿರೋಧಿ ಸಭೆಗಳಲ್ಲಿ ಆ ಜಿಲ್ಲೆಗಳ ಮಠಾಧೀಶರು ಭಾಗವಹಿಸಿದ್ದಾರೆ. ಯಾವ ಗುರುಗಳಿಗೂ ಸ್ವಾರ್ಥ ಇಲ್ಲ. ಎಲ್ಲರೂ ಸಾಮಾಜಿಕ ಕಳಕಳಿಯಿಂದಲೇ ಮಾತನಾಡಿದ್ದಾರೆ. ಈ ಯೋಜನೆಯ ಬಗ್ಗೆ ಚರ್ಚೆ ಆರಂಭವಾಗಿದೆ. ನಾನು ವಿಜ್ಞಾನಿಯಲ್ಲ, ತಜ್ಞರು ನೀಡುವ ವೈಜ್ಞಾನಿಕ ವರದಿ ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.